ಚಿಕ್ಕಮಗಳೂರು: ಆನೆಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು; ಜೀವ ಉಳಿಸಿಕೊಳ್ಳಲು ಬೆಳೆ ನಾಶಕ್ಕೆ ಮುಂದಾದ ಮಲೆನಾಡಿಗರು, ಇಲ್ಲಿದೆ ವಿವರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 10, 2023 | 10:09 PM

ಅವರು 3ರಿಂದ5 ಎಕರೆಯ ಸಣ್ಣ ಬೆಳೆಗಾರರು. ಮಿಶ್ರ ಬೆಳೆಯೇ ಅವರ ಬದುಕಿನ ಆಧಾರ. ಕಾಫಿ ನಾಶವಾದ್ರೆ, ಮೆಣಸು. ಮೆಣಸು ಕೈಕೊಟ್ರೆ ಬಾಳೆ. ಬಾಳೆಗೂ ಬೆಲೆ ಬರದಿದ್ರೆ ಅಡಿಕೆ. ಹೀಗೆ ಮೂರ್ನಾಲ್ಕು ಬೆಳೆ ಬೆಳೆದು ವಾರ್ಷಿಕ ಬದುಕಿನ ಬಂಡಿ ಸಾಗಿಸುವ ಮಿಡ್ಲ್ ಕ್ಲಾಸ್ ಫಾರ್ಮರ್ಸ್. ಆದ್ರೆ, ಬೇರೆ ದಾರಿ ಇಲ್ಲ. ತಾವೇ ಮಕ್ಕಳಂತೆ ಸಾಕಿದ್ದ ಬೆಳೆಯನ್ನು ಫಸಲಿಗೆ ಬರುತ್ತಿದ್ದಂತೆ ಕಡಿದು ಹಾಕುತ್ತಿದ್ದಾರೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ

ಚಿಕ್ಕಮಗಳೂರು: ಆನೆಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು; ಜೀವ ಉಳಿಸಿಕೊಳ್ಳಲು ಬೆಳೆ ನಾಶಕ್ಕೆ ಮುಂದಾದ ಮಲೆನಾಡಿಗರು, ಇಲ್ಲಿದೆ ವಿವರ
ಚಿಕ್ಕಮಗಳೂರು
Follow us on

ಚಿಕ್ಕಮಗಳೂರು, ಸೆ.10: ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲೆನಾಡು ಭಾಗವಾದ ಅರೆನೂರು ಗ್ರಾಮದ ರೈತರು ಫಸಲಿಗೆ ಬಂದ ಬೆಳೆಯನ್ನು ಕಡಿದು ಹಾಕಿದ್ದಾರೆ. ಹೌದು, ಅರೆನೂರು ಗ್ರಾಮಕ್ಕೆ ಕಳೆದ10 ದಿನಗಳಿಂದ 9 ಕಾಡಾನೆಗಳು(Elephant) ದಾಂಗುಡಿ ಇಟ್ಟಿವೆ. ಬಂದ ಮೊದಲ ದಿನವೇ ಒಂದು ಬಲಿ ಕೂಡ ಪಡೆದಿವೆ. ಇದೀಗ, ಅರೆನೂರು ಗ್ರಾಮದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು ಬಾಳೆ ತಿನ್ನುವುದಕ್ಕಾಗಿ ಕಣ್ಣಿಗೆ ಕಂಡ ತೋಟಕ್ಕೆಲ್ಲ ನುಗುತ್ತಿವೆ. ಮಿಶ್ರ ಬೆಳೆಯಲ್ಲಿ ಬದುಕು ಸಾಗಿಸುತ್ತಿರುವ ಬೆಳೆಗಾರರು ಇತರೆ ಬೆಳೆ ಉಳಿಸಿಕೊಳ್ಳೋಕೆ ಸಾಲ-ಸೋಲ ಮಾಡಿ ಬೆಳೆದ ಬಾಳೆ ಬೆಳೆಯನ್ನು ತಾವೇ ಕಡಿದು ಹಾಕುತ್ತಿದ್ದಾರೆ.

