ಇಂದಿನಿಂದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗುತ್ತಿರುವ ಹಿನ್ನಲೆ ಮಳೆಯಿಂದಾಗಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತವಾಗಿದೆ. ಪರಿಣಾಮ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಈ ಕೆಳಗಿನ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು, ಜು.28: ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಚಿಕ್ಕಮಗಳೂರು (Chikmagalur) ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗುತ್ತಿರುವ ಹಿನ್ನಲೆ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ(Chandradrona Parvata)ದ ಸಾಲಿನಲ್ಲಿ ಗುಡ್ಡ ಕುಸಿತವಾಗಿದೆ. ಪರಿಣಾಮ ರಸ್ತೆ ತೆರವು ಕಾರ್ಯ ಹಿನ್ನೆಲೆ ಇಂದಿನಿಂದ ಚಂದ್ರದ್ರೋಣ ಪರ್ವತಕ್ಕೆ ಜು.31ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೌದು, ಈ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ, ಕೆಮ್ಮಣ್ಣುಗುಂಡಿ, ಸೀತಾಳಯ್ಯನಗಿರಿ ಪ್ರವೇಶಕ್ಕೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದ್ದಾರೆ.
ವೀಕೆಂಡ್ನಲ್ಲಿ ಹೆಚ್ಚಾಗಿ ಹರಿದು ಬರುತ್ತಿದ್ದ ಪ್ರವಾಸಿಗರು
ಚಿಕ್ಕಮಗಳೂರು ಅಂದರೆ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ, ಹೀಗಾಗಿ ಲಕ್ಷಾಂತರ ಜನರು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಜಿಲ್ಲೆಯಲ್ಲಾಗುತ್ತಿರುವ ಮಹಾಮಳೆಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆದರೂ ಪ್ರವಾಸಿಗರು ಇದನ್ನು ಲೆಕ್ಕಿಸದೇ ನೀರಿನ ಜೊತೆ ಸೆಲ್ಫಿ, ರೀಲ್ಸ್ ಹುಚ್ಚಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಚಾರ್ಮಾಡಿ ಘಾಟ್ನಲ್ಲಿ ಪ್ರವಾಸಿಗರು ಅಪಾಯಕಾರಿ ಬಂಡೆ ಮೇಲೇರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಇದು ಕಾಫಿನಾಡು ಚಿಕ್ಕಮಗಳೂರಿನ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೌದು, ಜಿಲ್ಲಾಡಳಿತ ಪ್ರವಾಸಿಗರಿಗೆ ನೀರು ಹರಿಯುತ್ತಿದೆ ಎಂದು ಸುಂದರ ಹಾಗೂ ಅಪಾಯದ ಸ್ಥಳದಲ್ಲಿ ಹುಚ್ಚಾಟ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ. ಆದ್ರೆ, ಪ್ರವಾಸಿಗರು ಮಾತ್ರ ಅದ್ಯಾವುದನ್ನೂ ಲೆಕ್ಕಿಸದೇ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ, ರೀಲ್ಸ್ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಮಳೆಯಿಂದ ಭಾರಿ ಪ್ರಮಾಣದಲ್ಲಿ ಧರೆ ಕುಸಿದು ಬಿಳುತ್ತಿದೆ. ಇತ್ತ ಮುಳ್ಳಯ್ಯನಗಿರಿ ಮಾರ್ಗದ ರಸ್ತೆಗೆ ಮತ್ತೆ ಗುಡ್ಡ ಕುಸಿದುಬಿದ್ದಿದೆ. ಹೀಗಾಗಿ ಇದೀಗ ಜುಲೈ 31ರವರೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಬಂದ ಪ್ರವಾಸಿಗರನ್ನ ತಡೆದು ವಾಪಸ್ ಕಳಿಸುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:41 am, Fri, 28 July 23