ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಸಂಪೂರ್ಣ ದತ್ತಪೀಠಕ್ಕಾಗಿ ಹಿಂದೂ ಸಂಘಟನೆಗಳ ಆಗ್ರಹ ಹೆಚ್ಚಾಗಿದೆ. 25ನೇ ವರ್ಷದ ದತ್ತ ಜಯಂತಿಯ ಆಚರಣೆ ಹಿನ್ನೆಲೆಯಲ್ಲಿ ಭಜರಂಗದಳ ಮತ್ತು ವಿಹೆಚ್ಪಿ ಮುಖಂಡರು ದತ್ತಮಾಲಾ ಧಾರಣೆ ಮಾಡಲಿದ್ದಾರೆ. ಬಳಿಕ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ.
ಚಿಕ್ಕಮಗಳೂರು, ನವೆಂಬರ್ 30: ಚಿಕ್ಕಮಗಳೂರು (Chikkamagaluru) ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ (Dattapeeta) ಸಂಪೂರ್ಣ ಹಿಂದೂ (Hindu) ಪೀಠಕ್ಕಾಗಿ ಆಗ್ರಹಿಸಿ ಭಜರಂಗದಳ ಮತ್ತು ವಿಹೆಚ್ಪಿ ನೇತೃತ್ವದಲ್ಲಿ 25ನೇ ವರ್ಷದ ದತ್ತಜಯಂತಿ ಆಚರಣೆಗೆ ಚಾಲನೆ ದೊರೆತಿದೆ. ಚಿಕ್ಕಮಗಳೂರು ನಗರ, ಪಟ್ಟಣಗಳಲ್ಲಿ ಕೇಸರಿ ಭಾವುಟ ಮತ್ತು ಬಂಟಿಂಗ್ಸ್ ಕಟ್ಟಿ ಅಲಂಕಾರ ಮಾಡಲಾಗುತ್ತದೆ.
ಭಜರಂಗದಳ, ವಿಹೆಚ್ಪಿ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಡಿಸೆಂಬರ್ 6 ರಂದು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡುತ್ತಾರೆ. ಡಿಸೆಂಬರ್ 12 ರಂದು ಅನಸೂಯಾ ಜಯಂತಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ಡಿಸೆಂಬರ್ 13 ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನೆರವೇರುತ್ತದೆ. ನಂತರ ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳು ಗುಹೆಯಲ್ಲಿನ ದತ್ತ ಪಾದುಕೆ ದರ್ಶನ ಪಡೆಯುತ್ತಾರೆ. ಈ ದಿನ ರಾಜ್ಯದ ಮೂಲೆಗಳಿಂದ ಸಾವಿರಾರು ದತ್ತಮಾಲಾಧಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಗೋರಿಗಳಿಲ್ಲ ಇದು ಹಿಂದೂಗಳ ಪವಿತ್ರ ದತ್ತಪೀಠ ಅನ್ನುತ್ತಿದ್ದರೇ, ಮುಸ್ಲೀಮರು ಬಾಬಾ ಬುಡನ್ ಜೊತೆ ದಾದಾಹಯಾತ್ ಖಲಂದರ್ ಸೇರಿದಂತೆ ಅವರ ಶಿಷ್ಯರ ಗೋರಿಗಳಿರುವ ಪವಿತ್ರ ಸ್ಥಳ ಎನ್ನುತ್ತಿದ್ದಾರೆ. ಹಿಂದೂ-ಮುಸ್ಲಿಂ ನಡುವಿನ ದೇವರ ಹೆಸರಿನ ಭೂ ವಿವಾದ 25 ವರ್ಷಗಳಿಂದ ಜೀವಂತವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ: ಮುಸ್ಲಿಂ ಮುಖಂಡರ ಪ್ರತಿಭಟನೆ
ಕಳೆದ ಗುರವಾರ (ನ.21) ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದ ಗುಹೆಯೊಳಗಿರುವ ಗೋರಿಗಳ ಮೇಲೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಇಸ್ಲಾಂ ಧರ್ಮದ ವಿರುದ್ಧವಾಗಿ ಕುಂಕುಮ ಹಚ್ಚಲಾಗಿದೆ ಎಂದು ಇಬ್ಬರು ಅರ್ಚಕರು ಸೇರಿದಂತೆ ದತ್ತಾತ್ರೇಯ ಪೀಠ ವ್ಯವಸ್ಥಾಪನಾ ಸಮಿತಿ ಸೇರಿದಂತೆ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಇಂದು ಹಿಂದೂ ಸಂಘಟನೆಗಳು ನ್ಯಾಯಾಲಯದ ಸೂಚನೆ ಮೇರೆಗೆ ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ಅರ್ಚಕರಿಗೆ ಮುಸ್ಲಿಮರಿಂದ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪಕ್ಕದಲ್ಲಿರುವ ಔದುಂಬರ ವೃಕ್ಷಕ್ಕೆ ಪೂಜೆ ಮಾಡದಂತೆ ಬೇಲಿ ಹಾಕಲಾಗಿದೆ ಎಂಬ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ದತ್ತಾತ್ರೇಯರು ಇದ್ದ ಸ್ಥಳದಲ್ಲಿ ಔದುಂಬರ ಮರ ಇರುತ್ತೆ. ದತ್ತ ಪಾದುಕೆ ದರ್ಶನ ಪಡೆದವರು ವೃಕ್ಷಕ್ಕೂ ಪೂಜೆ ಮಾಡಬೇಕು. ಆದರೆ, ವೃಕ್ಷ ಇರುವ ಸ್ಥಳದಲ್ಲಿ ಗೋರಿಗಳಿರುವುದರಿಂದ ವೃಕ್ಷದ ಬಳಿ ತೆರಳದಂತೆ ಬೇಲಿ ಹಾಕಿದ್ದಾರೆ ಎಂಬ ಆರೋಪವನ್ನ ಜಿಲ್ಲಾಡಳಿತದ ಮೇಲೆ ಹಿಂದೂ ಸಂಘಟನೆಗಳು ಮಾಡುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Sat, 30 November 24