ಹಿಂದೂಗಳಿಗೆ ಪೂರಕ ತೀರ್ಪು: ಬಿಜೆಪಿ ನಾಯಕರಾದ ಸಿಟಿ ರವಿ, ರವಿಕುಮಾರ್, ಜೀವ್ರಾಜ್ ಸ್ವಾಗತ
ಈ ತೀರ್ಪಿನಿಂದ ಹಿಂದೂಗಳಿಗೆ ಹೆಚ್ಚು ಸಂತೋಷವಾಗಿದೆ. ದತ್ತಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು: ದತ್ತಪೀಠ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಹಿಂದೂಗಳಿಗೆ ಪೂರಕವಾದ ತೀರ್ಪು ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೈಕೋರ್ಟ್ ತೀರ್ಪನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ತೀರ್ಪಿನಿಂದ ಹಿಂದೂಗಳಿಗೆ ಹೆಚ್ಚು ಸಂತೋಷವಾಗಿದೆ. ದತ್ತಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಸತ್ಯಕ್ಕೆ ಯಾವತ್ತೂ ಜಯ ಖಚಿತ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗಳ ಗೌರವ ಎತ್ತಿ ಹಿಡಿದಂತಾಗಿದೆ ಎಂದು ತೀರ್ಪನ್ನು ವಿಶ್ಲೇಷಿಸಿರುವ ಅವರು, ಸಚಿವ ಸಂಪುಟ ಉಪಸಮಿತಿ ನೇಮಿಸಿದ್ದ ತ್ರಿಸದಸ್ಯ ಸಮಿತಿಯೇ ಕಾನೂನುಬಾಹಿರವಾಗಿತ್ತು. ನಾಗಮೋಹನ್‌ದಾಸ್ ಸಮಿತಿ ವರದಿಯನ್ನು ವಜಾಗೊಳಿಸಿರುವ ಹೈಕೋರ್ಟ್ ವಿಶ್ವಹಿಂದೂ ಪರಿಷತ್ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ನ್ಯಾಯಾಂಗದ ಮೇಲಿನ ವಿಶ್ವಾಸ ಇನ್ನಷ್ಟು ವೃದ್ಧಿಸಿದೆ ಎಂದು ಹೇಳಿದ್ದಾರೆ.
ಹಿಂದೂಗಳಿಗೆ ಸಿಕ್ಕ ಜಯ: ರವಿಕುಮಾರ್ ಬಾಬಾಬುಡನ್ಗಿರಿ ಇನಾಂ ದತ್ತಾತ್ರೇಯ ಪೀಠದ ಪೂಜಾ ವಿಧಾನ ವಿಚಾರ 2018ರ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ಇದು ಹಿಂದೂಗಳಿಗೆ ಸಿಕ್ಕ ದೊಡ್ಡ ಜಯವಾಗಿದೆ. ಬೆಂಗಳೂರಿನಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ಡಿ.ಎನ್.ಜೀವರಾಜ್ ಸ್ವಾಗತ ದತ್ತಪೀಠ ಚಳವಳಿಯಲ್ಲಿ ಸಕ್ರಿಯರಾಗಿದ್ದ ಬಿಜೆಪಿ ನಾಯಕ, ಮಾಜಿ ಸಚಿವ ಡಿ.ಎನ್.ಜೀವರಾಜ್ ಸಹ ಹೈಕೋರ್ಟ್ ತೀರ್ಪು ಸ್ವಾಗತಿಸಿದ್ದಾರೆ. ಸುಮಾರು 30 ವರ್ಷಗಳಿಂದ ಧರ್ಮದ ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಇದು ಸಂತೋಷ ಮತ್ತು ಸಂಭ್ರಮದ ದಿನ ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ದತ್ತಾತ್ರೇಯರ ಪಾದುಕೆಗಳು ಮತ್ತು ಅನಸೂಯಾ ದೇವಿಗೆ ಹಿಂದೂ ಅರ್ಚಕರಿಂದ ಪೂಜೆ ನಡೆಯುತ್ತದೆ ಎಂಬುದು ಸಮಾಧಾನದ ವಿಚಾರ. ದತ್ತಪೀಠವು ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ಸುಪರ್ದಿಗೆ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿಯೂ ನ್ಯಾಯಾಲಯದಲ್ಲಿ ಜಯ ಸಿಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
(BJP Leaders CT Ravi DN Jeevaraj and Ravikumar Welcomes High Court Direction on Bababudangiri Dattatreya Peetha)
ಇದನ್ನೂ ಓದಿ: ಬಾಬಾಬುಡನ್ಗಿರಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ: ಹೈಕೋರ್ಟ್ ನಿರ್ದೇಶನ ಸ್ವಾಗತಿಸಿದ ಸುನಿಲ್ಕುಮಾರ್
ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ
Published On - 5:05 pm, Tue, 28 September 21