Nandi Hills Ropeway: ಸದ್ಯಕ್ಕಂತೂ ಇಲ್ಲ ನಂದಿ ಹಿಲ್ಸ್ ರೋಪ್ ವೇ! ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ, ಅಸಲಿಗೆ ಇನ್ನೂ ಅನುಮತಿಯೆ ಸಿಕ್ಕಿಲ್ಲ!
Dr MC Sudhakar: ಕಳೆದ ಮಾರ್ಚ್ 23 ರಂದು ರೋಪ್ ವೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದ್ರೆ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ. ಸುಧಾಕರ್, ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ್ರು. ಕಾಮಗಾರಿ ಆರಂಭಕ್ಕೆ ಇನ್ನೂ ಮೂಹೂರ್ತ ಕೂಡಿಬಂದಿಲ್ಲ ಎಂದರು.
ಚಿಕ್ಕಬಳ್ಳಾಪುರ, ಅಕ್ಟೋಬರ್ 27: ಜಗದ್ವಿಖ್ಯಾತ ಪ್ರವಾಸಿ ತಾಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮಕ್ಕೆ ಪ್ಯಾಸೆಂಜರ್ ರೋಪ್ ವೇ ನಿರ್ಮಾಣ ಮಾಡಲು ಹಿಂದಿನ ಬಿಜೆಪಿ ಸರ್ಕಾರ, ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೆ ಶಂಕುಸ್ಥಾಪನೆ ಮಾಡಿ, ಭಾರಿ ಪ್ರಚಾರ ಗಿಟ್ಟಿಸಿತ್ತು. ಅಸಲಿಗೆ ಪ್ಯಾಸೆಂಜರ್ ರೋಪ್ ವೇ ಕಾಮಗಾರಿ ಆರಂಭಿಸಲು ಈವರೆಗೂ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಸಿಕ್ಕಿಲ್ಲವೆಂದು ಸ್ವತಃ ಸಚಿವರೊಬ್ಬರು ಇಂದು ಸತ್ಯ ಬಹಿರಂಗ ಮಾಡಿದ್ರು, ಈ ಕುರಿತು ಒಂದು ವರದಿ ಇಲ್ಲಿದೆ.
ಮುಗಿಲೆತ್ತರಕ್ಕೆ ಸದೃಢವಾಗಿ ನಿಂತಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟ. ಬೆಟ್ಟಕ್ಕೆ ಮುತ್ತಿಕ್ಕುವ ಬೆಳ್ಳಿ ಮೋಡಗಳ ಚುಂಬನ. ಒಂದೆಡೆ ತಂಗಾಳಿಯೊಂದಿಗೆ ತೇಲಿ ಬರುವ ಬೆಳ್ಳಿ ಮೋಡಗಳ ಚೆಲ್ಲಾಟ, ಮತ್ತೊಂದೆಡೆ ಚುಮು ಚುಮು ಚಳಿಯ ಕಚಗುಳಿ, ಇಂಥ ರಮಣೀಯ ಪ್ರಕೃತಿ ಸೊಬಗನ್ನು ಹುಡುಕಿಕೊಂಡು ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಗಿರಿಧಾಮಕ್ಕೆ ಬರುತ್ತಾರೆ.
ಆದ್ರೆ ಸಂಚಾರ ದಟ್ಟಣೆಯಿಂದ ಪರದಾಡುವ ದೃಶ್ಯಗಳು ಸಾಮಾನ್ಯವಾದ ಕಾರಣ ಕಳೆದ ಬಿಜೆಪಿ ಸರ್ಕಾರ ವಿಧಾನಸಭೆ ಚುನಾವಣೆ ಮುನ್ನ ಮಾರ್ಚ್ 23, 2023ರಂದು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಿರಿಧಾಮಕ್ಕೆ ಆಗಮಿಸಿ ರೋಪ್ ವೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ರು. ಆದ್ರೆ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ. ಸುಧಾಕರ್, ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ್ರು. ಕಾಮಗಾರಿ ಆರಂಭಕ್ಕೆ ಇನ್ನೂ ಮೂಹೂರ್ತ ಕೂಡಿಬಂದಿಲ್ಲ, ವಿವಿಧ ಇಲಾಖೆಗಳು ಅನುಮತಿ ನೀಡಿಲ್ಲ ಎಂಬ ಕಹಿ ಸತ್ಯವನ್ನು ಬಹಿರಂಗಪಡಿಸಿದರು.
