ಇದು ಖಾಕಿ ಕಲೆ! ವಿಶ್ವಕವಿ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂ ನಾಟಕ ಪ್ರದರ್ಶಿಸಿ ಸೈ ಎನಿಸಿಕೊಂಡ ಚಿಕ್ಕಬಳ್ಳಾಪುರ ಪೊಲೀಸ್​

| Updated By: ಸಾಧು ಶ್ರೀನಾಥ್​

Updated on: Jan 16, 2024 | 3:43 PM

ಪುರುಷ ಪೇದೆಗಳ ಜೊತೆಗೆ ಕೆಲ ಮಹಿಳಾ ಪೇದೆಗಳು, ಠಾಣೆ ಬರಹಗಾರರು, ಚಾಲಕರು ಹೀಗೆ ಇವರ ಜೊತೆಗೆ ಪೊಲೀಸ್ರ ಕುಟುಂಬ, ಮಕ್ಕಳು-ಮಿತ್ರರು ಸೇರಿ ಸುಮಾರು 20 ದಿನಗಳಲ್ಲಿ ಪೂರ್ಣಾವಧಿ ನಾಟಕಕಾರರಾದ್ರು. ನಿತ್ಯ ಸಂಜೆ ಇಲಾಖೆ ಕೆಲ್ಸ ಮುಗಿಸಿ ಬಿಡುವಿನ ವೇಳೆಯಲ್ಲಿ ಎಚ್ಚೆನ್ ಕಲಾಭವನದಲ್ಲೇ ತರಬೇತಿ ಪಡೆದು ಅತ್ಯುತ್ತಮ ಕಲಾವಿದರೆನಿಸಿಕೊಂಡ್ರು.

ಇದು ಖಾಕಿ ಕಲೆ! ವಿಶ್ವಕವಿ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂ ನಾಟಕ ಪ್ರದರ್ಶಿಸಿ ಸೈ ಎನಿಸಿಕೊಂಡ ಚಿಕ್ಕಬಳ್ಳಾಪುರ ಪೊಲೀಸ್​
ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂ ನಾಟಕ ಪ್ರದರ್ಶಿಸಿದ ಚಿಕ್ಕಬಳ್ಳಾಪುರ ಪೊಲೀಸ್​
Follow us on

ಗೌರಿಬಿದನೂರು: ಬಣ್ಣ, ನಟನೆ, ನಾಟಕ, ಕಲೆ ಇದ್ಯಾವುದರ ಅರಿವೇ ಇಲ್ಲದ ಖಾಕಿ ತೊಟ್ಟ ಪೊಲೀಸ್ರು ಏಕಾಏಕಿ ಮುಖಕ್ಕೆ ಬಣ್ಣಹಚ್ಚಿಕೊಂಡು ವೇದಿಕೆ ಏರಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ನೂರಾರು ಮಂದಿಯು ಹುಬ್ಬೇರಿಸುವ ಹಾಗೆ ನುರಿತ ಕಲಾವಿದರಿಗೇ ಸೆಡ್ಡು ಹೊಡೆಯುವ ರೀತಿಯಲ್ಲಿ ಸೋಮವಾರ ಸಂಜೆ ನಾಟಕ ಪ್ರದರ್ಶನ ನೀಡುವ ಮೂಲಕ ಖಾಕಿಯಲ್ಲೂ ಕಲೆ ಇದೆ ಎಂಬುದನ್ನು ಸಾಕ್ಷೀಕರಿಸಿದರು.

