Belagavi BJP: ಒಡೆದ ಮನೆಯಂತಾದ ಬೆಳಗಾವಿ ಜಿಲ್ಲಾ ಬಿಜೆಪಿ? ಕುಂದಾನಗರಿಯಲ್ಲಿ ಪಕ್ಷ ಮುನ್ನಡೆಸೋರು ಯಾರು?
ಒಡೆದ ಮನೆಯಂತಾಗಿರುವ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಈಗ ನಾಯಕತ್ವದ ಕೊರತೆ ಎದ್ದು ಕಾಣ್ತಿದೆ. ಮುಂ.ದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮುನ್ನಡೆಸೋರು ಯಾರು ಎನ್ನುವುದು ನಾಯಕರಿಗೆ ಟೆನ್ಷನ್ ಶುರುವಾಗಿದೆ.
ಬೆಳಗಾವಿ: ವಿಧಾನಸಭೆ ಚುನಾವಣೆ (Karnataka Assembly Elections 2023) ಬಿಜೆಪಿ ಮಕಾಡೆ ಮಲಗಿದ್ದು, ಇದರ ಬೆನ್ನಲ್ಲೇ ಇದೀಗ ಬಿಜೆಪಿ (BJP) ರಾಜ್ಯಾಧ್ಯಕ್ಷ ಬದಲಾವಣೆ ಹಾಗೂ ವಿರೋಧ ಪಕ್ಷ ನಾಯಕ ಯಾರು ಎನ್ನವ ಬಗ್ಗೆ ಕೇಸರಿ ಪಾಳಯದಲ್ಲಿ ಚರ್ಚೆಗಳು ನಡೆದಿವೆ. ಮತ್ತೊಂದೆಡೆ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿಯಲ್ಲಿ(Belagavi) ಕಾಂಗ್ರೆಸ್ (Congress)ಪಾರುಪತ್ಯ ಮೆರೆದಿದೆ. ಜಿಲ್ಲೆಯಲ್ಲಿ 15 ಕ್ಷೇತ್ರ ಗೆದ್ದು ತರುತ್ತೇನೆ ಎಂದಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಈಗ ಸೈಲೆಂಟ್ ಆಗಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಾರಥಿ ಯಾರಾಗುತ್ತಾರೆ ಎಂಬುವುದೇ ದೊಡ್ಡ ಸವಾಲಾಗಿದೆ.
ಕುಂದಾನಗರಿಯಲ್ಲಿ ಬಿಜೆಪಿ ಮುನ್ನಡೆಸೋರು ಯಾರು?
ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಜಿಲ್ಲೆಯಲ್ಲಿ ಹದಿನೈದು ಕ್ಷೇತ್ರ ಗೆಲ್ಲುತ್ತೇವೆ ಎಂದು ಹಠಕ್ಕೆ ಬಿದ್ದು ಆಪ್ತರಿಗೆ ಟಿಕೆಟ್ ಕೊಡಿಸಿದ್ದ ರಮೇಶ್ ಜಾರಕಿಹೊಳಿ ಈಗ ಸೈಲೆಂಟ್ ಆಗಿದ್ದಾರೆ. ಉಳಿದಂತೆ ಈ ಬಾರಿ ಗೆದ್ದು ಬಂದ ನಾಯಕರು ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇನ್ನು ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಬಲ ತುಂಬುತ್ತಿದ್ದ ಸುರೇಶ್ ಅಂಗಡಿ, ಉಮೇಶ್ ಕತ್ತಿ ಈಗಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಮನೆ ಸೇರಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಇದಲ್ಲದೆ ಲೋಕಸಭೆ ಚುನಾವಣೆ ಕೂಡ ಹತ್ತಿರದಲ್ಲೇ ಇದೆ.. ಈ ಮಧ್ಯೆ ಬೆಳಗಾವಿ ಜಿಲ್ಲಾ ಬಿಜೆಪಿಯ ಸಾರಥಿ ಯಾರಾಗ್ತಾರೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ಒಡೆದ ಮನೆಯಂತಾದ ಬೆಳಗಾವಿ ಜಿಲ್ಲಾ ಬಿಜೆಪಿ?
ನಮ್ಮದು ಸಾಮೂಹಿಕ ನಾಯಕತ್ವ ಎನ್ನುವ ಜಿಲ್ಲಾ ಬಿಜೆಪಿ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಎಲ್ಲರಿಗೂ ಗೊತ್ತಿರುವ ವಿಚಾರ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅಭಯ್ ಪಾಟೀಲ್ ಅಣ್ಣಾಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿಯಂತ ಘಟಾನುಘಟಿ ನಾಯಕರು ಬಿಜೆಪಿಯಲ್ಲಿದ್ದರೂ ಹೊಂದಾಣಿಕೆ ಕೊರತೆ ಇದೆ. ಜಾರಕಿಹೊಳಿ ಬ್ರದರ್ಸ್ ವರ್ಸಸ್ ಅದರ್ಸ್ ಎಂಬ ಸ್ಥಿತಿ ಇನ್ನೂ ಮುಂದುವರಿದಿದ್ದು ಬಣ ರಾಜಕೀಯಕ್ಕೆ ಬೆಳಗಾವಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬೇಸತ್ತಿದ್ದಾರೆ. ಇತ್ತ ಭಿನ್ನಾಭಿಪ್ರಾಯದಿಂದಲೇ ಪಕ್ಷಕ್ಕೆ ಸೋಲು ಅಂತ ಈರಣ್ಣಾ ಕಡಾಡಿ ಕುಟುಕಿದ್ದಾರೆ.
ಒಟ್ಟಾರೆ ಒಡೆದ ಮನೆಯಂತಾಗಿರುವ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಈಗ ನಾಯಕತ್ವದ ಕೊರತೆ ಎದ್ದು ಕಾಣ್ತಿದೆ. ನಮ್ಮದು ಸಾಮೂಹಿಕ ನಾಯಕತ್ವ ಎನ್ನುವ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಇದೆ. ಇನ್ನಾದ್ರೂ ವೈಯಕ್ತಿಕ ಪ್ರತಿಷ್ಠೆ ಬದಿಗಿತ್ತಿ ಪಕ್ಷಕ್ಕಾಗಿ ಒಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