ಕೊಡಗಿನಲ್ಲಿ ಮುಂದುವರಿದ ಕಾಡಾನೆ ಉಪಟಳ: ಪುಂಡಾನೆಯನ್ನ ಕಾಡಿಗೆ ಓಡಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಬಲಿ
ಹಾಸನ ಜಿಲ್ಲೆಯ ಆಲೂರಿನಲ್ಲಿ ಆನೆ ದಾಳಿಗೆ ಶಾರ್ಪ್ ಶೂಟರ್ ಸಾವಿನ ಪ್ರಕರಣ ಮಾಸುವ ಮುನ್ನವೆ ಇದೀಗ ಕೊಡಗಿನಲ್ಲೂ ಅಂತಹದ್ದೇ ಪ್ರಕರಣ ನಡೆದಿದೆ. ಕಾಡಾನೆ ಕಾರ್ಯಚರಣೆಗೆ ತೆರಳಿದ್ದ RRT ಸಿಬ್ಬಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೊಡಗಿನಲ್ಲಿ ಕಾಡಾನೆಗಳು ಮನುಷ್ಯರನ್ನು ಬಲಿ ಪಡೆದ ನಾಲ್ಕನೇ ಪ್ರಕರಣ ಇದಾಗಿದೆ.
ಕೊಡಗು, (ಸೆಪ್ಟೆ.ಬರ್ 05): ಕೊಡಗು ಜಿಲ್ಲೆಯಲ್ಲಿ(Kodagu district) ದಿನೆ ದಿನೇ ಕಾಡಾನೆಗಳ (Elephant) ಉಪಟಳ ಹೆಚ್ಚಾಗುತ್ತಿದೆ. ದಿನ ಬೆಳಗಾದರೆ ಸಾಕು ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡಾನೆಗಳು ಒಂದಿಲ್ಲೊಂದು ಅವಾಂತರಗಳನ್ನ ಸೃಷ್ಟಿಸುತ್ತಿವೆ. ನಿನ್ನೆಯೂ(ಆಗಸ್ಟ್ 04) ಕೊಡಗು(Kodagu) ಜಿಲ್ಲೆ ಮಡಿಕೇರಿ ಸಮೀಪದ ಕೆದಕಲ್ ಬಳಿ ಕಾಡಾನೆ ಕಂಡು ಬಂದಿದ್ದು, ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಇಂದರಿಂದ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಂಟಿಕೊಪ್ಪದಿಂದ ಕೆಲಸಕ್ಕೆಂದು ಡಿ ಬ್ಲಾಕ್ ಬಳಿ ತೆರಳುತ್ತಿದ್ದ ವೇಳೆ ಏಕಾಏಕಿ ನುಗ್ಗಿ ದಾಳಿ ನಡೆಸಿದೆ. ಅಲ್ಲಿಂದ ಪಲಾಯನ ಮಾಡಿದ ಕಾಡಾನೆ, ಹಬೀಬ್ ತೋಟದತ್ತ ತೆರಳುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ನಡೆಸಿದೆ. ಇನ್ನು ಪುಂಡಾನೆಯನ್ನ ಕಾಡಿಗೆ ಓಡಿಸಲು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ.
ಒಂಟಿ ಸಲಗದ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ
ಕಾಡಾನೆ ದಾಳಿ ವಿಚಾರ ತಿಳಿದ ಆರಣ್ಯ ಇಲಾಖೆ ಸಿಬ್ಬಂದಿ, ಪುಂಡಾನೆಯನ್ನ ಕಾಡಿಗೆ ಓಡಿಸಲು ಮುಂದಾಗಿದ್ದಾರೆ. ಕುಶಾಲನಗರದ RRT ಸಿಬ್ಬಂದಿಗಳು ಸೇರಿದಂತೆ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ರು. ಆನೆ ಓಡಿಸುವಾಗ ದೀಢಿರಾಗಿ ಬಂದ ಕಾಡಾನೆ ಏಕಾಏಕಿ ಸಿಬ್ಬಂದಿ ಆರ್ಆರ್ಟಿ ಗಿರೀಶ್ ಮೇಲೆ ದಾಳಿ ನಡೆಸಿದೆ. ಓಡಿ ಹೋಗಲು ಯತ್ನಿಸಿದಾಗ ಆಯತಪ್ಪಿ ಬಿದ್ದ RRT ಸಿಬ್ಬಂದಿಯ ಎದೆಭಾಗಕ್ಕೆ ಆನೆ ತುಳಿದಿದೆ. ತೀವ್ರವಾಗಿ ಗಾಯಗೊಂಡ ಗಿರೀಶ್ನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು
ಆಹಾರ ಅರಸಿ ನಾಡಿಗೆ ಲಗ್ಗೆ ಇಡುವ ಪುಂಡಾನೆಗಳು ತಿಂಗಳ ಅಂತರದಲ್ಲಿ ಜಿಲ್ಲೆಯ ವಿವಿಧೆಡೆ ಮೂವರ ಮೆಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿವೆ. ಅರಣ್ಯ ಸಿಬ್ಬಂದಿ ಮಾತ್ರ ರಾತ್ರಿಹಗಲು ಎನ್ನದೇ ಆನೆ ಕಾರ್ಯಚರಣೆಯಲ್ಲಿ ತೊಡಗುತ್ತಿದ್ದಾರೆ. ಸದ್ಯ ಮೃತ ಗಿರೀಶ್ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಲಾಗಿದೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ತಾರಕ್ಕಕೇರಿದ್ದು ಕಾಡಾನೆದಾಳಿಯಿಂದ ಅಮಾಯಕ ಜೀವಗಳು ಬಲಿಯಾಗೋದು ಮಾತ್ರ ನಿಂತಿಲ್ಲ.