ಗೌರಿಬಿದನೂರಿನ ಡಾ. ಹೆಚ್​ ಎನ್​​ ಕಲಾಭವನದಲ್ಲಿ ವಿಶ್ವಕವಿ ಕುವೆಂಪುರವರ “ಸ್ಮಶಾನ ಕುರುಕ್ಷೇತ್ರಂ” ಸುಮಾರು ಎರಡೂವರೆ ಗಂಟೆಗಳ ನಾಟಕ ಪ್ರದರ್ಶನವಾಯ್ತು. ವಿಶೇಷ ಏನ್ಗೊತ್ತಾ.. ಅಲ್ಲಿ ಜಮಾಯಿಸಿದ್ದ ಯಾರೊಬ್ಬರೂ ಈ ರೀತಿಯಲ್ಲಿ ನಾಟಕ ಮೂಡಿಬರುತ್ತೆ ಎಂಬ ಸಣ್ಣ ನಿರೀಕ್ಷೆಯನ್ನೂ ಹೊಂದಿರಲಿಲ್ಲ. ಹತ್ತಿಪ್ಪತ್ತು ವರ್ಷಗಳಿಂದ ವೃತ್ತಿನಿರತ ನಾಟಕಕಾರರು ಪ್ರದರ್ಶಿಸುವ ರೀತಿಯಲ್ಲಿ ಯಾರೊಬ್ಬರಲ್ಲೂ ವೇದಿಕೆಯ ಅಳುಕಾಗಲಿ, ಉಚ್ಛಾರಣೆಯಲ್ಲಿ ಭಯವಾಗಲಿ ಕಿಂಚಿತ್ತೂ ಕಂಡುಬರಲಿಲ್ಲ.

ಪುರುಷ ಪೇದೆಗಳ ಜೊತೆಗೆ ಕೆಲ ಮಹಿಳಾ ಪೇದೆಗಳು, ಠಾಣೆ ಬರಹಗಾರರು, ಚಾಲಕರು ಹೀಗೆ ಇವರ ಜೊತೆಗೆ ಪೊಲೀಸ್ರ ಕುಟುಂಬ, ಮಕ್ಕಳು-ಮಿತ್ರರು ಸೇರಿ ಸುಮಾರು 20 ದಿನಗಳಲ್ಲಿ ಪೂರ್ಣಾವಧಿ ನಾಟಕಕಾರರಂತಾದ್ರು. ಪ್ರತಿ ನಿತ್ಯ ಸಂಜೆ ನಂತರ ಅದ್ರಲ್ಲೂ ಇಲಾಖೆ ಕೆಲ್ಸ ಮುಗಿಸಿ ಬಿಡುವಿನ ವೇಳೆಯಲ್ಲಿ ಎಚ್ಚೆನ್ ಕಲಾಭವನದಲ್ಲೇ ತರಬೇತಿ ಪಡೆದು ಅತ್ಯುತ್ತಮ ಕಲಾವಿದರೆನಿಸಿಕೊಂಡ್ರು.

ಅದೇನೆ ಇರಲಿ ಹಳೆಗನ್ನಡ ಭಾಷೆಯಲ್ಲಿ ಆಡುಭಾಷೆಗಿಂತ ಚೆನ್ನಾಗಿ ಉಚ್ಚರಿಸಿ ನಾಟಕ ಆಡಿದಾಗ ನೆರೆದಿದ್ದ ಅದೆಷ್ಟೋ ಮಂದಿ ನಿಬ್ಬೆರಗಾಗಿ ನಾಟಕ ವೀಕ್ಷಿಸಿದರು. ಅದ್ರಲ್ಲೂ ಕೌರವನ ಪಾತ್ರದಲ್ಲಿ ಇನ್ಸಪೆಕ್ಟರ್ ಕೆಪಿ ಸತ್ಯನಾರಾಯಣ್ ಅವರ ನಟನೆ ಒಂದು ರೀತಿ ಕಣ್ಣು ಮಂಜು ಬರಿಸುವಂತಿತ್ತು. ಮುಖದಲ್ಲಿನ ಆಕ್ರೋಶ, ಗಡುಸು ದನಿ, ಗಡಚಿಕ್ಕುವ ಧ್ವನಿ ಇವೆಲ್ಲವೂ ಅವರ ದೇಹದಾರ್ಢ್ಯಕ್ಕೆ ಹೇಳಿ ಮಾಡಿಸಿದಂತಿತ್ತು.

