ಚಿಕ್ಕಮಗಳೂರು: 13 ವರ್ಷಗಳ ನಂತರ ರೈತನಿಗೆ ಬಂತು ಬರೋಬ್ಬರಿ 3 ಲಕ್ಷ ರೂ. ವಿದ್ಯುತ್ ಬಿಲ್!
ಇಂಧನ ಸಚಿವ ಜಾರ್ಜ್ ಅವರು ಉಸ್ತುವಾರಿ ವಹಿಸಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರೊಬ್ಬರಿಗೆ ಬರೋಬ್ಬರಿ 13 ವರ್ಷಗಳ ನಂತರ ಮೂರು ಲಕ್ಷ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುವಂತೆ ಮೆಸ್ಕಾಂ ನೋಟಿಸ್ ನೀಡಿದೆ. ಈ ನಡೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರು, ಫೆಬ್ರವರಿ 26: ಇಂಧನ ಸಚಿವ ಕೆಜೆ ಜಾರ್ಜ್ ಉಸ್ತುವಾರಿ ಜಿಲ್ಲೆಯಲ್ಲೇ ರೈತರಿಗೆ ಮೆಸ್ಕಾಂ ಶಾಕ್ ನೀಡಿದೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ಉಮೇಶ್ ಎಂಬ ರೈತ ಮೆಸ್ಕಾಂ ಬಿಲ್ ನೋಡಿ ಕಂಗಾಲಾಗಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಬರೋಬ್ಬರಿ 3,20,076 ರೂಪಾಯಿ ಬಿಲ್ ಬಂದಿದೆ. 10 ಎಚ್ಪಿ ಮೋಟರ್ ಬಳಕೆಗೆ ಮೆಸ್ಕಾಂ ಬಿಲ್ ನೀಡಿದೆ. ಒಟ್ಟು 13 ವರ್ಷ 4 ತಿಂಗಳ ಬಳಿಕ 3 ಲಕ್ಷಕ್ಕೂ ಹೆಚ್ಚು ರೂಪಾಯಿ ಬಿಲ್ ಬಂದಿದೆ.
ಕೃಷಿ ಉದ್ದೇಶಕ್ಕೆ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಬಂಗಾರಪ್ಪ ಸಿಎಂ ಆಗಿದ್ದಾಗ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿದ್ದರು. ಮುಖ್ಯಮಂತ್ರಿ ಬಂಗಾರಪ್ಪ ಕಾಲದಿಂದಲೂ ಉಚಿತ ವಿದ್ಯುತ್ ಪೂರೈಕೆಯಾಗಿತ್ತಿದ್ದು, ಈಗ ಏಕಾಏಕಿ ಮೆಸ್ಕಾಂ ಬಿಲ್ ನೀಡಿದೆ.
ಮೆಸ್ಕಾಂ ಅಧಿಕಾರಿಗಳು ಹೇಳುವುದೇನು?
ರೈತನಿಗೆ ಬರೋಬ್ಬರಿ ವಿದ್ಯುತ್ ಬಿಲ್ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಸ್ಕಾಂ ಅಧಿಕಾರಿಗಳು, ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, 13 ವರ್ಷಕ್ಕೂ ಹೆಚ್ಚು ಕಾಲ ಬಿಲ್ ನೀಡದೆ ಈಗ ಏಕಾಏಕಿ ಬಿಲ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಲಕ್ಷಾಂತರ ರೂಪಾಯಿ ಬಿಲ್ ನೋಡಿ ರೈತ ಉಮೇಶ್ ಇದೀಗ ಕಂಗಾಲಾಗಿದ್ದಾರೆ. 15 ದಿನಗಳ ಒಳಗೆ ಹಣ ಪಾವತಿ ಮಾಡುವಂತೆ ಅವರಿಗೆ ನೋಟಿಸ್ ನೀಡಲಾಗಿದ್ದು, ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಕಡಿತ ಮಾಡುವ ಎಚ್ಚರಿಕೆ ನೀಡಲಾಗಿದೆ. ಆಲ್ದೂರು ಮೆಸ್ಕಾಂ ಉಪ ವಿಭಾಗದಿಂದ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಸರ್ಕಾರಿ ಶಾಲೆಗೆ 2.18 ಕೋಟಿ ರೂ. ದೇಣಿಗೆ ನೀಡಿದ ಕಾಫಿ ಉದ್ಯಮಿ!
ಉಚಿತ ವಿದ್ಯುತ್ ವಿತರಿಸುವ ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಯು ಎಸ್ಕಾಂಗಳಿಗೆ ಹೊರೆಯಾಗಿ ಪರಿಣಮಿಸುತ್ತಿದ್ದು, ವಿದ್ಯುತ್ ಬಿಲ್ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿ ಮಾಡಬೇಕು. ಇಲ್ಲವಾದರೆ ಗ್ರಾಹಕರಿಂದಲೇ ಬಿಲ್ ವಸೂಲಿ ಮಾಡಲು ಅವಕಾಶ ನೀಡಬೇಕು ಎಂದು ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ ಈ ವರದಿಯನ್ನು ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ ಅಲ್ಲಗಳದಿದ್ದು, ಆ ರೀತಿ ಯಾವುದೇ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಇದೀಗ 13 ವರ್ಷಗಳಿಂದ ಬಿಲ್ ನೀಡದೆ ಏಕಾಏಕಿ ಲಕ್ಷಾಂತರ ರೂಪಾಯಿ ಬಿಲ್ ರೈತನಿಗೆ ನೀಡಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿವೆ.