Chikkamagaluru News: ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಭಾವನಾತ್ಮಕ ಪತ್ರ ಬರೆದ ಬಳ್ಳಾರಿ ಮಹಿಳೆ
ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಗಿರಿಧಾಮಗಳಿಗೆ ಕುಟುಂಬ ಸಮೇತ ಬಳ್ಳಾರಿ ಮೂಲದ ಮಹಿಳೆ ಭೇಟಿ ನೀಡಿದ್ದ ವೇಳೆ ಶೌಚಾಯಲ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಬಳ್ಳಾರಿ: ಕರ್ನಾಟಕ (Karnataka) ಪ್ರವಾಸಿ ತಾಣಗಳಿಗೆ (Tourist spot) ಹೆಸರುವಾಸಿ. ಪ್ರತಿನಿತ್ಯ ಅಧಿಕ ಸಂಖ್ಯೆಯಲ್ಲಿ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚಿಗೆ ಬಳ್ಳಾರಿಯ (Bellary) ಜಡೆಮ್ಮ ಎಂಬುವರು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬಾಬಾಬುಡನಗಿರಿ (Baba Budangiri), ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮುಂತಾದ ಧಾರ್ಮಿಕ ಗಿರಿಧಾಮಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ್ದ ವೇಳೆ ಅಲ್ಲಿ ಶೌಚಾಲಯ (Toilet) ವ್ಯವಸ್ಥೆ ಇಲ್ಲದಿರುವುದನ್ನು ಕಂಡು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಮ್ಮಂತಹ ಸಾಮಾನ್ಯ ಮಹಿಳೆಯರಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದ್ದಾರೆ. ಸಾಮಾನ್ಯ ಮಹಿಳೆಯರ ನೋವು, ನಿವೇದನೆ ಅವರಿಗೆ ಅರ್ಥವಾಗುತ್ತದೆ ಎಂದು ಜಡೆಮ್ಮ ಹೇಳಿದರು.
ಕೆಲವು ದಿನಗಳ ಹಿಂದೆ, ನಾವು ಕುಟುಂಬ ಸಮೇತ ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಭೇಟಿ ನೀಡಿದ್ದೇವು. ಬಾಬಾಬುಡನ್‌ಗಿರಿಯಲ್ಲಿ ಮೂತ್ರ ವಿಸರ್ಜನೆಗೆ ಒತ್ತಡ ಶುರುವಾದರೂ ಬೆಟ್ಟದ ತುದಿಯಲ್ಲಿ ಎಲ್ಲೂ ಶೌಚಾಲಯಗಳಿಲ್ಲ. ಆ ಒತ್ತಡವನ್ನು ತಡೆದು ಮುಳ್ಳಯ್ಯನಗಿರಿಗೆ ಹೋದೆವು, ಆದರೆ ಅಲ್ಲಿಯೂ ಇರಲಿಲ್ಲ.
ಇದನ್ನೂ ಓದಿ: Chikkamagalur Rains: ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರೀ ಮಳೆ
ಸೀತಾಳಯ್ಯನಗಿರಿಯಲ್ಲಿ ಹುಡುಕಿದೆವು, ಅಲ್ಲಿಯೂ ಶೌಚಾಲಯ ಇರಲಿಲ್ಲ. ಕೊನೆಗೆ ನಾವು ಬಯಲಲ್ಲಿಯೇ ಶೌಚಕ್ಕೆ ಹೋದೆವು ಇದರಿಂದ ನಮಗೆ ಇರಿಸುಮುರಿಸು ಉಂಟಾಗಿದೆ ಎಂದು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಶೌಚಾಲಯದ ಕೊರತೆಯಿಂದ ಮಹಿಳೆಯರ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ಉಂಟಾಗಿದೆ. ಮಹಿಳೆಯರ ದೈಹಿಕ ಸಮಸ್ಯೆಗಳ ಬಗ್ಗೆ ನಿಮಗಿಂತ ಮತ್ತೊಬ್ಬರು ಚೆನ್ನಾಗಿ ಅರಿಯಲು ಸಾಧ್ಯವಿಲ್ಲ. ಇಂತಹ ಸ್ಥಳಗಳಲ್ಲಿ ಒಂದೇ ಒಂದು ಶೌಚಾಲಯವನ್ನು ಹೊಂದಿಲ್ಲದಿರುವುದು ಸಂವಿಧಾನದ 19 ಮತ್ತು 21 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ನಾವು ಶೌಚಾಲಯಗಳ ಬಗ್ಗೆ ಮಾತನಾಡುತ್ತಿದ್ದೇವೆ. ಮಂಗಳ ಗ್ರಹದ ಅಂಗಳ ತಲುಪಿದ ನಾವು ಬಾಬಾಬುಡನ್‌ಗಿರಿ ಮತ್ತಿತರ ಕಡೆ ಶೌಚಾಲಯ ನಿರ್ಮಿಸಿಕೊಳ್ಳದಿರುವುದು ದುರಂತ. ಆದ್ದರಿಂದ ಪ್ರತಿವರ್ಷ ಲಕ್ಷಗಟ್ಟಲೆ ಜನರು ಭೇಟಿ ನೀಡುವ ಈ ಮೂರು ಬೆಟ್ಟಗಳಲ್ಲಿ ಕೂಡಲೇ ಶೌಚಾಲಯ ನಿರ್ಮಾಣಕ್ಕೆ ಆದೇಶ ನೀಡುವಂತೆ ಕೋರುತ್ತೇನೆ. ಶೀಘ್ರದಲ್ಲಿಯೇ ಶೌಚಾಲಯ ನಿರ್ಮಾಣದಿಂದ ಅನೇಕ ಜನರ ಸಂಕಷ್ಟ ದೂರವಾಗಲಿದೆ. ನೀವು ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುತ್ತೀರಿ ಎಂದು ನಾವು ಭಾವಿಸುತ್ತೇನೆ.
