AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi News: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು; ಮುಗ್ಧ ಬಾಲಕಿ ಸಾವಿಗೆ ಯಾರು ಹೊಣೆ?

ಆಕೆ ಶಾಲೆ ರಜೆ ಇದ್ದ ಹಿ‌ನ್ನೆಲೆ ಎಂಟು ದಿನಗಳ ಹಿಂದೆಯಷ್ಟೇ ಸೋದರಮಾವನ ಮನೆಗೆ ಬಂದಿದ್ದಳು. ಮಹಡಿ ಮೇಲೆ ಆಟವಾಡಲು ಹೋಗಿದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಶೋಧಕಾರ್ಯ ನಡೆಸಿದಾಗ ಪಕ್ಕದ ಮನೆಯ ಮಹಡಿ ಮೇಲೆ ಶವವಾಗಿ ಪತ್ತೆಯಾಗಿದ್ದಳು. ಅಷ್ಟಕ್ಕೂ ಆ ಬಾಲಕಿ ಸಾವಿಗೆ ಕಾರಣವಾದರೂ ಏನು? ಈ ಸ್ಟೋರಿ ನೋಡಿ.

Belagavi News: ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು; ಮುಗ್ಧ ಬಾಲಕಿ ಸಾವಿಗೆ ಯಾರು ಹೊಣೆ?
ಮೃತ ಬಾಲಕಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 24, 2023 | 10:14 AM

ಬೆಳಗಾವಿ: ಮನೆ ಆವರಣದಲ್ಲಿಯೇ ವಿದ್ಯುತ್ ಕಂಬ. ಮನೆಯ ಮಹಡಿ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಹೆಸ್ಕಾಂ(Hescom) ಸಿಬ್ಬಂದಿ. ಕಾರಿನಲ್ಲಿರುವ ಬಾಲಕಿ ಮೃತದೇಹ ತಬ್ಬಿಕೊಂಡು ಕಣ್ಣೀರಿಡುತ್ತಿರುವ ಕುಟುಂಬಸ್ಥರು‌. ಈ ಹೃದಯವಿದ್ರಾವಕ ದೃಶ್ಯ ಕಂಡು ಬಂದಿದ್ದು, ಬೆಳಗಾವಿ(Belagavi) ತಾಲೂಕಿನ ಮಚ್ಛೆ ಗ್ರಾಮದಲ್ಲಿ. ಹೌದು ಈ ಫೋಟೋದಲ್ಲಿರುವ ಮುದ್ದಾದ ಬಾಲಕಿ ಹೆಸರು ಮಧುರಾ ಮೋರೆ. ಕೇವಲ 13 ವರ್ಷ ವಯಸ್ಸು‌, ಬಾಳಿ ಬದುಕಬೇಕಿದ್ದ ಬಾಲೆ ಹೆಣವಾಗಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಾಚಿಘಡ ಗ್ರಾಮದವಳಾಗಿದ್ದ ಮಧುರಾ ಮೋರೆ ಶಾಲೆಗೆ ರಜೆಯಿದ್ದ ಕಾರಣ ಮಚ್ಛೆ ಗ್ರಾಮದಲ್ಲಿದ್ದ ಸೋದರಮಾವನ ಮನೆಗೆ ಬಂದಿದ್ದಳು‌. ಎಂಟು ದಿನಗಳ ಹಿಂದೆ ಸೋದರಮಾವ ಪ್ರಸಾದ್ ಮನೆಗೆ ಬಂದಿದ್ದ ಬಾಲಕಿ ಮಧುರಾ, ನಿನ್ನೆ(ಮೇ.22) ಸಂಜೆ 6 ಗಂಟೆ ಸುಮಾರಿಗೆ ಮಹಡಿ ಮೇಲೆ ಒಂದೂವರೆ ವರ್ಷದ ಮಾವನ ಮಗನ ಕರೆದುಕೊಂಡು ಹೋಗಿ ಆಟವಾಡುತ್ತಿದ್ದಳು.

