ಕೋಳಿ ಗೂಡಿನಂತಿರುವ ಶೆಡ್​ನಲ್ಲಿ ವಿದ್ಯಾರ್ಥಿಗಳಿಗೆ ಪಾಠ: ಹೊಸ ಕಟ್ಟಡ ಉದ್ಘಾಟನೆಗೆ ಮಿನಿಸ್ಟ್ರು ಬರ್ತಿಲ್ಲ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 14, 2024 | 6:24 PM

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಬಾಲಕಿಯರ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೊಸ ಕಟ್ಟಡ ಬಳಸದೆ, ಕೋಳಿ ಶೆಡ್‌ನಂತಹ ಬಾಡಿಗೆ ಕಟ್ಟಡದಲ್ಲಿ ಕಲಿಯುತ್ತಿದ್ದಾರೆ. ಹೊಸ ಕಟ್ಟಡದ ಉದ್ಘಾಟನೆ ವಿಳಂಬದಿಂದ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ.

ಕೋಳಿ ಗೂಡಿನಂತಿರುವ ಶೆಡ್​ನಲ್ಲಿ ವಿದ್ಯಾರ್ಥಿಗಳಿಗೆ ಪಾಠ: ಹೊಸ ಕಟ್ಟಡ ಉದ್ಘಾಟನೆಗೆ ಮಿನಿಸ್ಟ್ರು ಬರ್ತಿಲ್ಲ
ಕೋಳಿ ಗೂಡಿನಂತಿರುವ ಶೆಡ್​ನಲ್ಲಿ ವಿದ್ಯಾರ್ಥಿಗಳಿಗೆ ಪಾಠ: ಹೊಸ ಕಟ್ಟಡ ಉದ್ಘಾಟನೆಗೆ ಮಿನಿಸ್ಟ್ರು ಬರ್ತಿಲ್ಲ
Follow us on

ಚಿಕ್ಕಮಗಳೂರು, ನವೆಂಬರ್​ 14: ಹೈಟೆಕ್ ಕಟ್ಟಡ, ಆಟವಾಡಲು ಸುಸಜ್ಜಿತ ಮೈದಾನ ಎಲ್ಲವನ್ನೂ ಹೊಂದಿರುವ ಈ ಸರ್ಕಾರಿ ವಸತಿ ಶಾಲೆಯಲ್ಲಿ ಕಲಿಯಬೇಕಿದ್ದ ಮಕ್ಕಳು (students) ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ತೋಟದೊಳಗಿರುವ ಕೋಳಿ ಶೆಡ್‌ನಂತಿರುವ ಬಾಡಿಗೆ ಕಟ್ಟಡದಲ್ಲಿ ಕಷ್ಟಪಟ್ಟು ಕಲಿಯುತ್ತಿದ್ದಾರೆ. ಈ ಮಕ್ಕಳು ಮಲಗೋದೂ ಅಲ್ಲೇ, ಪಾಠ ಕೇಳೋದೂ ಅಲ್ಲಿಯೇ.

ಮೂಲಭೂತ ಸೌಕರ್ಯ ಸೇರಿದಂತೆ ಸೆಕ್ಯೂರಿಟಿ ಕೂಡ ಇಲ್ಲ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿರುವ ಬಾಲಕಿಯರ ಅಂಬೇಡ್ಕರ್ ವಸತಿ ಶಾಲೆಯ ಸ್ಥಿತಿ ಇದು. 2016 17 ರಿಂದಲೂ ಇದೇ ಶಾಲೆಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಬರೋಬ್ಬರಿ 236 ವಿದ್ಯಾರ್ಥಿಗಳಿರುವ ಈ ವಸತಿ ಶಾಲೆಯಲ್ಲಿ ಹೈಟೆಕ್ ಸೌಲಭ್ಯಗಳಿರಲಿ ಮೂಲಭೂತ ಸೌಕರ್ಯ ಸೇರಿದಂತೆ ಯಾವುದೇ ರೀತಿಯ ಸೆಕ್ಯೂರಿಟಿ ಕೂಡ ಇಲ್ಲದಂತಾಗಿದೆ.

