ವಕೀಲನ ಮೇಲೆ ಹಲ್ಲೆ; PSI ಸೇರಿದಂತೆ 6 ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 02, 2023 | 3:50 PM

ವಕೀಲ ಪ್ರೀತಮ್(Advocate Preetham)ಎಂಬುವವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು (Chikkamagaluru) ನಗರ ಠಾಣೆಯಲ್ಲಿ ಗುರುವಾರ (ನ.30) ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, PSI ಸೇರಿದಂತೆ 6 ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಚಿಕ್ಕಮಗಳೂರು DYSP ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

ವಕೀಲನ ಮೇಲೆ ಹಲ್ಲೆ; PSI ಸೇರಿದಂತೆ 6 ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ವಿಶೇಷ ತಂಡ ರಚನೆ
ಲಾಯರ್​ ಮೇಲೆ ಹಲ್ಲೆ
Follow us on

ಚಿಕ್ಕಮಗಳೂರು, ಡಿ.02: ಹೆಲ್ಮೆಟ್ ವಿಚಾರವಾಗಿ ವಕೀಲ ಪ್ರೀತಮ್(Advocate Preetham)ಎಂಬುವವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು (Chikkamagaluru) ನಗರ ಠಾಣೆಯಲ್ಲಿ ಗುರುವಾರ (ನ.30) ಪ್ರಕರಣ ದಾಖಲಾಗಿತ್ತು. ಜೊತೆಗೆ ಎಸ್ಪಿ ವಿಕ್ರಂ ಅಮ್ಟೆ‌ ಅವರು ಆರೋಪಿಗಳನ್ನು ಅಮಾನತು ಮಾಡಿದ್ದರು. ಈ ಹಿನ್ನಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು,  PSI ಸೇರಿದಂತೆ 6 ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಚಿಕ್ಕಮಗಳೂರು DYSP ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

ಪ್ರಕರಣದ ಸಂಪೂರ್ಣ ವರದಿ ಕೇಳಿರುವ ಹೈ ಕೋರ್ಟ್

ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಪಿಎಸ್​ಐ ಸೇರಿದಂತೆ 6 ಪೊಲೀಸ್​ ಸಿಬ್ಬಂದಿಗಳ ಬಂಧನಕ್ಕೆ ಆಗ್ರಹಿಸಿದ್ದ ವಕೀಲರು, ರಾಜ್ಯಾದ್ಯಂತ ಕೋರ್ಟ್ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದರು. ಈ ಹಿನ್ನಲೆ ನಿನ್ನೆ(ಡಿ.01) ಹೈಕೋರ್ಟ್ ಪ್ರಕರಣದ ಸಂಪೂರ್ಣ ವರದಿ ಕೇಳಿದ್ದು, ಮಂಗಳವಾರದ ಒಳಗೆ ತನಿಖೆಯ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ವಕೀಲನ ಮೇಲೆ ಗಂಭೀರ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್ ಪಿ ಆದೇಶ

ಘಟನೆ ವಿವರ

ಗುರುವಾರ (ನ.30) ಸಾಯಂಕಾಲ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಪ್ರೀತಮ್ ಎಂಬುವವರ ಮೇಲೆ ಓರ್ವ ಪೊಲೀಸ್ ಇನ್ಸ್ ಪೆಕ್ಟರ್ (PSI), ಒಬ್ಬ ಎಎಸ್ ಐ, ಒಬ್ಬ ಹೆಡ್ ಕಾನ್ ಸ್ಟೇಬಲ್ ಹಾಗೂ ಮೂವರು ಪೊಲೀಸ್ ಪೇದೆಗಳು ಸೇರಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಠಾಣೆ ಮುಂದೆ ವಕೀಲರು ಜಮಾಯಿಸಿ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್​ಪಿ ವಿಕ್ರಂ, ವಿಚಾರಣೆ ನಡೆಸಿ, ಪಿಎಸ್​ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಜೊತೆಗೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಐಪಿಸಿ ಸೆಕ್ಷನ್​​​​​​ 307, 324, 506, 504ರ ಅಡಿ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