ತಂದೆ ಕೊಲೆ ಮಾಡಿದ ಹಿರಿಮಗ ಜೈಲು ಪಾಲು, ವಿಕಲಚೇತನ ಅಣ್ಣ-ತಂಗಿ ಅನಾಥಾಶ್ರಮದ ಪಾಲು; ಕಣ್ಣೀರಿಟ್ಟ ತಾಯಿ ಮನೆಯಲ್ಲಿ ಏಕಾಂಗಿ

| Updated By: sandhya thejappa

Updated on: Sep 26, 2021 | 12:22 PM

ಕುಟುಂಬದ ಯಜಮಾನ ಸುಂದರ್-ಅರುಣಾ ದಂಪತಿಗೆ ನಿಖೇಶ್, ರಾಕೇಶ್, ರೇಖಾ ಹೆಸರಿನ ಮೂವರು ಮಕ್ಕಳಿದ್ದರು. ಈ ಮೂವರಲ್ಲಿ ನಿಖೇಶ್ ಮಾತ್ರ ಆರೋಗ್ಯವಾಗಿದ್ದ. ಇನ್ನುಳಿದ ರಾಕೇಶ್ ಹಾಗೂ ರೇಖಾ ಹುಟ್ಟು ವಿಕಲಚೇತನ ಮಕ್ಕಳು.

ತಂದೆ ಕೊಲೆ ಮಾಡಿದ ಹಿರಿಮಗ ಜೈಲು ಪಾಲು, ವಿಕಲಚೇತನ ಅಣ್ಣ-ತಂಗಿ ಅನಾಥಾಶ್ರಮದ ಪಾಲು; ಕಣ್ಣೀರಿಟ್ಟ ತಾಯಿ ಮನೆಯಲ್ಲಿ ಏಕಾಂಗಿ
ವಿಕಲಚೇತನ ಮಕ್ಕಳನ್ನು ಅನಾಥಾಶ್ರಮಕ್ಕೆ ಕಳುಹಿಸಿಕೊಡುವ ಸಂದರ್ಭ
Follow us on

ಚಿಕ್ಕಮಗಳೂರು: ಇಬ್ಬರು ವಿಕಲಚೇತನ ಮಕ್ಕಳನ್ನು ಸಾಕಲಾಗದೆ ಬೆಂಗಳೂರಿನ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟ ಕರುಣಾಜನಕ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚನ್ನಡ್ಲು ಗ್ರಾಮದಲ್ಲಿ ನಡೆದಿದೆ. 30 ವರ್ಷದ ರಾಕೇಶ್, 26 ವರ್ಷದ ರೇಖಾರನ್ನ ಬೆಂಗಳೂರಿನ ಆರ್​ವಿಎನ್​ ಅನಾಥಶ್ರಮಕ್ಕೆ ಕಳುಹಿಸಿಕೊಡಲಾಯಿತು. ಈ ವೇಳೆ ಸ್ಥಳೀಯರು, ಪೊಲೀಸ್ ಇಲಾಖೆ, ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದು, ಪ್ರತಿಯೊಬ್ಬರು ತಮ್ಮ ಕೈಲಾದ ಸಹಾಯವನ್ನ ಮಾಡಿದರು.