ಬದುಕು ಉಳಿಸಿಕೊಳ್ಳಲು ಬೆಳೆ ನಾಶಕ್ಕೆ ಮುಂದಾದ ಮಲೆನಾಡಿಗರು

10 ದಿನಗಳಿಂದ ಕಾಡಾನೆಗಳಿಂದ ನೆಮ್ಮದಿ ಕಳೆದುಕೊಂಡಿರುವ ಮಲೆನಾಡಿಗರು ಬದುಕು ಉಳಿಸಿಕೊಳ್ಳೋಕೆ ಬೆಳೆ ನಾಶಕ್ಕೆ ಮುಂದಾಗಿದ್ದಾರೆ. ಅರೆನೂರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಗ್ರಾಮಸ್ಥರು ತಮ್ಮ ತೋಟದಲ್ಲಿರುವ ಬಾಳೆಯನ್ನು ಕಡಿದು ನೆಲಕ್ಕುರುಳಿಸಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ಕೊಡಗಿನಲ್ಲಿ ಮುಂದುವರಿದ ಕಾಡಾನೆ ಉಪಟಳ‌: ಪುಂಡಾನೆಯನ್ನ ಕಾಡಿಗೆ ಓಡಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

ಎಂಟು ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆ ತಿನ್ನಬೇಕು ಅಂತಿಲ್ಲ. ಎಂಟತ್ತು ಕಾಡಾನೆಗಳ ಗುಂಪು ತೋಟದಲ್ಲಿ ಸುಮ್ನೆ ಹೋದರು ಸಾಕು. ಆನೆಗಳ ಒಂದೊಂದು ಹೆಜ್ಜೆಗೂ ಮೂರ್ನಾಲ್ಕು ವರ್ಷದ ಒಂದೊಂದು ಕಾಫಿ ಗಿಡಗಳು ನಾಶವಾಗುತ್ತದೆ. ಹಾಗಾಗಿ, ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಾಡಾನೆಗಳ ಹಿಂಡಿನಲ್ಲಿ ಒಂದು ಮರಿ ಆನೆ ಇರೋದ್ರಿಂದ ಆನೆಗಳು ನಿಧಾನ ಸಂಚರಿಸುತ್ತಿತ್ತು, ಮರಿ ಆನೆಯನ್ನು ತಳ್ಳಿಕೊಂಡು ಹೋಗುತ್ತಿವೆ. ಹಾಗಾಗಿ, ದಿನಕ್ಕೆ 500 ಮೀಟರ್ ಹೋದರೆ ಹೆಚ್ಚು.

ಆನೆ ಓಡಿಸೋಕ್ಕೆಂದು ಸಂಜೆ 3 ಗಂಟೆ ವೇಳೆಗೆ ಬರುವ ಅರಣ್ಯ ಇಲಾಖೆ ಸಿಬ್ಬಂದಿಗಳು 5 ಗಂಟೆಗೆ ಹೋಗುತ್ತಾರೆ. 500 ಮೀಟರ್ ಓಡಿಸಿ ಹೋಗುತ್ತಾರೆ. ಅವು, ಬೆಳಗ್ಗೆ ಮತ್ತೊಂದು ತೋಟದಲ್ಲಿ ಇರುತ್ತವೆ. ಬೆಳೆಗಾರರು ನಾವು ಅರಣ್ಯ ಅಧಿಕಾರಿಗಳಿಂದಲೇ ಬೆಳೆ ಕಳೆದುಕೊಳ್ಳುತ್ತಿದ್ದಾರೆ ಎಂದು ಇಲಾಖೆ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಒಟ್ಟಾರೆ, ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಗೆ 3ರಿಂದ5 ಎಕರೆಯ ಸಣ್ಣ-ಸಣ್ಣ ಬೆಳೆಗಾರರು ಬೆಳೆ ಕಳೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯಗೊಂಡ ಕಾಡಾನೆ ನರಳಾಟ

ಅರಣ್ಯ ಅಧಿಕಾರಿಗಳಿಗೆ ಹೇಳಿ ಸಾಕಾದ ಕಾರಣ ಇದೀಗ ಒಂದು ಬೆಳೆ ಉಳಿಸಿಕೊಳ್ಳಲು ರೈತರೇ ಮತ್ತೊಂದು ಬೆಳೆಯನ್ನು ಕಡಿದು ಹಾಕುತ್ತಿದ್ದಾರೆ. ಆದರೂ, ಅರಣ್ಯ ಅಧಿಕಾರಿಗಳು ಸಮರ್ಪಕವಾಗಿ ಆನೆ ಓಡಿಸುವ ಕೆಲಸ ಮಾಡುತ್ತಿಲ್ಲ. ಅರಣ್ಯ ಅಧಿಕಾರಿಗಳು ಕೂಡಲೇ ಆನೆಗಳನ್ನು ಓಡಿಸದಿದ್ದರೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ, ಮುಂದಾಗೋ ಅನಾಹುತಕ್ಕೆ ನೀವೇ ಜವಾಬ್ದಾರಿ ಎಂದು ಅರಣ್ಯ ಇಲಾಖೆಗೆ ಎಚ್ಚರಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