ಈ ವೇಳೆ ಅದೆದಕ್ಕೋ ಗೊತ್ತಿಲ್ಲ ಮಹಡಿ ಮೇಲಿನ ಕಿರಿದಾದ ಕಾಂಪೌಂಡ್ ಮೇಲೆ ಹತ್ತಿದ್ದಾಳೆ. ಆಗ ಮಹಡಿ ಮೇಲೆ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಪಕ್ಕದ ಮನೆಯ ಮಹಡಿ ಮೇಲೆ ಬಿದ್ದಿದ್ದಾಳೆ. ಈ ವೇಳೆ ಮನೆಯವರೆಗೆ ಏನೋ ಸ್ಫೋಟವಾದ ರೀತಿ ಶಬ್ದ ಕೇಳಿಸಿದೆ. ತಕ್ಷಣ ಮಹಡಿ ಮೇಲೆ ಬಂದು ನೋಡಿದಾಗ ಒಂದೂವರೆ ವರ್ಷದ ಮಗು ಮಾತ್ರ ಕಾಣಿಸಿದೆ. ಮಧುರಾ ಕಾಣದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಮೃತದೇಹ ಸಿಕ್ಕಿದೆ. ಹಲವು ವರ್ಷಗಳ ಹಿಂದೆ ಪ್ರಸಾದ್ ಬೋಂಗಾಳೆ ಇಲ್ಲಿ ಸಿಮೆಂಟ್ ಮಳಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು. ಎಂಟು ವರ್ಷಗಳ ಹಿಂದೆ ಮಳಿಗೆಯ ಮೇಲೆ ಮನೆ ಕಟ್ಟಿದ್ದಾರೆ. ಈ ವೇಳೆ ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರಂತೆ. ಆದ್ರೆ, ಯಾವುದೇ ಕ್ರಮ ಕೈಗೊಂಡಿಲ್ಲವಂತೆ‌. ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:Koppal News: ವಿದ್ಯುತ್ ಬಿಲ್ ವಸೂಲಿಗೆ ಹೋದ ಲೈನ್​ಮ್ಯಾನ್​ ಮೇಲೆ ಚಪ್ಪಲಿಯಿಂದ ಹಲ್ಲೆ

ಮಧುರಾ ನನ್ನ ಒಂದೂವರೆ ವರ್ಷದ ಮಗನ ಕರೆದುಕೊಂಡು ಆಟವಾಡಲು ಹೋಗಿದ್ದಳು. ಆಕೆಯ ಬಳಿ ಕಟ್ಟಿಗೆ ಅಥವಾ ಆಟಿಕೆ ಸಾಮಾನುಗಳು ಏನೂ ಇರಲಿಲ್ಲ. ಏಕಾಏಕಿ ಏನೋ ಸ್ಫೋಟವಾದ ರೀತಿ ಸದ್ದು ಕೇಳಿ ಬಂತು. ಆಗ ನಾವು ಹೊರಗೆ ಬಂದು ನೋಡಿದ್ವಿ. ನನ್ನ ಮಗ ಒಬ್ಬನೇ ಇದ್ದ ಮಧುರಾ ಎಲ್ಲಿಯೂ ಕಾಣಲಿಲ್ಲ. ಎಲ್ಲೆಡೆ ಹುಡುಕಾಡಿದಾಗ ಕಾಂಪೌಂಡ್ ಕೆಳಗೆ ಬಿದ್ದಿದ್ದಳು‌. ಆಗ ಹೋಗಿ ನೋಡಿದಾಗ ಅವಳು ಮೃತಪಟ್ಟಿದ್ದಳು. ಒಂದೂವರೆ ವರ್ಷದ ಹಿಂದೆ ನನಗೂ ಸಹ ಶಾಕ್ ಹೊಡೆದಿತ್ತು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಮನೆ ಕಟ್ಟದಂತೆ ಮೊದಲೇ ನೋಟಿಸ್ ನೀಡಿದ್ವಿ ಎಂದ ಹೆಸ್ಕಾಂ

ಇನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನೆರವೇರಿತು. ಬಳಿಕ ಕಾರಿನಲ್ಲಿ ಮೃತದೇಹವನ್ನು ಸ್ವಗ್ರಾಮ ಮಾಚಿಘಡಗೆ ಕಾರಿನಲ್ಲಿ ಸ್ಥಳಾಂತರಿಸಿದರು‌.‌ ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇನ್ನು ಘಟನಾ ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಕರಾದ ರೇಣುಕಾ, ಹೆಸ್ಕಾಂ ಸೆಕ್ಷನ್ ಆಫೀಸರ್ ಐ.ಡಿ.ಲೋಬೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಈ ವೇಳೆ ಮಾತನಾಡಿದ ಹೆಸ್ಕಾಂ ಸೆಕ್ಷನ್ ಆಫೀಸರ್ ‘ವಿದ್ಯುತ್ ತಂತಿ ಹಾದು ಹೋಗಿದ್ದು, ಮನೆ ಕಟ್ಟದಂತೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಮೊದಲೇ ಇಲ್ಲಿ ವಿದ್ಯುತ್ ತಂತಿ ಹಾದು ಹೋಗಿತ್ತು, ಈ ವೇಳೆ ಮಳಿಗೆ ಕಟ್ಟಿಕೊಂಡಿದ್ದರು. ಆಗ ಇಲ್ಲಿ ಮನೆ ಕಟ್ಟದಂತೆ ಹಿಂದಿನ ಸೆಕ್ಷನ್ ಆಫೀಸರ್ ನೋಟಿಸ್ ನೀಡಿದ್ದರು. ಆದರೂ ಮನೆ ಕಟ್ಟಿಕೊಂಡಿದ್ದರು‌‌. ಕುಟುಂಬಸ್ಥರು ವಿದ್ಯುತ್ ತಂತಿ ತೆರವಿಗೆ ಮನವಿ ಮಾಡಿದಾಗ ಎಸ್ಟಿಮೇಟ್ ಮಾಡಿ ಕೊಟ್ಟಿದ್ವಿ ಎಂದಿದ್ದಾರೆ.

ಇದನ್ನೂ ಓದಿ:Crime News, ವಿದ್ಯುತ್​ ಪ್ರವಹಿಸಿ ಗುತ್ತಿಗೆ ನೌಕರ ಸಾವು: ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

ಇನ್ನು ವಿದ್ಯುತ್ ಪರಿವೀಕ್ಷಕರಾದ ರೇಣುಕಾ ಮಾತನಾಡಿ, ‘ವಿದ್ಯುತ್ ತಂತಿ ಸ್ಪರ್ಶಿಸಿ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ, ಈ ಬಗ್ಗೆ ತನಿಖೆ ಮಾಡ್ತಿದೀವಿ. ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಕುಟುಂಬಸ್ಥರು ಯಾವಾಗ ಮನವಿ ಕೊಟ್ಟಿದ್ದರು ಎಂಬುದನ್ನು ನೋಡ್ತೀವಿ. ವಿದ್ಯುತ್ ಕಂಬ ಮನೆ ಕಟ್ಟುವ ಮೊದಲೇ ಅಳವಡಿಕೆ ಮಾಡಲಾಗಿತ್ತು. ನಮ್ಮದು ವಿದ್ಯುತ್ ಪರಿವೀಕ್ಷಣಾ ಇಲಾಖೆ, ನಾವು ತನಿಖೆ ಮಾಡ್ತೀವಿ. ವಿದ್ಯುತ್ ಕಂಬ ತೆರವು ಮಾಡುವ ವಿಚಾರ ಹೆಸ್ಕಾಂಗೆ ಸಂಬಂಧಿಸಿದ್ದು. ತನಿಖೆ ಮಾಡಿ ಹೆಸ್ಕಾಂಗೆ ಸೂಕ್ತ ನಿರ್ದೇಶನ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

ಒಂದೆಡೆ ಬಾಲಕಿ ಸಾವಿಗೆ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಮನೆ ಕಟ್ಟುವ ಮೊದಲೇ ಇಲ್ಲಿ ಮನೆ ಕಟ್ಟದಂತೆ ನೋಟಿಸ್ ನೀಡಿದ್ವಿ ಎಂದು ಹೆಸ್ಕಾಂ ಸಿಬ್ಬಂದಿ ಸಬೂಬು ನೀಡುತ್ತಿದ್ದಾರೆ. ಆದ್ರೆ, ಇದೆಲ್ಲದರ ಮಧ್ಯೆ ತನ್ನದಲ್ಲದ ತಪ್ಪಿಗೆ 13 ವರ್ಷದ ಮುಗ್ಧ ಬಾಲಕಿ ಮಧುರಾ ಉಸಿರು ಚೆಲ್ಲಿದ್ದು ದುರಂತವೇ ಸರಿ.

ವರದಿ: ಮಹಾಂತೇಶ ಕುರಬೇಟ್, ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