ಕಣ್ಣೀರು ತರಿಸುತ್ತೆ ಕುಟುಂಬದ ಕರುಣಾಜನಕ ಕಥೆ
ಕುಟುಂಬದ ಯಜಮಾನ ಸುಂದರ್-ಅರುಣಾ ದಂಪತಿಗೆ ನಿಖೇಶ್, ರಾಕೇಶ್, ರೇಖಾ ಹೆಸರಿನ ಮೂವರು ಮಕ್ಕಳಿದ್ದರು. ಈ ಮೂವರಲ್ಲಿ ನಿಖೇಶ್ ಮಾತ್ರ ಆರೋಗ್ಯವಾಗಿದ್ದ. ಇನ್ನುಳಿದ ರಾಕೇಶ್ ಹಾಗೂ ರೇಖಾ ಹುಟ್ಟು ವಿಕಲಚೇತನ ಮಕ್ಕಳು. ಇಬ್ಬರಿಗೂ ತಾವಾಗಿಯೇ ನಿಂತುಕೊಳ್ಳುವ ಶಕ್ತಿಯೇ ಇಲ್ಲ, ಬುದ್ಧಿ ಭ್ರಮಣೆ ಬೇರೆ. ಊಟ-ತಿಂಡಿ, ದಿನನಿತ್ಯದ ಕರ್ಮಗಳನ್ನ ಪೋಷಕರೇ ಮಾಡಿಸಬೇಕಾದ ಅನಿವಾರ್ಯತೆ. ಈ ಮಧ್ಯೆ ಹಿರಿಮಗ ನಿಖೇಶ್ ಬೆಂಗಳೂರಿನ ಕಡೆ ಮುಖ ಮಾಡುತ್ತಾನೆ. ಹಾಸಿಗೆಯಿಂದ ಏಳಲು ಸಾಧ್ಯವಿಲ್ಲದ ಮಕ್ಕಳನ್ನ ಸಾಕಲು ಕುಟುಂಬದ ಯಜಮಾನ ಸುಂದರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇಬ್ಬರಿಗೂ ಪ್ರತಿ ದಿನ ಔಷಧಿ ಕೊಡಲು ಹಣಕಾಸು ಹೊಂದಿಸಲು ಪಡಬಾರದ ಕಷ್ಟವನ್ನ ಸುಂದರ್ ಪಟ್ಟಿದ್ದಾರೆ.

ಮಳೆ ಲೆಕ್ಕಿಸದೆ ಇಬ್ಬರು ಮಕ್ಕಳನ್ನ ಹೆಗಲ ಮೇಲೆ ಹೊತ್ತ ಸುಂದರ್
2019ರಲ್ಲಿ ಸುರಿದ ಮಹಾಮಳೆ. ಇಡೀ ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭೂ ಕುಸಿತವಾಗಿತ್ತು. ಹಿಂದೆ ಎಂದೂ ಕಾಣದ ಮಹಾಮಳೆಗೆ ಕಾಫಿನಾಡು ಸಾಕ್ಷಿಯಾಗಿತ್ತು. ಈ ವೇಳೆ ಸುಂದರ್ ವಾಸವಾಗಿದ್ದ ಮನೆ ಪಕ್ಕದ ಗುಡ್ಡ ಕುಸಿಯಲು ಆರಂಭಿಸಿತು. ಆ ವೇಳೆ 28 ವರ್ಷದ ಮಗ, 24 ವರ್ಷದ ಮಗಳನ್ನ ಹೆಗಲ ಮೇಲೆ ಕೂರಿಸಿಕೊಂಡು ಧಾರಕಾರ ಮಳೆಯಲ್ಲೇ ಕಾಲ್ನಡಿಗೆಯಲ್ಲಿ ಬಂದು ಕೊಟ್ಟಿಗೆಹಾರದ ಕಾಳಜಿ ಕೇಂದ್ರಕ್ಕೆ ಅಪ್ಪ ಸುಂದರ್ ಸೇರಿಸುತ್ತಾರೆ. ಮಳೆಯಲ್ಲಿ ನೆನೆದುಕೊಂಡು, ತನ್ನ ಹೆಗಲ ಮೇಲೆ ಇಬ್ಬರು ವಯಸ್ಸಿಗೆ ಬಂದ ಮಕ್ಕಳನ್ನ ಹೊತ್ತಕೊಂಡು ಬಂದ ಸುಂದರ್ ಸ್ಥಿತಿಯನ್ನ ನೋಡಿ ಅಲ್ಲಿದ್ದವರು ಕಣ್ಣೀರು ಹಾಕಿದ್ದರು.