ನಂದಿ ಗಿರಿಧಾಮದಲ್ಲಿ ಪ್ಯಾಸೇಂಜರ್ ರೋಪ್ ವೇ ನಿರ್ಮಾಣ ಮಾಡಲು ರಾಜ್ಯ ಸರ್ಕಾರ, ಡೈನಾಮಿಕ್ಸ್ ರೋಪ್ ವೇ ಅನ್ನೊ ಖಾಸಗಿ ಸಂಸ್ಥೆಯ ಜೊತೆ ಖಾಸಗಿ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದೆ, ಸಂಸ್ಥೆ 93 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ಯಾಸೇಂಜರ್ ರೋಪ್ ವೇ ನಿರ್ಮಾಣ ಮಾಡಬೇಕಿದೆ. 16 ಎಕರೆಯಲ್ಲಿ ಲೋವರ್ ಟರ್ಮಿನಲ್ ಪ್ಲಾಂಟ್ ಸೇರಿದಂತೆ ಗಿರಿಧಾಮದ ಮೇಲೆ ಎರಡು ಎಕರೆಯಲ್ಲಿ ನಿಲ್ದಾಣ ಕಾಮಗಾರಿ ಸೇರಿದಂತೆ 3 ಕೀಲೊ ಮೀಟರ್ ಉದ್ದದ ರೋಪ್ ವೇ ನಿರ್ಮಾಣ ಮಾಡಬೇಕಿದೆ.
ಇದಕ್ಕೆ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಜಮೀನು ಹಾಗೂ ವಿಶೇಷ ಅನುಮತಿ ನೀಡಬೇಕಿದೆ. ಆದ್ರೆ ಇದುವರೆಗೂ ಯಾವುದೆ ಪ್ರಕ್ರಿಯೆಗಳು ಆಗಿಲ್ಲವಂತೆ, ಇದ್ರಿಂದ ಸ್ವತಃ ಸಚಿವರು ಕಾಮಗಾರಿ ಆರಂಭ ಮಾಡುವ ದಿನಾಂಕದ ಗೊತ್ತುಗುರಿ ಹೇಳಲಿಲ್ಲ. ಆದ್ರೆ ಪ್ರವಾಸಿಗರು ಮಾತ್ರ ಇವತ್ತು ನಾಳೆಯೋ ಅಥವಾ ನಾಡಿದ್ದೋ ಯಾವತ್ತೋ ಏನೊ… ಆದಷ್ಟು ಬೇಗ ರೋಪ್ ವೇ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು.
ಒಟ್ನಲ್ಲಿ ಚಿಕ್ಕಬಳ್ಳಾಪುರ-ಕೋಲಾರ ಬಯಲುಸೀಮೆ ಜಿಲ್ಲೆಗಳ ಜನರಿಗೆ ಎತ್ತಿನಹೊಳೆ ಕುಡಿಯುವ ನೀರು ತರಿಸುವ ಯೋಜನೆ ತೋರಿಸಿ ಚುನಾವಣೆಯಲ್ಲಿ ಮಕ್ಮಲ್ ಟೋಪಿ ಹಾಕಿದ ಹಾಗೆ, ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಈಗ ಪ್ರವಾಸಿಗರಿಗೆ ನಂದಿ ಗಿರಿಧಾಮದಲ್ಲಿ ಪ್ಯಾಸೆಂಜರ್ ರೋಪ್ ವೇ ತೋರಿಸಿ ಟೋಪಿ ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಇಲ್ಲಿನ ಪ್ರವಾಸಿಗಳಿಂದ ಕೇಳಿ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Fri, 27 October 23