ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಮಂಡ್ಯ ಕಾರ್ಮೆಲ್ ಶಿಕ್ಷಣ ಸಂಸ್ಥೆಗೆ ನೋಟಿಸ್
ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಮಂಡ್ಯದ ಕಾರ್ಮೆಲ್ ಶಿಕ್ಷಣ ಸಂಸ್ಥೆಯಲ್ಲಿ ಸೋರಿಕೆಯಾಗಿದ್ದು, ಈ ಸಂಬಂಧ ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರು ಕಾರ್ಮೆಲ್ ಶಿಕ್ಷಣ ಸಂಸ್ಥೆ ಮೇಲೆ ಶಿಸ್ತು ಕ್ರಮಕ್ಕೆ ನೋಟೀಸ್ ಜಾರಿ ಮಾಡಿದ್ದಾರೆ.
ಮಂಡ್ಯ, (ನವೆಂಬರ್ 14): ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಮಧ್ಯವಾರ್ಷಿಕ ಪರೀಕ್ಷೆಗಳ ನಡೆಯುತ್ತಿವೆ. ಆದ್ರೆ, ಇಂದು ನಡೆಯಬೇಕಿದ್ದ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಹೀಗಾಗಿ ಮಂಡ್ಯದ ಕಾರ್ಮೆಲ್ ಶಿಕ್ಷಣ ಸಂಸ್ಥೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಇಂದು (ನವೆಂಬರ್ 14) ನಡೆಯಬೇಕಿದ್ದ ಜೀವಶಾಸ್ತ್ರ ವಿಷಯದ ಪರೀಕ್ಷೆಯನ್ನು ನವೆಂಬರ್ 19ಕ್ಕೆ ಮುಂದೂಡಲಾಗಿದೆ.
ಈ ಸಂಬಂಧ ಮಂಡ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಜಯಶಂಕರಪ್ಪ ಪ್ರತಿಕ್ರಿಯಿಸಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಆಗಿರೋದು ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ ಕಾರ್ಮೆಲ್ ಕಾಲೇಜು ಸಂಸ್ಥೆ ವಿರುದ್ದ ಶಿಸ್ತು ಕ್ರಮಕ್ಕೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ನವೆಂಬರ್ 6 ರಿಂದ ನ.16ರ ವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಇತ್ತು. ಪ್ರಶ್ನೆ ಪತ್ರಿಕೆಯನ್ನ ನೋಡಲ್ ಅಧಿಕಾರಿ ಮೂಲಕ ಹಂಚಿಕೆ ಮಾಡಲಾಗಿದೆ. ಜೀವಶಾಸ್ತ್ರ ಪರೀಕ್ಷಾ ದಿನಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ. ಈ ದಿನ ಜೀವಶಾಸ್ತ್ರ ಪತ್ರಿಕೆ ಎಕ್ಸಾಂ ನಡೆಯಬೇಕಿತ್ತು. ಆದ್ರೆ ಕಾರ್ಮೆಲ್ ವಿದ್ಯಾಸಂಸ್ಥೆಯಲ್ಲಿ ಮೊನ್ನೆಯೇ ಪರೀಕ್ಷೆ ನಡೆಸಲಾಗಿದೆ. ಆದ್ದರಿಂದ ಇಂದು ನಡೆಯಬೇಕಿದ್ದ ಎಕ್ಸಾಂ ಮುಂದೂಡಿದ್ದೇವೆ. ನ.19 ರಂದು ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.