
ಚಿಕ್ಕಬಳ್ಳಾಪುರ, ಅಕ್ಟೋಬರ್ 12: ಕೇವಲ 3 ತಿಂಗಳಿನ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡ ಮಗಳು ಮನನೊಂದು ತಾನೂ ಸಹ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇನ್ನೂ ವಿದ್ಯಾಭಾಸ ನಡೆಸುತ್ತಿದ್ದ ಸ್ವರ್ಣ(22) ತಂದೆಯ ಸಾವಿನಿಂದ ಮಾನಸಿಕವಾಗಿ ಕುಗ್ಗಿ, ಇಲಿ ಪಾಷಾಣ ಸೇವಿಸಿದ್ದಳು. ವಿಷಯ ತಿಳಿದ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ವರ್ಣ ಸಾವನ್ನಪ್ಪಿದ್ದಾಳೆ.
ಜಿಲ್ಲೆಯ ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ 22 ವರ್ಷದ ಸ್ವರ್ಣ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವಳು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಮೂರು ತಿಂಗಳ ಹಿಂದೆಯಷ್ಟೇ ಸ್ವರ್ಣಳ ತಂದೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ತಂದೆಯ ಸಾವಿನಿಂದ ಸ್ವರ್ಣ ಮಾನಸಿಕವಾಗಿ ಕುಗ್ಗಿದ್ದಳು. ಬದುಕುವ ಧೈರ್ಯ ಕಳೆದುಕೊಂಡಿದ್ದಳು. ಮನನೊಂದ ಸ್ವರ್ಣ ಕಾಲೇಜಿನ ಹಾಸ್ಟೆಲ್ ನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಮನೆಗೆ ಬಂದಿದ್ದ ಸ್ವರ್ಣಳನ್ನು ಆಕೆಯ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಗಳು ಸ್ವರ್ಣ ನಿನ್ನೆ (ಅ.11) ತಡರಾತ್ರಿ ಸಾವನ್ನಪ್ಪಿದ್ದಾಳೆ.
ಒಂದು ಕಡೆ ಗಂಡನನ್ನು ಕಳೆದುಕೊಂಡಿದ್ದ ಸ್ವರ್ಣಳ ತಾಯಿ ಸಂಸಾರ ತೂಗಿಸುವ ಜವಾಬ್ದಾರಿ ಹೊತ್ತಿದ್ದರು. ಮಗಳು ಮತ್ತು ಮಗನ ಮುಖ ನೋಡಿಕೊಂಡು ಜೀವನ ಸಾಗಿಸುತ್ತಿದ್ದರು.ಈಗ ಮಗಳನ್ನು ಕಳೆದುಕೊಂಡಿರುವ ಸ್ವರ್ಣಳ ತಾಯಿಗೆ ದಿಕ್ಕೇ ತೋಚದಂತಾಗಿದೆ. ಅಕ್ಕನ ಸಾವಿನಿಂದ ತಮ್ಮ ಸಹ ಕುಗ್ಗಿ ಹೋಗಿದ್ದು, ತಾಯಿ ಮಗ ಇಬ್ಬರೂ ಆತಂಕಕ್ಕೊಳಗಾಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಮೃತ ಸ್ವರ್ಣ ತಾಯಿ ಬಳಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.