ಇದನ್ನೂ ಓದಿ: ಸರಳ ಮದುವೆ: ಉಳಿದ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ ನವಜೋಡಿ

ಈ ಶಾಲೆಯಲ್ಲಿ ಮಕ್ಕಳಿಗೆ ಹಾಸ್ಟೆಲ್​ ಕೂಡ ಅದೇ. ಶಾಲೆ ಕೂಡ ಅದೇ. ರಾತ್ರಿಯಾದರೆ ಬೆಂಚುಗಳನ್ನೆಲ್ಲಾ ಒಟ್ಟುಗೂಡಿಸಿ ಹಾಸಿಗೆ ಹಾಕಿಕೊಂಡು ಮಲಗಬೇಕು. ಬೆಳಗ್ಗೆ ಎದ್ದ ತಕ್ಷಣ ಮತ್ತೆ ಬೆಂಚುಗಳನ್ನು ಹಾಕಬೇಕು. ಮತ್ತೆ ಕೆಲವು ಮಕ್ಕಳಿಗೆ ಬೆಂಚುಗಳು ಇಲ್ಲ. ಹೀಗಾಗಿ ತಾವು ಮಲಗಲು ಹಾಕಿಕೊಂಡ ಚಾಪೆಯ ಮೇಲೆ ಕೂತು ಪಾಠ ಕೇಳುವ ಪರಿಸ್ಥಿತಿ ಇದೆ.

ಮಕ್ಕಳ ಈ ಪರಿಸ್ಥಿತಿಯನ್ನು ಕಂಡು ಸರ್ಕಾರ ಸುಸಜ್ಜಿತವಾದ ವಸತಿ ಶಾಲೆ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನ ಕೊಟ್ಟು ಅದರಲ್ಲಿ ಹೈಟೆಕ್ ಕಟ್ಟಡವು ಕೂಡ ನಿರ್ಮಾಣವಾಗಿದೆ. ಸರ್ಕಾರ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಬರೋಬ್ಬರಿ ಆರು ತಿಂಗಳುಗಳೆ ಕಳೆದರೂ ಕೂಡ ಲೋಕಾರ್ಪಣೆ ಭಾಗ್ಯ ಮಾತ್ರ ಕೂಡಿಬಂದಿಲ್ಲ. ಕಟ್ಟಡ ಪೂರ್ಣಗೊಂಡಿದ್ದರು ಉದ್ಘಾಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅವರು ಬರಲೆಂದೇ ಅಧಿಕಾರಿಗಳು ಕಾದು ಕುಳಿತಿದ್ದಾರೆ.

ವಸತಿ ಶಾಲೆ ನಿರ್ಮಾಣವಾಗಿದೆ ಉದ್ಘಾಟನೆ ಯಾವಾಗ ಸಾರ್ ಎಂದು ಪೋಷಕರು ಮತ್ತು ಪ್ರಾಂಶುಪಾಲರು ಕೇಳಿದರೆ, ಅಧಿಕಾರಿಗಳಿಂದ ಬರುವ ಉತ್ತರ ಮಾತ್ರ ಮಿನಿಸ್ಟರ್ ಸಿಕ್ಕಿಲ್ಲ, ಮಿನಿಸ್ಟರ್ ಬರುವ ದಿನಾಂಕ ನಿಗದಿಯಾದ ಮೇಲೆ ಉದ್ಘಾಟನೆ ಮಾಡುವುದಾಗಿ ಪ್ರಾಂಶುಪಾಲರಾದ ರಮೇಶ್ ಅವರ ಉತ್ತರವಾಗಿದೆ.

ಇದನ್ನೂ ಓದಿ: ತುಂಬಿ ತುಳುಕುತ್ತಿರುವ ಚಿತ್ರದುರ್ಗದ ಐತಿಹಾಸಿಕ ಜಲಮೂಲಗಳು, ಫೋಟೋಸ್​ ನೋಡಿ

ಸರ್ಕಾರ ಮಕ್ಕಳಿಗಾಗಿ 25 ಕೋಟಿ ರೂ. ವೆಚ್ಚ ಮಾಡಿ 7-8 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿದೆ. ಆದರೆ ಅಧಿಕಾರಿಗಳ ಇಂತಹ ನಡೆಯಿಂದಾಗಿ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವುದರೊಳಗಾದ್ರೂ ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿ ಪಾಠದ ಜೊತೆಗೆ ಆಟೋಟದಲ್ಲೂ ಉತ್ತಮ ಸಾಧನೆ ಮಾಡಬೇಕು ಎನ್ನುವ ವಿದ್ಯಾರ್ಥಿಗಳ ಕನಸು ಶೀಘ್ರವಾಗಿ ಈಡೇರಲಿ ಅನ್ನೋದು ಪೋಷಕರು ಹಾಗೂ ಮಕ್ಕಳ ಒತ್ತಾಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.