ಬಾಗಲಕೋಟೆ ಜಿಲ್ಲೆಯಲ್ಲಿ ಬರದ ಛಾಯೆ; ಮಳೆಯಿಲ್ಲದೆ ಹಾಳಾಗುತ್ತಿದೆ ಸಾವಿರಾರು ಎಕರೆ ಈರುಳ್ಳಿ

ಅದು ಈರುಳ್ಳಿ ಬೆಳೆಯೋದಕ್ಕೆ ಪ್ರಸಿದ್ಧಿ ಪಡೆದ ಗ್ರಾಮ. ಅಲ್ಲಿ ಪ್ರತಿಶತ 90ರಷ್ಟು ರೈತರು ಈರುಳ್ಳಿ ಬೆಳೆಯುತ್ತಾರೆ. ಎರಡು ಮೂರು ವರ್ಷದ ಹಿಂದೆ ಆ ಗ್ರಾಮದ ಕೆಲ ರೈತರು ಕೋಟಿ ಕೋಟಿ ಲಾಭ ಪಡೆದರೆ. 10 ರಿಂದ 50 ಲಕ್ಷ ಲಾಭ ಪಡೆದವರು ಬಹುತೇಕ ರೈತರಿದ್ದರು. ಆದರೆ, ಇದೀಗ ಅದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಲ್ಲದೆ ಈರುಳ್ಳಿ ಹಾಳಾಗಿ ರೈತರು ಗೋಳಾಡುವಂತಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬರದ ಛಾಯೆ; ಮಳೆಯಿಲ್ಲದೆ ಹಾಳಾಗುತ್ತಿದೆ ಸಾವಿರಾರು ಎಕರೆ ಈರುಳ್ಳಿ
ಬಾಗಲಕೋಟೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 31, 2023 | 7:20 PM

ಬಾಗಲಕೋಟೆ, ಆ.31: ಮಳೆಯಿಲ್ಲದೆ ಕೂದಲೆಳೆಯಂತಾಗಿ ಒಣಗುತ್ತಿರುವ ಈರುಳ್ಳಿ (Onion). ಹಚ್ಚ ಹಸಿರಿನ ಹೊಲದಲ್ಲಿ ಕಲ್ಲುಗಳ ದರ್ಶನ. ಈರುಳ್ಳಿ ಹೊಲದಲ್ಲಿ ಈರುಳ್ಳಿಯನ್ನೇ ದುರ್ಬೀನು ಹಾಕಿ ಹುಡುಕುವ ಸ್ಥಿತಿ. ಈ ಬಗ್ಗೆ ಹೊಲದಲ್ಲಿ ನಿಂತು ವಿವರಣೆ ನೀಡುತ್ತಿರುವ ರೈತರು. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ (Bagalakote) ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ. ಈ ಗ್ರಾಮ ಬಾಗಲಕೋಟೆ ಜಿಲ್ಲೆಯಲ್ಲಿಯೇ ಈರುಳ್ಳಿ ಬೆಳೆಯುವುದಕ್ಕೆ ಹೆಸರಾದ ಗ್ರಾಮ. ಊರಲ್ಲಿ ಪ್ರತಿಶತ 90 ರಷ್ಟು ರೈತರು ಸಾವಿರ ಎಕರೆ ಪ್ರದೇಶದಷ್ಟು ಈರುಳ್ಳಿ ಬೆಳೆಯುತ್ತಾರೆ. ಬೆಳೆದ ಈರುಳ್ಳಿಯನ್ನು ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೆಂಗಳೂರು ಅಷ್ಟೇ ಅಲ್ಲದೇ ಹೊರರಾಜ್ಯಕ್ಕೂ ಮಾರಾಟ ಮಾಡುತ್ತಾರೆ.

