ಕೊತ್ತನೂರಿನಲ್ಲಿ ಪತ್ತೆಯಾದ ಅಸ್ಥಿಪಂಜರ ರಹಸ್ಯ ಬಯಲು; 2 ವರ್ಷದ ಹಿಂದೆ ಕಾಣೆಯಾದ ವ್ಯಕ್ತಿಯದ್ದೇ ಅವಶೇಷ
ಅಕ್ಟೋಬರ್ 4 ರಂದು ಕೊತ್ತನೂರಿನ ಸಮೃದ್ಧಿ ಅಪಾರ್ಟ್ಮೆಂಟ್ ಹತ್ತಿರ ಹತ್ತು ವರ್ಷಗಳಿಂದ ಕಾಮಗಾರಿ ನಿಂತಿದ್ದ ಕಟ್ಟಡದಲ್ಲಿ ಕಾರ್ಮಿಕರು ಶವದ ಅಸ್ಥಿಪಂಜರವನ್ನು ಪತ್ತೆಹಚ್ಚಿದ್ದರು. ಸ್ಥಳದಲ್ಲಿ ಮೃತರು ಬಳಸುತ್ತಿದ್ದ ಹಲ್ಲು ಸೆಟ್ ಸಿಕ್ಕಿದ್ದು, ಇದೇ ಆಧಾರದ ಮೇಲೆ ಪೊಲೀಸರ ತನಿಖೆ ಮುಂದುವರಿದಿತ್ತು. ಈ ಅಸ್ಥಿಪಂಜರ ವು ಸೋಮಯ್ಯ(69) ಎಂಬ ವ್ಯಕ್ತಿಯದ್ದೆಂದು ದೃಢಪಟ್ಟಿದೆ.

ಬೆಂಗಳೂರು, ಅಕ್ಟೋಬರ್ 12: ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾದ ಅಸ್ಥಿಪಂಜರ (Skeleton) ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುಮಾರು ಒಂದು ವಾರದ ತನಿಖೆಯ ನಂತರ ಪೊಲೀಸರು ಮೃತನ ಗುರುತನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಸ್ಥಿಪಂಜರ ಸೋಮಯ್ಯ(69) ಎಂಬ ವ್ಯಕ್ತಿಯದ್ದೆಂದು ದೃಢಪಟ್ಟಿದೆ.
ಸ್ಥಳದಲ್ಲಿ ಸಿಕ್ಕ ಹಲ್ಲು ಸೆಟ್ ಮೂಲಕ ಮೃತರ ಪತ್ತೆ
ಅಕ್ಟೋಬರ್ 4 ರಂದು ಕೊತ್ತನೂರಿನ ಸಮೃದ್ಧಿ ಅಪಾರ್ಟ್ಮೆಂಟ್ ಹತ್ತಿರ ಹತ್ತು ವರ್ಷಗಳಿಂದ ಕಾಮಗಾರಿ ನಿಂತಿದ್ದ ಕಟ್ಟಡದಲ್ಲಿ ಕಾರ್ಮಿಕರು ಶವದ ಅಸ್ಥಿಪಂಜರವನ್ನು ಪತ್ತೆಹಚ್ಚಿದ್ದರು. ಈ ಘಟನೆಯ ನಂತರ ಕೊತ್ತನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಸ್ಥಳದಲ್ಲಿ ಮೃತರು ಬಳಸುತ್ತಿದ್ದ ಹಲ್ಲು ಸೆಟ್ ಸಿಕ್ಕಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ 2020-21ರಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯದ್ದೆಂದು ವೈದ್ಯಕೀಯ ದಾಖಲೆಗಳಿಂದ ದೃಢಪಟ್ಟಿತ್ತು. ಇದೇ ಆಧಾರದ ಮೇಲೆ ಪೊಲೀಸರ ತನಿಖೆ ಮುಂದುವರಿದಿತ್ತು.
ಸೋಮಯ್ಯ ಎಂಬ ವ್ಯಕ್ತಿ 2023ರಲ್ಲಿ ಕಾಣೆಯಾಗಿದ್ದ ಕುರಿತು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪುತ್ರ ಕಿರಣ್ ಕುಮಾರ್ ದೂರು ದಾಖಲಿಸಿದ್ದರು. ಶವ ಪತ್ತೆಯಾದ ಸ್ಥಳದಿಂದ ಸಿಕ್ಕ ಸ್ಟೈಲ್ ಯೂನಿಯನ್ ಬ್ರಾಂಡ್ ಟೀ ಶರ್ಟ್ ಮತ್ತು ಪ್ಯಾರಾಗಾನ್ ಚಪ್ಪಲಿ ಮಿಸ್ಸಿಂಗ್ ವೇಳೆ ಸೋಮಯ್ಯ ಧರಿಸಿದ್ದಂತೆಯೇ ಇದ್ದವು. ಇದರಿಂದ ಇನ್ನಷ್ಟು ಶಂಕಿತರಾದ ಪೊಲೀಸರು ಕಿರಣ್ ಅವರನ್ನು ಕರೆಸಿ ವಸ್ತುಗಳನ್ನು ತೋರಿಸಿದರು.
ಪಾರ್ಥೀವ ಶರೀರವನ್ನು ಅಧಿಕೃತವಾಗಿ ಕುಟುಂಬಕ್ಕೆ ಒಪ್ಪಿಸಿದ ಪೊಲೀಸರು
ಪರಿಶೀಲನೆಯ ನಂತರ ಕಿರಣ್ ಕುಮಾರ್ ಅವರು ಅಸ್ಥಿಪಂಜರ ಹಾಗೂ ಸಿಕ್ಕ ವಸ್ತುಗಳು ತಮ್ಮ ತಂದೆಯದ್ದೇ ಎಂದು ಖಚಿತಪಡಿಸಿದರು. ನಂತರ ಕೊತ್ತನೂರು ಪೊಲೀಸರು ಅಸ್ಥಿಪಂಜರ ವನ್ನು ಅವರ ಕುಟುಂಬಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದರು. ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಂದುವರೆಸುತ್ತಿದ್ದು, ಸೋಮಯ್ಯ ಸಾವಿನ ಹಿನ್ನೆಲೆ ಹಾಗೂ ಅವರು ಕಟ್ಟಡದೊಳಗೆ ಹೇಗೆ ಸಿಕ್ಕಿಹಾಕಿಕೊಂಡರು ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ಥಳೀಯರು ಈ ಘಟನೆಯನ್ನು ಕೇಳಿ ಬೆಚ್ಚಿಬಿದ್ದಿದ್ದು, ಕೊತ್ತನೂರು ಪೊಲೀಸ್ ಠಾಣೆಯ ತನಿಖಾ ತಂಡದ ವೇಗದ ಕಾರ್ಯವನ್ನು ಮೆಚ್ಚಿದ್ದಾರೆ.
ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Sun, 12 October 25




