ಚಿಕ್ಕಮಗಳೂರು: ಕಿಗ್ಗಾ ಋಷ್ಯಶೃಂಗ ದೇವಾಲಯಕ್ಕೂ ಅಯೋಧ್ಯೆ ರಾಮನಿಗೂ ಇದೆ ಅವಿನಾಭಾವ ನಂಟು
ಪುರಾಣ ಕಥೆಗಳ ಪ್ರಕಾರ, ರಾಮಾಯಣಕ್ಕೂ ಋಷ್ಯಶೃಂಗ ದೇವಾಲಯಕ್ಕೂ ನಂಟಿದೆ. ವಿಷ್ಣುವಿನ 7 ನೇ ಅವತಾರ ರಾಮನ ಜನನಕ್ಕೆ ಋಷ್ಯಶೃಂಗರು ಕಾರಣಕರ್ತರಾದವರು. ಪುತ್ರ ಸಂತಾನವಿಲ್ಲದ ದಶರಥರಿಗಾಗಿ ಋಷ್ಯಶೃಂಗರು ಅಯೋಧ್ಯೆಗೆ ತರಳಿ ಪುತ್ರಕಾಮೇಷ್ಠಿ ಯಾಗ ಮಾಡಿದ್ದರು.
ಚಿಕ್ಕಮಗಳೂರು, ಜನವರಿ 15: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagalur) ರಾಮಾಯಣ ಕಾಲದ ಪುರಾತನ ದೇವಾಲಯ ಇದ್ದು, ಇದೀಗ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗಮನ ಸೆಳೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ (Kigga) ಬಳಿ ಇರುವ ಪುರಾಣ ಪ್ರಸಿದ್ಧ ಋಷ್ಯಶೃಂಗ ದೇವಾಲಯಕ್ಕೂ (Sri Rishyasringeshwara Temple) ರಾಮಾಯಣಕ್ಕೂ ಅವಿನಾಭಾವ ನಂಟಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದೀಗ ದೇಗುಲದಲ್ಲಿ ಸಂಭ್ರಮ ಮನೆ ಮಾಡಿದೆ.
ರಾಮಾಯಣಕ್ಕೂ ಋಷ್ಯಶೃಂಗ ದೇವಾಲಯಕ್ಕೂ ಇರುವ ನಂಟೇನು?
ಪುರಾಣ ಕಥೆಗಳ ಪ್ರಕಾರ, ರಾಮಾಯಣಕ್ಕೂ ಋಷ್ಯಶೃಂಗ ದೇವಾಲಯಕ್ಕೂ ನಂಟಿದೆ. ವಿಷ್ಣುವಿನ 7 ನೇ ಅವತಾರ ರಾಮನ ಜನನಕ್ಕೆ ಋಷ್ಯಶೃಂಗರು ಕಾರಣಕರ್ತರಾದವರು. ಪುತ್ರ ಸಂತಾನವಿಲ್ಲದ ದಶರಥರಿಗಾಗಿ ಋಷ್ಯಶೃಂಗರು ಅಯೋಧ್ಯೆಗೆ ತರಳಿ ಪುತ್ರಕಾಮೇಷ್ಠಿ ಯಾಗ ಮಾಡಿದ್ದರು. ಯಾಗದ ಫಲವಾಗಿ ದಶರಥ ಮಹಾರಾಜನಿಗೆ ಪುತ್ರ ಭಾಗ್ಯ ದೊರೆತಿತ್ತು. ಯಾಗದ ಫಲವಾಗಿ ಕೌಸಲ್ಯೆಗೆ ರಾಮ, ಕೈಕೆಗೆ ಭರತ, ಸುಮಿತ್ರೆಗೆ ಲಕ್ಷ್ಮಣ – ಶತ್ರಘ್ನರ ಜನನವಾಗಿತ್ತು.
ಪುತ್ರ ಭಾಗ್ಯವಿಲ್ಲದೆ ದಶರಥ ಪರಿತಪಿಸುತ್ತಿದ್ದಾಗ ಆತನಿಗೆ ಅಯೋಧ್ಯೆಯ ಮಂತ್ರಿ ಸುಮಂತ ಖುಷ್ಯಶೃಂಗರ ಮೊರೆ ಹೋಗುವಂತೆ ಸಲಹೆ ನೀಡಿದ್ದ ಎನ್ನಲಾಗಿದೆ.
ವಾಲ್ಮೀಕಿ ರಾಮಾಯಣದಲ್ಲಿ ಕೂಡ ಋಷ್ಯಶೃಂಗ ದೇವಾಲಯದ ಬಗ್ಗೆ ಉಲ್ಲೇಖವಾಗಿದೆ. ರಾಮನ ಸಹೋದರಿ ಶಾಂತದೇವಿಯನ್ನು ಋಷ್ಯಶೃಂಗರು ವಿವಾಹವಾಗಿದ್ದರು. ಆಕೆಯನ್ನು ಅಂಗದೇಶದ ಮಹಾರಾಜ ರೋಮಪಾದರಿಗೆ ದಶರಥ ದತ್ತು ನೀಡಿದ್ದ.
12 ವರ್ಷಗಳ ಕಾಲ ಭೀಕರ ಬರಕ್ಕೆ ತುತ್ತಾಗಿದ್ದ ಅಂಗ ರಾಜ್ಯ ಇದರಿಂದ ಹೊರಬರಲು ಪರಿಹಾರಕ್ಕಾಗಿ ಋಷ್ಯಶೃಂಗರಿಗೆ ಆಹ್ವಾನ ನೀಡಿತ್ತು. ನಾರದರ ಸಲಹೆಯಂತೆ ಋಷ್ಯಶೃಂಗರಿಗೆ ಅಂಗರಾಜ್ಯಕ್ಕೆ ಆಮಂತ್ರಣ ನೀಡಲಾಗಿತ್ತು. ಋಷ್ಯಶೃಂಗರ ಪಾದಸ್ಪರ್ಶವಾಗುತ್ತಿದ್ದಂತೆ ಭಾರಿ ಮಳೆಯಿಂದ ಅಂಗರಾಜ್ಯದ ಕಷ್ಟಗಳು ನಿವಾರಣೆಯಾಗಿದ್ದವು. ಹೀಗಾಗಿ ಅಂಗ ರಾಜ್ಯದ ರಾಜ ರೋಮಪಾದರ ಸಾಕುಮಗಳಿಗೆ ಋಷ್ಯಶೃಂಗರ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಇದನ್ನೂ ಓದಿ: ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂ ಸಂಘಟನೆಗಳ ಒತ್ತಾಯ
ಮಳೆ ದೇವರು ಎಂದೇ ಖ್ಯಾತಿ
ಇಂದಿಗೂ ರಾಮನ ಸಹೋದರಿ ಶಾಂತಮ್ಮಳಿಗೆ ಕಿಗ್ಗಾದ ಋಷ್ಯಶೃಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಋಷ್ಯಶೃಂಗ ದೇವಾಲಯಕ್ಕೆ ಹಾಗೂ ಇಲ್ಲಿನ ದೇವರಿಗೆ ಮಳೆ ದೇವರು ಎಂದೇ ಖ್ಯಾತಿ ಕೂಡ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Mon, 15 January 24