ಕಳೆದ ವರ್ಷ ಒಂದು ಕೋಟಿಗೂ ‌ಅಧಿಕ ಲಾಭ ಪಡೆದು ದಾಖಲೆ

ಕಳೆದ ಎರಡು ಮೂರು ವರ್ಷದ ಹಿಂದೆ ಈ ಗ್ರಾಮದಲ್ಲಿ ಕೆಲ ರೈತರು ಒಂದು ಕೋಟಿ ‌ಲಾಭ ಪಡೆದು ದಾಖಲೆ ಮಾಡಿದ್ದಾರೆ. ಆದರೆ, ಈ ವರ್ಷ ಜಿಲ್ಲೆಯಲ್ಲಿನ ಬರದರ್ಶನ ಈ ರೈತರನ್ನು ಕಾಡುತ್ತಿದೆ. ಬಿತ್ತಿದ ಈರುಳ್ಳಿ ಮಳೆಯಿಲ್ಲದ ಹಿನ್ನೆಲೆ ಒಣಗಿ ಹಾಳಾಗುತ್ತಿದೆ. ಹೊಲದಲ್ಲಿ ಕೂದಲೆಳೆಯಂತೆ ಈರುಳ್ಳಿ ಬೆಳೆದಿದ್ದು, ಬಹುತೇಕ ಕಲ್ಲುಗಳೇ ಕಾಣುತ್ತಿವೆ. ಆದ್ದರಿಂದ ನೊಂದ ರೈತರು ಬರ ಜಿಲ್ಲೆ ಎಂದು ಘೋಷಣೆ ಮಾಡಿ ಯೋಗ್ಯ ಪರಿಹಾರ ನೀಡಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರ: ಈರುಳ್ಳಿ ಹರಾಜು ಆರಂಭ, ಈರುಳ್ಳಿ ಖರೀದಿ ಹಾಗೂ ಬೆಲೆ ಬಗ್ಗೆ ಸಚಿವರ ಮಹತ್ವದ ಘೋಷಣೆ, ರೈತರಿಂದ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯ

ಈರುಳ್ಳಿ ಸ್ಥಿತಿ ಹೀಗಿದ್ದಾಗ್ಯೂ ಕಾರ್ಮಿಕರ‌ ಮೂಲಕ ಈರುಳ್ಳಿ ಬದುಕಿಸುವ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ. ಇಂದು ನಾಳೆ ಮಳೆ‌ ಬರಬಹುದು ಎಂಬ ಅಶಾಭಾವನೆಯೊಂದಿಗೆ ಆಕಾಶ ‌ನೋಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಎಲ್ಲ ಕಡೆ ಬರದ ನರ್ತನ ಶುರುವಾಗಿದೆ. ಜಿಲ್ಲೆಯಲ್ಲಿ ಈರುಳ್ಳಿ 27,989 ಹೆಕ್ಟೇರ್ ಬಿತ್ತನೆಯಾಗಬೇಕಿತ್ತು. ಆದರೆ, ಮಳೆ‌ ಕೈ ಕೊಟ್ಟ ಕಾರಣ 20,705 ಹೆಕ್ಟೇರ್ ಬಿತ್ತನೆ ಆಗಿದೆ. ಇದರಲ್ಲಿ ಅರ್ಧದಷ್ಟು ಒಣಬೇಸಾಯ ಇದ್ದು, ಈರುಳ್ಳಿ ಬಹುತೇಕ ಹಾಳಾಗುತ್ತಿದೆ. ಜಿಲ್ಲೆಯಲ್ಲಿ 303 ಎಮ್​ಎಮ್ ಆಗಬೇಕಿದ್ದ ಮಳೆ 216.5 ಎಮ್​ಎಮ್ ಆಗಿದೆ.

ಇನ್ನು ಈ ಗ್ರಾಮದ ರೈತರು ಈರುಳ್ಳಿಗೆ ಬೆಳೆವಿಮೆ ಮಾಡಿಸಿದ್ದು, ವಿಮೆ ಕಂಪನಿ ಅಧಿಕಾರಿಗಳು ಸ್ಥಳ ವೀಕ್ಷಣೆ ‌ಮಾಡಲು ಬರುತ್ತಿಲ್ಲವಂತೆ. ಕೃಷಿ ಅಧಿಕಾರಿಗಳು ಜಿಲ್ಲಾಡಳಿತ ವಿಮಾ ಕಂಪನಿಗಳಿಗೆ ಸೂಚನೆ ನೀಡುವ ಮೂಲಕ ನಮ್ಮ ಬೆಳೆ ವೀಕ್ಷಣೆ ಮಾಡಿ ಯೋಗ್ಯ ವಿಮೆ ಕೊಡಿಸಬೇಕು ಅಂತಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಮಳೆಯಿಲ್ಲದೆ ಎಷ್ಟೋ ಪ್ರದೇಶ ಬಿತ್ತನೆ ಆಗಿಲ್ಲ. ಬಿತ್ತನೆಯಾಗಿ ಅಲ್ಲೊ ಇಲ್ಲೊ ಬೆಳೆದ ಬೆಳೆ ಈಗ ಮಳೆಯಿಲ್ಲದೆ ಒಣಗಿ ಹಾಳಾಗುತ್ತಿದೆ. ಸರಕಾರ ಬರ ಜಿಲ್ಲೆ ಎಂದು ಘೋಷಣೆ ಮಾಡಿ ರೈತರಿಗೆ ಯೋಗ್ಯ ಪರಿಹಾರ ನೀಡಿ ಅನ್ನದಾತರನ್ನು ರಕ್ಷಣೆ ಮಾಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Thu, 31 August 23