ಕುಟುಂಬದ ಯಜಮಾನನಿಗೆ ಲಾಕ್​ಡೌನ್​ನಲ್ಲಿ ಹೊಡೆಯಿತು ಲಕ್ವಾ
2020ರಲ್ಲಿ ಕೊರೊನಾ ಕಾರಣ ಲಾಕ್​ಡೌನ್​ ಘೋಷಣೆ ಆಗಿತ್ತು. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸುಂದರ್, ಲಾಕ್​ಡೌನ್​ನಿಂದ ದುಡಿಮೆ ಇಲ್ಲದಂತಾಗಿತ್ತು. ಮಕ್ಕಳಿಗೆ ಮೆಡಿಸಿನ್ ಕೊಡಿಸುವುದು ಇರಲಿ, ತಿನ್ನುವ ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಯ್ತು. ಇದೇ ಯೋಚನೆಯಲ್ಲಿದ್ದ ಸುಂದರ್​ಗೆ ಲಕ್ವಾ (ಪಾರ್ಶ್ವುವಾಯು) ಹೊಡೆದು ಹಾಸಿಗೆ ಹಿಡಿದರು. ಸುಂದರ್ ಸ್ಥಿತಿಯನ್ನ ಕಂಡು ಅನೇಕ ಸಹೃದಯರು, ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಿದರು. ಸುಮಾರು 4 ಲಕ್ಷಕ್ಕೂ ಅಧಿಕ ಹಣ ಸುಂದರ್ ಪತ್ನಿ ಅರುಣಾ ಖಾತೆಗೆ ಬಂತು.

ದಾನಿಗಳು ನೀಡಿದ ಹಣದ ಮೇಲೆ ಕಣ್ಣಾಕಿದ ಹಿರಿಮಗ
ಬೆಂಗಳೂರಿಗೆ ಹೋಗಿ ಜೀವನ ನಡೆಸುತ್ತಿದ್ದ ಸುಂದರ್ ಹಿರಿಮಗ ನಿಖೇಶ್, ಲಾಕ್ಡೌನ್ನಿಂದ ವಿಧಿಯಿಲ್ಲದೇ ಮನೆ ಸೇರಿಕೊಂಡ. ಮನೆಗೆ ಬಂದರೂ ಕಷ್ಟದಲ್ಲಿದ್ದ ತಮ್ಮ-ತಂಗಿಯ ಬಗ್ಗೆಯಾಗಲಿ, ಹಾಸಿಗೆ ಹಿಡಿದ ಅಪ್ಪನ ಬಗ್ಗೆಯಾಗಲಿ ಆತನಿಗೆ ಕರುಣೆ ಹುಟ್ಟಲಿಲ್ಲ. ಆತನ ಕಣ್ಣಿಗೆ ಬಿದ್ದಿದ್ದು ಕುಟುಂಬಕ್ಕೆ ಸಹಾಯ ಆಗಲಿ ಅಂತಾ ದಾನಿಗಳು ನೀಡಿದ್ದ ಹಣದ ಮೇಲೆ. ತಾಯಿಯ ಬಳಿ ಹಠ ಮಾಡಿ ಬಂದ ಹಣದಲ್ಲಿ ಬಹುಪಾಲು ಹಣವನ್ನ ತೆಗೆದುಕೊಂಡು ಲಾಕ್​ಡೌನ್​ ಸಡಿಲವಾದ ಬಳಿಕ ಮತ್ತೆ ಬೆಂಗಳೂರಿನ ದಾರಿ ಹಿಡಿದ.

ಎರಡನೇ ಬಾರಿ ಬಂದ ಪುತ್ರ ಅಪ್ಪನನ್ನೇ ಹತ್ಯೆಗೈದ
ಹಣ ತೆಗೆದುಕೊಂಡು ಬೆಂಗಳೂರಿಗೆ ಹೋದ ಮೇಲೆ ಹಿರಿಮಗ ಮನೆ ಕಡೆ ಮುಖ ಹಾಕಿರಲಿಲ್ಲ. ಆದರೆ ಎರಡನೇ ಬಾರಿ ಲಾಕ್​ಡೌನ್​ ಘೋಷನೆಯಾಗುತ್ತಿದ್ದಂತೆ ಮತ್ತೆ ಮನೆಗೆ ಬಂದ. ಮನೆಗೆ ಬಂದವನಿಗೆ ಉಳಿದ ಅಲ್ಪ ಸ್ವಲ್ಪ ಹಣವನ್ನ ಕೊಡುವಂತೆ ತಾಯಿಗೆ ಪೀಡಿಸುತ್ತಿದ್ದ. ತಾಯಿಗೆ ಗೋಳು ಕೊಡಬೇಡ ಅಂತ ಮಾತನಾಡಲು ಸಾಧ್ಯವಾಗದೆ ಸನ್ನೆಯಲ್ಲೇ ಹೇಳಿದಾಗ ಅಪ್ಪನ ತಲೆಗೆ ನಿಖೇಶ್ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ.

