ಚಿಕ್ಕಬಳ್ಳಾಪುರ: ಆತ ಸರ್ಕಾರಿ ಶಾಲಾ ಶಿಕ್ಷಕ (Teacher), ಆತನ ಪತ್ನಿ (wife) ಗೃಹಿಣಿ. ಸುಂದರ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಒಬ್ಬಾಕೆಯನ್ನು ಮದುವೆ ಮಾಡಿಕೊಡಲಾಗಿದೆ. ಇನ್ನೊಬ್ಬ ಮಗಳು ಬಿಎಸ್ಸಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ಇಂಥ ಸುಂದರ ಸಂಸಾರದಲ್ಲಿ ಅದೇನ್ ಆಯಿತೊ ಏನೊ… ಪತ್ನಿ ಮನೆಯಲ್ಲಿ ಶವವಾಗಿ ಪತ್ತೆಯಾದ್ರೆ (murder)… ಆಕೆಯ ಗಂಡ ನಾಪತ್ತೆಯಾಗಿದ್ದಾನೆ! ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನ್ ಈ ಸ್ಟೋರಿ ನೋಡಿ!! ಇದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು (Gauribidanur) ನಗರದ ಗಂಗಾನಗರದಲ್ಲಿ ನಡೆದಿರುವ ಘಟನೆ. ಇದೆ ನಗರದಲ್ಲಿ ಸರ್ಕಾರಿ ಶಾಲಾ ಶಿಕ್ಷಕ 53 ವರ್ಷದ ಕೃಷ್ಣಪ್ಪ ಹಾಗೂ ಆತನ ಪತ್ನಿ ಲಕ್ಷ್ಮಿದೇವಿ ಅನ್ನೊರು ಇದ್ದರು. ಆರ್ಥಿಕವಾಗಿ ಸಾಮಾಜಿಕವಾಗಿ ಚೆನ್ನಾಗಿದ್ದ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಒಬ್ಬಾಕೆಯನ್ನು ಮದುವೆ ಮಾಡಿಕೊಡಲಾಗಿದೆ. ಇನ್ನೊಬ್ಬ ಮಗಳು ಬಿಎಸ್ಸಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ಇನ್ನು ಮೊನ್ನೆ, ಮೇ 19ರಂದು, ಮಕ್ಕಳು ಅಳಿಯ ಬಂಧು ಬಳಗ ಮನೆಗೆ ಬಂದು ಹೋಗಿದ್ದಾರೆ.
ಮನೆಯಲ್ಲಿದ್ದ ಒಡವೆ ವಿಚಾರಕ್ಕೆ ಅಂದೇ ಮಕ್ಕಳ ಮುಂದೆಯೆ ಶಿಕ್ಷಕ ಕೃಷ್ಣಪ್ಪ ಮಚ್ಚಿನಿಂದ ಪತ್ನಿ ಹತ್ಯೆಗೆ ಮುಂದಾಗಿದ್ದ. ಆಗ ಮಕ್ಕಳು ಬಂಧು ಬಳಗ ಎಲ್ಲರೂ ಬುದ್ದಿ ಹೇಳಿ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ. ಆದ್ರೆ ನಿನ್ನೆ ಮನೆಗೆ ಬಂದು ನೋಡಿದ್ರೆ… ಮನೆಯಲ್ಲಿ ಲಕ್ಷ್ಮಿದೇವಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಲೆಗೆ ಬಲವಾಗಿ ಹೊಡೆಯಲಾಗಿದೆ. ಇದ್ರಿಂದ ಮೇ 19ರಂದೇ ಲಕ್ಷ್ಮಿದೇವಿಯ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಗಂಡ ಶಿಕ್ಷಕ ನಾಪತ್ತೆಯಾಗಿದ್ದಾನೆ.
ಇನ್ನು ಶಿಕ್ಷಕ ಕೃಷ್ಣಪ್ಪ ಹಾಗೂ ಲಕ್ಷ್ಮಿದೇವಿ ಮನೆಯಲ್ಲಿ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದು ಮನೆಯ ಸುತ್ತಲು ನೊಣ ಕಾಣ್ತಿತ್ತು. ಇದ್ರಿಂದ ಅನುಮಾನಗೊಂಡ ಸ್ಥಳೀಯರು ಮನೆಯ ಕಿಟಕಿಯಲ್ಲಿ ಇಣಕಿ ನೋಡಿದ್ರೆ… ಲಕ್ಷ್ಮಿದೇವಿಯ ಹೆಣ ಕಾಣಿಸಿದೆ. ತಕ್ಷಣ ಗೌರಿಬಿದನೂರು ನಗರ ಠಾಣೆ ಪೊಲೀಸರು ಹಾಗೂ ದಂಪತಿಯ ಮಕ್ಕಳಿಗೆ ಕರೆ ಮಾಡಿದ್ದಾರೆ. ತಕ್ಷಣ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್ ನಾಗೇಶ್ ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಯ ಮಂಚದ ಬಳಿ ಲಕ್ಷ್ಮಿದೇವಿಯ ಶವ ಬಿದ್ದಿದ್ದು, ತಲೆಗೆ ಆಯುಧದಿಂದ ಹೊಡೆಯಲಾಗಿದೆ. ಮಂಚದ ಮೇಲೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಸಾಲಗಾರರ ಕಾಟದಿಂದ ಆತ್ಮಹತ್ಯೆ ಎಂದು ಬರೆಯಲಾಗಿದೆ. ಆದ್ರೆ ಡೆತ್ ನೋಟ್ ನಕಲಿಯಾಗಿದ್ದು, ಅದರಲ್ಲಿರುವ ಅಕ್ಷರಗಳು ತಮ್ಮ ತಂದೆಯದು ಎಂದು ಅವರ ಮಕ್ಕಳಾದ ಲಿಖಿತಾ ಹಾಗೂ ಲೀಲಾ ಗುರ್ತಿಸಿದ್ದಾರೆ. ಮತ್ತೊಂದೆಡೆ ಮೃತಳ ಗಂಡ ಕೃಷ್ಣಪ್ಪನ ಪೋನ್ ಮಂಚದ ಮೇಲೆ ಇದ್ದು, ಆತ ನಾಪತ್ತೆಯಾಗಿದ್ದಾನೆ. ಗಂಡ ಹೆಂಡಿರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಅನುಮಾನ ವ್ಯಕ್ತವಾಗಿದೆ.
ಮತ್ತಷ್ಟು ಓದಿ: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು; ಮುಗ್ಧ ಬಾಲಕಿ ಸಾವಿಗೆ ಯಾರು ಹೊಣೆ?
ಅಸಲಿಗೆ ಸರ್ಕಾರಿ ಶಾಲಾ ಶಿಕ್ಷಕ ಕೃಷ್ಣಪ್ಪ ಮಹಾನ್ ಜಿಪುಣನಾಗಿದ್ದು… ಹೆಂಡತಿ ಮಕ್ಕಳ ಖರ್ಚಿಗೂ ಹಣ ಕೊಡ್ತಿರಲಿಲ್ಲವಂತೆ. ಹೆಂಡತಿ ಹಾಗೂ ಮಕ್ಕಳಿಗೆ ಮಾಡಿಸಿದ್ದ ಚಿನ್ನಾಭರಣಗಳನ್ನು ತಾನೇ ತನ್ನ ಬೀರುವಿನಲ್ಲಿ ಲಾಕ್ ಮಾಡಿಕೊಳ್ತಿದ್ದ. ಹಣವನ್ನಂತೂ ಕೊಡ್ತಿರಲಿಲ್ಲ. ಇದ್ರಿಂದ ಮನೆಯಲ್ಲಿದ್ದ ಒಡೆವೆಗಳ ವಿಚಾರದಲ್ಲಿ ಗಂಡ ಹೆಂಡಿರ ಮಧ್ಯೆ ಜಗಳ ವಿಕೋಪಕ್ಕೆ ಹೋಗಿ… ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸದ್ಯಕ್ಕೆ ಸ್ವತಃ ಶಿಕ್ಷಕ ಕೃಷ್ಣಪ್ಪನ ಮಗಳು, ಲೀಲಾ ಪೊಲೀಸರಿಗೆ ತಂದೆಯ ವಿರುದ್ದ ದೂರು ನೀಡಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಕೃಷ್ಣಪ್ಪ ಬದುಕಿದ್ದಾನೊ ಇಲ್ಲಾ ಸತ್ತಿದ್ದಾನೊ, ಎಲ್ಲಿದ್ದಾನೆ? ಏನ್ ಮಾಡ್ತಿದ್ದಾನೆ? ಏನೂ ಗೊತ್ತಿಲ್ಲ. ಪೊಲೀಸರ ತನಿಖೆ ತೀವ್ರಗೊಂಡಿದೆ.
ವರದಿ: ಭೀಮನಗೌಡ, ಟಿವಿ9, ಚಿಕ್ಕಬಳ್ಳಾಫುರ
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 24 May 23