50 ವರ್ಷಗಳ ಬಳಿಕ ಕಾಫಿನಾಡಿನಲ್ಲಿ ಬರಗಾಲದ ಕಾರ್ಮೋಡ; ಕಾಫಿ ಉಳಿಸಿಕೊಳ್ಳಲು ಸ್ಪಿಂಕ್ಲರ್ ಮೊರೆ ಹೋದ ಬೆಳೆಗಾರರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 12, 2023 | 5:28 PM

ಮಳೆಯನಾಡು ಎಂದೇ ಖ್ಯಾತಿ ಪಡೆದಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೇಲೆ ವರುಣದೇವ ಮುನಿಸಿಕೊಂಡಿದ್ದಾನೆ. ಜಿಲ್ಲೆಯಲ್ಲಿ ಪ್ರತಿ ವರ್ಷದ ವಾಡಿಕೆ ಮಳೆಯೂ ಸುರಿಯದೆ ಬರ ಎದುರಾಗಿದ್ದು ಫಸಲಿಗೆ ಬಂದಿರುವ ಕಾಫಿಯನ್ನ ಉಳಿಸಿಕೊಳ್ಳಲು ಬೆಳೆಗಾರರು ಸ್ಪಿಂಕ್ಲರ್ ಮೊರೆ ಹೋಗಿದ್ದಾರೆ..

50 ವರ್ಷಗಳ ಬಳಿಕ ಕಾಫಿನಾಡಿನಲ್ಲಿ ಬರಗಾಲದ ಕಾರ್ಮೋಡ; ಕಾಫಿ ಉಳಿಸಿಕೊಳ್ಳಲು ಸ್ಪಿಂಕ್ಲರ್ ಮೊರೆ ಹೋದ ಬೆಳೆಗಾರರು
ಚಿಕ್ಕಮಗಳೂರು
Follow us on

ಚಿಕ್ಕಮಗಳೂರು, ಸೆ.12: ಈ ಬಾರಿ ರಾಜ್ಯಾದ್ಯಂತ ಬರದ ಛಾಯೆ ಮೂಡಿದೆ. ಹೌದು, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಮುಂತಾದ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಅದರಂತೆ ಪ್ರತಿ ವರ್ಷ ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ‌ ಸುರಿದು ಚಿಕ್ಕಮಗಳೂರು (Chikkamagalur) ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸುತ್ತಿದ್ದ ವರುಣದೇವ ಈ‌ ವರ್ಷ ಮುನಿಸಿಕೊಂಡಿದ್ದಾನೆ. ಪ್ರತಿ ವರ್ಷ ಸುರಿಯುತ್ತಿದ್ದ ವಾಡಿಕೆ ಮಳೆಯೂ ಜಿಲ್ಲೆಯಲ್ಲಿ ಸುರಿದಿಲ್ಲ. ಇದರಿಂದ ಕಾಫಿ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ. ಈಗಾಗಲೇ ಕಾಫಿ ಫಸಲು ಬಂದಿದ್ದು, ಕಾಫಿ ಬೆಳೆ ಜೊತೆ ಕಾಫಿ ತೋಟವನ್ನು ಉಳಿಸಿಕೊಳ್ಳಲು ಬೆಳೆಗಾರರು ಜೆಟ್​ಗಳ ಮೂಲಕ ಸ್ಪಿಂಕ್ಲರ್ ಮಾಡುತ್ತಿದ್ದಾರೆ.

50 ವರ್ಷಗಳ ಬಳಿಕ ಕಾಫಿನಾಡಿಗೆ ಬರಗಾಲ

ಕಾಫಿನಾಡಿನಲ್ಲಿ ಇಂತಹ ಬರಗಾಲದ ಸ್ಥಿತಿ 50 ವರ್ಷಗಳ ಬಳಿಕ‌ ನಿರ್ಮಾಣವಾಗಿದ್ದು. ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಕಾಫಿಯನ್ನು ಉಳಿಸಿಕೊಳ್ಳುವುದೆ ಸವಾಲಾಗಿದೆ. ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಸುಡು ಬಿಸಿಲಿಗೆ ಕಾಫಿ ಗಿಡಗಳಲ್ಲಿ ಬಂದಿರುವ ಫಸಲು ಹಾಳಾಗುವ ಆತಂಕದಲ್ಲಿದ್ದು, ಅದಕ್ಕೋಸ್ಕರ ಕಾಫಿ ಬೆಳೆಗಾರರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಪಿಂಕ್ಲರ್ ಮಾಡುತ್ತಿದ್ದಾರೆ. ಮಳೆ ಸುರಿಯಬೇಕಿದ್ದ ಸಮಯದಲ್ಲಿ ಮಳೆಯಾಗದೆ ಬೆಳೆಗಾರರು ಇದೇ ಮೊದಲ ಬಾರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ತೋಟಗಳಿಗೆ ಸ್ಪಿಂಕ್ಲರ್ ಮಾಡುತ್ತಿದ್ದೇವೆ ಎಂದು ಕಾಫಿ ತೋಟದ ಮ್ಯಾನೇಜರ್ ಯೋಗೇಶ್ ಎಂಬುವವರು ಹೇಳಿದ್ದಾರೆ.

ಇದನ್ನೂ ಓದಿ:ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ, ಮಲೆನಾಡಿನ ಸೊಬಗು! ದನಗಳ ಸಂತೆಯಲ್ಲಿ ಜೋಡೆತ್ತು ಬೆಲೆ ನ್ಯಾನೋ ಕಾರ್​​ ಬೆಲೆಯನ್ನೂ ಮೀರಿಸುತ್ತಿದೆ

ಒಟ್ಟಾರೆ, ಪ್ರತಿ ವರ್ಷ ಧಾರಾಕಾರವಾಗಿ ಮಳೆ‌ಸುರಿದು ಅವಾಂತರ ಸೃಷ್ಟಿಸಿ ಕಾಫಿ ಬೆಳೆಯನ್ನು ನಾಶ ಮಾಡುತ್ತಿದ್ದ ಮಳೆರಾಯ ಈ‌ ವರ್ಷ ಮಳೆ‌ ಸುರಿಸದೆ ಕಾಫಿ ಬೆಳೆಗಾರರನ್ನು ಕಂಗಾಲಾಗಿ ಮಾಡಿದ್ದಾನೆ. ಅದರಂತೆ ರೈತರು ಕೂಡ ಸ್ಪಿಂಕ್ಲರ್ ಮೊರೆ ಹೋಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