ಜೈಲುಪಾಲಾದ ಹಿರಿಮಗ, ವಿಧಿಯಿಲ್ಲದೇ ಅನಾಥಶ್ರಮದ ಪಾಲಾದ ವಿಕಲಚೇತನರು
ಕುಟುಂಬದ ಜವಾಬ್ದಾರಿ ಹೊರಬೇಕಾದ ಹಿರಿಮಗ ನಿಖೇಶ್, ಎಲ್ಲವನ್ನೂ ಬಿಟ್ಟು ದುಶ್ಚಟಗಳ ದಾಸನಾಗಿದ್ದ. ಬೆಂಗಳೂರಲ್ಲಿ ಶೋಕಿ ಜೀವನ ನಡೆಸುತ್ತಿದ್ದ. ಕೊನೆಗೆ ಹೆತ್ತ ಅಪ್ಪನನ್ನೇ ಕೊಂದ. ನಿಖೇಶ್ ವಿಕಲಚೇತನ ಸಹೋದರ, ಸಹೋದರಿಯ ಸ್ಥಿತಿಯಂತೂ ತುಂಬಾ ಹೀನಾಯ ಪರಿಸ್ಥಿತಿಗೆ ತಲುಪಿತು. ಹೀಗಾಗಿ ಸ್ಥಳೀಯರೆಲ್ಲರೂ ಸೇರಿ ವಿಕಲಚೇತನ ಮಕ್ಕಳಿಗೆ ತರಬೇತಿ ನೀಡುವ ಬೆಂಗಳೂರಿನ ಬನ್ನೇರುಘಟ್ಟದ ಆರ್​ವಿಎನ್​ ಅನಾಥಾಶ್ರಮಕ್ಕೆ ಕಳುಹಿಸಿದ್ದಾರೆ.

ವಿಕಲಚೇತನರಾದ ರಾಕೇಶ್ ಮತ್ತು ರೇಖಾ

ಕಣ್ಣೀರಿಟ್ಟ ತಾಯಿ, ಮಮ್ಮಲ ಮರುಗಿದ ಸ್ಥಳೀಯರು
ಒಂದು ಕಡೆ ಬಡತನ. ಇನ್ನೊಂದು ಕಡೆ ಗಂಡನ ಕೊಲೆ. ಹಿರಿಮಗ ಜೈಲು ಪಾಲು. ಇಬ್ಬರು ಮಕ್ಕಳು ಅನಾಥಶ್ರಮಕ್ಕೆ ಸೇರಬೇಕಾದ ಅನಿವಾರ್ಯ. ಈ ಎಲ್ಲಾ ನೋವನ್ನು ಅನುಭವಿಸುತ್ತಿರುವ ಅರುಣಾ ಏಕಾಂಕಿಯಾಗಿದ್ದಾರೆ. ಮಕ್ಕಳನ್ನ ಕಳುಹಿಸಿಕೊಡಬೇಕಾದ ಸಂದರ್ಭ ಕಂಡು ಕಣ್ಣೀರು ಹಾಕಿದ ತಾಯಿ ಅರುಣಾರನ್ನು ನೋಡಿ ಸ್ಥಳೀಯರು ಮಮ್ಮಲ ಮರುಗಿದರು.

ಇದನ್ನೂ ಓದಿ

Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ

ಮಣ್ಣು ತುಂಬಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ ಕಾನ್ಸ್‌ಟೇಬಲ್; ಸಂಚಾರಿ ಠಾಣೆ ಪಿಸಿ ಚಂದ್ರಕಾಂತ್ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ

(Chikkamagalur Sad News mother cried while sending children with disabilities to an orphanage)