
ಚಿಕ್ಕಮಗಳೂರು, ಜನವರಿ 27: ಕಾಫಿನಾಡು ಚಿಕ್ಕಮಗಳೂರು (Chikkamagaluru) ಪ್ರವಾಸಿಗರ ಪ್ರಮುಖ ತಾಣಗಳಲ್ಲಿ ಒಂದು. ಅಚ್ಚ ಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಹರಿದುಬರುತ್ತಾರೆ. ಸದ್ಯ ಇದೇ ಪ್ರವಾಸಿಗರಿಂದ (Tourists) ಪವಿತ್ರ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಪ್ರವಾಸಿಗರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್ಗೆ ಮನವಿ ಮಾಡಿದ್ದಾರೆ.
ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಕ್ಷೇತ್ರದಲ್ಲಿ ಪ್ರವಾಸಿಗರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪ ಕೇಳಿಬಂದಿದೆ. ನಮ್ಮ ಪುಣ್ಯಕ್ಷೇತ್ರಗಳು ಪ್ರವಾಸೋದ್ಯಮಕ್ಕೆ ಹಣ ಮಾಡುವ ಜಾಗವಾಗಿದೆ. ಶೂ ,ಚಪ್ಪಲಿ ಹಾಕಿ ಮುಳ್ಳಯ್ಯನಗಿರಿಯ ಮುಳ್ಳಪ್ಪ ಗದ್ದುಗೆ ಮೇಲೆ ಪ್ರವಾಸಿಗರು ಓಡಾಡುತ್ತಿದ್ದಾರೆ. ಪವಿತ್ರ ಸ್ಥಳದಲ್ಲೇ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಪ್ರಶ್ನೆ ಮಾಡಿದ ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದೆ ರೀತಿ ಮುಂದುವರೆದರೆ ನಾವೇ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹಿಂದೂ ಸಂಘಟನೆಗಳು ನೈತಿಕ ಪೊಲೀಸ್ ಗಿರಿಯ ಎಚ್ಚರಿಕೆ ನೀಡಿವೆ.
ಚಿಕ್ಕಮಗಳೂರಿನ ಪವಿತ್ರ ಧಾರ್ಮಿಕ ತೀರ್ಥ ಕ್ಷೇತ್ರಗಳಿಗೆ ಪ್ರವಾಸಿಗರು ಆಗಮಿಸಿ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವುದು ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ದತ್ತಪೀಠ, ಗಾಳಿಕೆರೆ, ಕಲ್ಲತ್ತಿಗಿರಿಗಳಂತಹ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರು ಆಗಮಿಸಿ ಮೋಜು-ಮಸ್ತಿ ಮಾಡುತ್ತಾ ಮದ್ಯಪಾನ, ಧೂಮಪಾನ ಮತ್ತು ಅಸಭ್ಯ ರೀತಿಯಲ್ಲಿ ವರ್ತಿಸುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡಿ ಪರಿಸರ ಹಾನಿ ಉಂಟು ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ
ಮುಳ್ಳಯ್ಯನಗಿರಿಯ ದೇವಸ್ಥಾನದ ಆವರಣದೊಳಗೆ ಚಪ್ಪಲಿ ಧರಿಸಿ ಓಡಾಡುತ್ತಿರುವುದು ಅಲ್ಲದೇ ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ. ಇದರಿಂದ ಹಿಂದೂಗಳ ಭಾವನೆ ಕೆರಳಿಸುವಂತಾಗಿದೆ. ಆದ್ದರಿಂದ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಪ್ರವಾಸಿಗರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕಾಪಾಡುವ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಕಾಪಾಡುವಂತೆ ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:46 pm, Tue, 27 January 26