ಚಿಕ್ಕಮಗಳೂರು, ಫೆಬ್ರವರಿ 22: ಮೆಸ್ಕಾಂ (MESCOM) ನಿರ್ಲಕ್ಷ್ಯಕ್ಕೆ 6 ಎಕರೆ ಕಾಫಿತೋಟ ಸಂಪೂರ್ಣ ಭಸ್ಮವಾದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಬಿಗ್ಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ರಾತ್ರೋರಾತ್ರಿ ಆರು ಎಕರೆ ಕಾಫಿತೋಟ ಸುಟ್ಟು ಕರಕಲಾಗಿದೆ. ಕಾಫಿ ತೋಟದ ಮಧ್ಯೆ ಎಳೆಯಲಾಗಿದ್ದ ವಿದ್ಯುತ್ ತಂತಿ ಗಾಳಿಗೆ ಒಂದಕ್ಕೊಂದು ತಾಗಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮವಾಗಿ ಇಡೀ ಕಾಫಿ ತೋಟಕ್ಕೆ ಬೆಂಕಿ ವ್ಯಾಪಿಸಿತ್ತು.
ಅಗ್ನಿ ಅವಘಡದಿಂದ ಕಾಫಿ ತೋಟದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸು, ಅಡಿಕೆ, ಬಾಳೆ, ಕಾಫಿ ಗಿಡ ನಾಶವಾಗಿವೆ. ಬಿಗ್ಗನಹಳ್ಳಿ ಗ್ರಾಮದ ತೇಜಸ್ ಗೌಡ ಎಂಬುವವರಿಗೆ ಸೇರಿದ ಕಾಫಿತೋಟ ನಾಶವಾಗಿದೆ.
ತೋಟದ ಮಧ್ಯೆ ಹಾಕಿದ್ದ ಪವರ್ ಲೈನ್ ಕಂಬಗಳನ್ನು ತೆರವು ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಕಳೆದ 10 ವರ್ಷಗಳಿಂದ ಮನವಿ ಮಾಡಿದರೂ ಮೆಸ್ಕಾಂ ಸ್ಪಂದಿಸಿರಲಿಲ್ಲ ಎಂಬ ಆರೋಪ ಇದೀಗ ಕೇಳಿಬಂದಿದೆ.
ಹಾಸನ ವರದಿ: ಖಾಸಗಿ ರೆಸಾರ್ಟ್‌ಗೆ ಚೆಸ್ಕಾಂ ಲೈನ್‌ಮ್ಯಾನ್‌ಗಳು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಆರೋಪ ಕೇಳಿಬಂದಿದ್ದು, ಲೈನ್‌ಮ್ಯಾನ್‌ಗಳನ್ನು ಗುತ್ತಿಗೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಲೈನ್‌ಮ್ಯಾನ್ ಹಾಗೂ ಗುತ್ತಿಗೆದಾರರ ನಡುವೆ ವಾಗ್ವಾದ ನಡೆಯಿತು. ನಂತರ ಎಲೆಕ್ಟ್ರಿಕ್ ಗುತ್ತಿಗೆದಾರರು ದಿಢೀರ್ ಪ್ರತಿಭಟನೆ ನಡೆಸಿದರು.
ಆನೆ ಸಮಸ್ಯೆ ಇರುವ ಕಡೆ ಹಾಕಬೇಕಾದ ವಿದ್ಯುತ್ ಕಂಬಗಳನ್ನು ಖಾಸಗಿ ರೆಸಾರ್ಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಬಳಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಲೈನ್‌ಮ್ಯಾನ್‌ಗಳು ಕಾನೂನು ಉಲ್ಲಂಘಿಸಿ ಅನಧಿಕೃತ ಗುತ್ತಿಗೆ ಕೆಲಸ ಮಾಡಿರುವ ಆರೋಪ ವ್ಯಕ್ತವಾಗಿತ್ತು. ರೆಸಾರ್ಟ್ ಮಾಲೀಕರಿಂದ ಹಣ ಪಡೆದು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ನೀಡಿರುವ ಸಾಮಗ್ರಿಗಳನ್ನು ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದಂತೆ ಲೈನ್‌ಮ್ಯಾನ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಪ್ರವಾಸಿ ತಾಣ ಕೆಮ್ಮಣ್ಣು ಗುಂಡಿ ಗುಡ್ಡದಲ್ಲಿ ಕಾಡ್ಗಿಚ್ಚು; ವಿಡಿಯೋ
ಚೆಸ್ಕಾಂನಿಂದ ಸಂಬಳ ಪಡೆದು ಖಾಸಗಿ ರೆಸಾರ್ಟ್‌ಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಲೈನ್‌ಮ್ಯಾನ್‌ಗಳ ವಿರುದ್ಧ ಕ್ರಮಕ್ಕೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