ಭಾರತದಲ್ಲಿ ಅತಿಹೆಚ್ಚು ಮಧುಮೇಹ ರೋಗಿಗಳಿದ್ದಾರೆ. ಮಧುಮೇಹ ರೋಗಿಗಳೂ ಹೆಚ್ಚು ಶೌಚಕ್ಕೆ ಹೋಗುತ್ತಾರೆ. ಹೀಗಾಗಿ ಇಲ್ಲಿ ಶೌಚಾಲಯ ನಿರ್ಮಿಸಲು ನೀವು ಆದೇಶ ಹೊರಡಸಿದರೇ ಕರ್ನಾಟಕದ ಜನರು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಜಡೆಮ್ಮ ಅವರು ಈ ಮೂರು ಧಾರ್ಮಿಕ ಬೆಟ್ಟದ ದೇವಾಲಯಗಳು ಲಕ್ಷಾಂತರ ಜನರನ್ನು ಆಕರ್ಷಿಸುತ್ತವೆ. ಪ್ರತಿ ವರ್ಷ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ಅಲ್ಲಿ ಶೌಚಾಲಯದಂತಹ ಮೂಲ ಸೌಕರ್ಯ ನಿರ್ಮಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದು ಹೇಗೆ? ಬಾಬಾಬುಡನ್‌ಗಿರಿಯಲ್ಲಿ ಕೆಲವು ಶೌಚಾಲಯಗಳಿದ್ದು, ಅವುಗಳು ಕಳಪೆ ನಿರ್ವಹಣೆ ಮತ್ತು ಬಳಸಲು ಅಸಾಧ್ಯವಾಗಿವೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಲ್ಲಿ ಒಂದೇ ಒಂದು ಶೌಚಾಲಯವಿಲ್ಲ. ನಾನು ಅಲ್ಲಿ ಎದುರಿಸಿದ ಸಮಸ್ಯೆಯನ್ನು ವಿವರಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಭಾರತದ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದೇನೆ ಮತ್ತು ಈ ಸ್ಥಳಗಳ ಶೌಚಾಲಯಗಳ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಬಹುದು ಎಂದು ನಾನು ಭರವಸೆ ಹೊಂದಿದ್ದೇನೆ ಎಂದರು.
.ಎನ್. ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಮಾತನಾಡಿ, ಬಾಬಾಬುಡನಗಿರಿಯಲ್ಲಿ ಪ್ರತಿ ವರ್ಷ ದತ್ತ ಜಯಂತಿ ಮತ್ತು ಉರುಸ್ ಎಂಬ ಎರಡು ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಲಕ್ಷಾಂತರ ಜನರು ಸೇರುತ್ತಾರೆ. ಸಾಕಷ್ಟು ಶೌಚಾಲಯಗಳಿದ್ದು, ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದಾಗ ತಾತ್ಕಾಲಿಕ ಶೌಚಾಲಯಗಳನ್ನೂ ಅಳವಡಿಸುತ್ತೇವೆ ಎಂದರು.
ಇನ್ನು ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಅರಣ್ಯ ಮತ್ತು ಭದ್ರಾ ವನ್ಯಜೀವಿ ಬಫರ್ ವಲಯ ಪ್ರದೇಶದಲ್ಲಿದ್ದು, ಅಲ್ಲಿ ನಿರ್ಮಾಣಕ್ಕೆ ಅವಕಾಶವಿಲ್ಲ. ಹೀಗಾಗಿ ಅಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲ. ಆದಾಗ್ಯೂ, ಬೆಟ್ಟದ ದೇವಾಲಯಗಳಿಗೆ ಹೋಗುವ ಮಾರ್ಗದಲ್ಲಿ ವಿವಿಧ ಹೋಟೆಲ್‌ಗಳು, ಹೋಂಸ್ಟೇಗಳು ಇವೆ ಮತ್ತು ಪ್ರವಾಸಿಗರು ಆ ಶೌಚಾಲಯಗಳನ್ನು ಉಚಿತವಾಗಿ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