AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​​ ಮುಖಂಡನ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ಅಕ್ರಮ ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ಇದು ಹುಲಿ ಸಂರಕ್ಷಿತ ಬಫರ್ ಝೋನ್ ಆಗಿದ್ದು, ಅರಣ್ಯ ಇಲಾಖೆ ನಿಯಮಗಳನ್ನು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಉಲ್ಲಂಘಿಸಲಾಗಿದೆ. ಎನ್‌ಒಸಿ ಇಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ 50 ಕೋಟಿಗೂ ಹೆಚ್ಚು ಮೌಲ್ಯದ ರೆಸಾರ್ಟ್ ನಿರ್ಮಾಣವಾಗುತ್ತಿದ್ದು, ಅರಣ್ಯಾಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಂಗ್ರೆಸ್​​​ ಮುಖಂಡನ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ
ಚಂದ್ರದ್ರೋಣ ಪರ್ವತ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jan 21, 2026 | 7:36 PM

Share

ಚಿಕ್ಕಮಗಳೂರು, ಜ.21: ಅರಣ್ಯಗಳ ಮಧ್ಯೆ ರೆಸಾರ್ಟ್ ನಿರ್ಮಾಣ (Illegal Resort in Western Ghats) ಮಾಡಲು ಕಾಂಗ್ರೆಸ್​​​ ಮುಂಖಡರೊಬ್ಬರು ಮುಂದಾಗಿದ್ದಾರೆ. ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿದೆ. ಇದು ಒಂದು ಕಡೆ ಹುಲಿ‌ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಆಗಿದ್ದು, ಮತ್ತೊಂದು ಕಡೆ ಸೂಕ್ಷ್ಮ ಪ್ರದೇಶವಾಗಿದೆ. ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯದೆ ಕಾನೂನಿನ ವಿರೋಧವಾಗಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಇದು ಅಕ್ರಮವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್ ಎಂದು ಹೇಳಲಾಗಿದೆ. ಆದರೆ ಇಷ್ಟೆಲ್ಲಾದರೂ ಅರಣ್ಯ ಅಧಿಕಾರಿಗಳು ಮೌನವಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ‌ಕಾಯ್ದೆ 1972ರ ಉಲ್ಲಂಘನೆ ಆಗಿದ್ದರು, ರೆಸಾರ್ಟ್ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಯಾವುದೇ ಕ್ರಮವನ್ನು ಅರಣ್ಯಾಧಿಕಾರಿಗಳು ತೆಗೆದುಕೊಂಡಿಲ್ಲ.