Also Read: ತಮಿಳುನಾಡಿನ ಮಂಗಳಮುಖಿಯಿಂದ ಹೈಡ್ರಾಮಾ! ಬೇಸ್ತುಬಿದ್ದ ಚಿಕ್ಕಬಳ್ಳಾಪುರ ಪೊಲೀಸರು ಏನು ಮಾಡಿದರು ಗೊತ್ತಾ?

ಯುದ್ದದ ಹಿಂಸೆ-ಅಹಿಂಸೆ, ಧರ್ಮ-ಅಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊತ್ತಿದ್ದ ಈ ನಾಟಕದ ಪಾತ್ರಧಾರಿಗಳಲ್ಲಿ ನಗರ, ಗ್ರಾಮಾಂತರ, ಮಂಚೇನಹಳ್ಳಿ ಠಾಣೆ ಸಿಬ್ಬಂದಿ ಪ್ರಮುಖವಾಗಿದ್ದರು. ವಿಶೇಷವಾಗಿ ಕುವೆಂಪು ಜೀವನ ಚರಿತ್ರೆ ಆಧಾರದ ಮೇರೆಗೆ ಹಂಪಿ ವಿ.ವಿ.ಯಲ್ಲಿ ಡಾಕ್ಟರೇಟ್ ಪಡೆದಿರುವ ಕೇಂದ್ರ ವಲಯದ ಪೊಲೀಸ್ IG ರವಿಕಾಂತೇಗೌಡ್ರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶಾಸಕರಾದ ಕೆ ಎಚ್​​ ಪುಟ್ಟಸ್ವಾಮಿಗೌಡ್ರು, ಮಾಜಿ ಮಂತ್ರಿ ಶಿವಶಂಕರ ರೆಡ್ಡಿ ಸೇರಿ ಹಲವು ಗಣ್ಯರು, ನಾಗರಿಕರು ಈ ನಾಟಕ ಪ್ರದರ್ಶನಕ್ಕೆ ಸಾಕ್ಷಿಯಾದರು. SP ಡಿ.ಎಲ್. ನಾಗೇಶ್, ಹೆಚ್ಚುವರಿ SP ರಾಜಾಇಮಾಂ ಖಾಸಿಂ, DYSP ಶಿವಕುಮಾರ್ ನಾಟಕವನ್ನು ಪೂರ್ತಿ ವೀಕ್ಷಿಸಿದರು. ನಿರ್ದೇಶಕ ಭಾನುಪ್ರಕಾಶ್ ರವರ ಮಾರ್ಗದರ್ಶನ, ಡಾ.ಕೆ. ರಾಮಕೃಷ್ಣಯ್ಯ, ವಿಶ್ವನಾಥ್ ಅವರ ನಿರ್ದೇಶನ ಮೇಲುಗೈ ಸಾಧಿಸಿತ್ತು. ಸಿದ್ದೇಶ್ ರವರ ಕಲಾ ವಿನ್ಯಾಸ ಸಾರ್ಥಕವಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಇಡೀ ನಾಟಕದ ಎರಡೂವರೆ ಗಂಟೆಯೂ ನೆರದಿದ್ದ ಮಂದಿ ಸ್ಥಳ ಬಿಟ್ಟು ಕದಲದೆ ಹಳೆಗನ್ನಡದ ಈ ನಾಟಕ ವೀಕ್ಷಿಸಿದ್ದು ವಿಶೇಷವಾಗಿತ್ತು. ಕಸಾಪ ತಾಲ್ಲೂಕು ಘಟಕವು ಪೊಲೀಸ್ ಇಲಾಖೆಗೆ ಸಹಕಾರಿಯಾಗಿ, ನಾಟಕದ ಯಶಸ್ಸಿಗೆ ಟೊಂಕಕಟ್ಟಿ ನಿಂತಿತ್ತು.

(ಲೇಖನ: ಡಿ.ಜೆ. ಚಂದ್ರಮೋಹನ್, ಗೌರಿಬಿದನೂರು)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:42 pm, Tue, 16 January 24