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣಗಳು ತವರು, ಇಲ್ಲಿ ರಾಜ್ಯದ ಹಾಗೂ ದೇಶ, ವಿದೇಶದಿಂದ ಜನರು ಹರಿದು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಕಾರಣಕ್ಕೆ ಇಲ್ಲಿ ಹೊಸ ಹೊಸ ರೆಸಾರ್ಟ್​​ಗಳು ಬರುತ್ತಿದೆ. ಬೇರೆ ಬೇರೆ ಕಂಪನಿಗಳು ರೆಸಾರ್ಟ್​​ಗಳನ್ನು ಸ್ಥಾಪನೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಮುಖಂಡ, ರಾಜ್ಯ ಕಾಂಗ್ರೆಸ್ ‌ಪಕ್ಷದ‌ ಮಾಜಿ ಖಜಾಂಜಿ ವಿನಯ್ ಕಾರ್ತಿಕ್ ಪ್ರಕಾಶ್ ಮತ್ತು ಚಂದ್ರ ಪ್ರಕಾಶ್ ಅಕ್ರಮವಾಗಿ, ಅರಣ್ಯ ಇಲಾಖೆಯ ನಿಯಮಗಳನ್ನು ಮೀರಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಸೂಕ್ಷ್ಮ ಪ್ರದೇಶ , ಶೋಲಾ‌ ಅರಣ್ಯದ ಅಪರೂಪದ ಸಸ್ಯ ಸಂಪತ್ತು ಇರುವ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ‌ 50 ಕೋಟಿಗೂ ಹೆಚ್ಚು ಮೌಲ್ಯದ ರೆಸಾರ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಕೊಳಗಾವೆ ಗ್ರಾಮದ ಸರ್ವೆ ನಂಬರ್ 53ರಲ್ಲಿ ಗುಡ್ಡ ನಾಶ ಮಾಡಿ ರೆಸಾರ್ಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೀಗ ಇದನ್ನು ಪರಿಸರ ನಾಶದ ಜೊತೆಗೆ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ವಿನಯ್ ಕಾರ್ತಿಕ್‌, ಚಂದ್ರ ಪ್ರಕಾಶ್ 2020ರಲ್ಲಿ ಕೊಳಗಾವೆ ಗ್ರಾಮದ ‌ಸರ್ವೆ ನಂಬರ್ ‌ 53 ರಲ್ಲಿ 4.32 ಎಕರೆ ಕಾಫಿತೋಟವನ್ನು ಖರೀದಿ ಮಾಡಿ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ 2020 ರಲ್ಲಿ ಅಂದಿನ ಜಿಲ್ಲಾಧಿಕಾರಿ ಭೂ ಪರಿವರ್ತನೆ ಮಾಡಿದ್ದರೆ. ಇದೀಗ 2025ರ ನವೆಂಬರ್​​ನಿಂದ ಕಾಮಗಾರಿ ಆರಂಭವಾಗಿದೆ. ಆದರೆ ಇವರು ಮಾಡುವ ರೆಸಾರ್ಟ್​​​ ಬಳಿ ಭದ್ರಾ ಹುಲಿ‌ ಸಂರಕ್ಷಿತ ‌ಪ್ರದೇಶದ ಬಫರ್ ಝೋನ್‌ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳು ಇದೆ. ಇಲ್ಲಿ ಯಾವುದೇ ಬೃಹತ್ ಕಟ್ಟಡ ನಿರ್ಮಾಣ ,ಗಣಿಗಾರಿಕೆ ನಡೆಸುವಂತಿಲ್ಲ. ಒಂದು ವೇಳೆ ಈ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಬೇಕು ಎಂದು ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಜೊತೆಗೆ ಸ್ಥಳೀಯ ಅರಣ್ಯ ಇಲಾಖೆಯ ಅನುಮತಿ ಪತ್ರ ಕಡ್ಡಾಯ, ನಿಯಮಗಳ ಪ್ರಕಾರ ಬಫರ್ ಝೋನ್ ವ್ಯಾಪ್ತಿಯ 10 ಕಿಮೀ ವರೆಗೂ ಬೃಹತ್ ಕಟ್ಟಡ ನಿರ್ಮಾಣ ,ಗಣಿಗಾರಿಕೆಗೆ ನಿರ್ಬಂಧವಿದೆ. ಇದೀಗ ಯಾವುದೇ ಎನ್​​ಒಸಿ ಪಡೆಯದೆ, ರೆಸಾರ್ಟ್​​ ಕಾಮಾಗಾರಿ ನಡೆಯುತ್ತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪರಿಸರ ಪ್ರೇಮಿ ವಿರೇಶ್​​ ಹೇಳಿದ್ದಾರೆ.

ಇದನ್ನೂ ಓದಿ: ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೆಡ್​​​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ, ಯಾವುದು ಗೊತ್ತಾ?

ಚಂದ್ರದ್ರೋಣ ಪರ್ವತದ ಸಾಲು ಮುಳ್ಳಯ್ಯನಗಿರಿ ಸೇರಿದಂತೆ ಪ್ರಸಿದ್ಧ ಪ್ರವಾಸಿತಾಣಗಳಿರುವ ಪ್ರದೇಶ, ಇಲ್ಲಿ ಅಪರೂಪದ ಜೀವ ರಾಶಿ‌ ಜೊತೆಗೆ ಅಪರೂಪದ ಸಸ್ಯ ಸಂಪತ್ತು ಇದೆ. ಇದರ ಜತೆಗೆ ಇದು ಉಪ ನದಿಗಳ ಉಗಮಸ್ಥಾನ, ಇಂತಹ ಹುಲಿ ಸಂರಕ್ಷಿತ ಪ್ರದೇಶ, ಪರಿಸರ ಸೂಕ್ಷ್ಮ ಎರಡಕ್ಕೂ ಸೇರಿರುವ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡನ ರೆಸಾರ್ಟ್ ಕಾಮಗಾರಿ ನಡೆಯುತ್ತಿದ್ದರು, ಅರಣ್ಯಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರ ಜತೆಗೆ ಆತಂಕದ ಸಂಗತಿಯೊಂದು ಇದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಕಟ್ಟಡ ಕಾಮಗಾರಿ ‌ನಡೆಸಿದ್ದರೆ, ಚಂದ್ರದ್ರೋಣ ಪರ್ವತದ ‌ಸಾಲು ಮುಳ್ಳಯ್ಯನಗಿರಿಗೆ ಅಪಾಯ ಎಂದು ಹೇಳಲಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು, ಈ ಕಾಮಗಾರಿಗೆ ಬ್ರೇಕ್​​ ಹಾಕುವ ಕೆಲಸ ಮಾಡಿಲ್ಲ, ಇದೀಗ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