ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು
ಚಿಕಿತ್ಸೆ ನೀಡಲು ಮುಂದಾದ ವೈದ್ಯನ ಜೊತೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಗಾಯಗೊಂಡಿದ್ದ ಕಾಡಾನೆ ಭೀಮ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಸಿಬ್ಬಂದಿ ಹಾಸನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಾಳಿ ನಡೆಸಿದ ಭೀಮ, ಈ ಹಿಂದೆ ಯಾರ ಮೇಲೂ ದಾಳಿ ನಡೆಸಿರಲಿಲ್ಲ. ಇದೇ ಮೊದಲ ಬಾರಿಗೆ ಭೀಮ ದಾಳಿ ನಡೆಸಿದ್ದಾನೆ.
ಹಾಸನ, ಆಗಸ್ಟ್ 31: ಚಿಕಿತ್ಸೆ ನೀಡಲು ಬಂದ ವೈದ್ಯನ ಜೊತೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ಭೀಮ ದಾಳಿ (Elephant Attack) ನಡೆಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಬಳಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿ ವೆಂಕಟೇಶ್, ಹಾಸನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಚಿಕಿತ್ಸೆ ನೀಡುವ ಮುನ್ನ ಅರವಳಿಕೆ ಚುಚ್ಚುಮದ್ದು ನೀಡುವಾಗ ನಡೆದ ಎಡವಟ್ಟಿನಿಂದಾಗಿ ಈ ಘಟನೆ ಸಂಭವಿಸಿದೆ. ಗಾಯಗೊಂಡ ಭೀಮನನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಹಳ್ಳಿಯೂರು ಬಳಿ ವೆಂಕಟೇಶ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದ್ದರು.
ಈ ವೇಳೆ ಏಕಾಏಕಿಯಾಗಿ ಭೀಮ ವೆಂಕಟೇಶ್ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಆನೆ ಸೆರೆ ವೇಳೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದ ಅನುಭವವನ್ನು ವೆಂಕಟೇಶ್ ಹೊಂದಿದ್ದರು.
ಇದನ್ನೂ ಓದಿ: ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯಗೊಂಡ ಕಾಡಾನೆ ನರಳಾಟ
ದಾಳಿ ನಡೆಸಿದ ಗಾಯಾಳು ಭೀಮ ಸೌಮ್ಯ ಸ್ವಭಾವ ಹೊಂದಿದ್ದ. ಈ ಹಿಂದೆ ಯಾರ ಮೇಲೂ ದಾಳಿ ನಡೆಸಿರಲಿಲ್ಲ. ಇದೇ ಮೊದಲ ಬಾರಿ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಆಲೂರು ತಾಲ್ಲೂಕಿನ, ಹೊನ್ನವಳ್ಳಿ ಗ್ರಾಮದ ವೆಂಕಟೇಶ್, 1987 ರಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದ್ದರು. 2019 ರವರೆಗೂ ಖಾಯಂ ಆಗದೆ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಬಿಡುಗಡೆ ಆಗಿದ್ದರು. 2019 ರಲ್ಲಿ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯಿಂದ ಮುಕ್ತಿ ನೀಡಲಾಗಿತ್ತು. ಆದರೂ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ವೆಂಕಟೇಶ್ ಅವರ ಪಾತ್ರ ಮುಖ್ಯವಾಗಿತ್ತು. ಹಾಗಾಗಿ ಪ್ರತಿ ಕಾರ್ಯಾಚರಣೆ ವೇಳೆ ವೆಂಕಟೇಶ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದರು. ಹುಲಿ, ಚಿರತೆ, ಕರಡಿ ಸೆರೆ ಕಾರ್ಯಾಚರಣೆಯಲ್ಲಿ ವೆಂಕಟೇಶ್ ರದ್ದೆ ಪ್ರಮುಖ ಪಾತ್ರ. ಶಾರ್ಪ್ ಶೂಟರ್ ಆಗಿದ್ದ ವೆಂಕಟೇಶ್ ಅವರು ನರಹಂತಕ ಕಾಡಾನೆಗಳನ್ನು ಅರವಳಿಕೆ ಚುಚ್ಚುಮದ್ದು ನೀಡಿ ಕೆಡವುತ್ತಿದ್ದರು.
ಕಾಡಾನೆಗಳ ಸ್ಥಳಾಂತರ, ರೆಡಿಯೋ ಕಾಲರ್ ಅಳವಡಿಕೆಯಲ್ಲಿ ವೆಂಕಟೇಶ್ ಬಹುಮುಖ್ಯ ಪಾತ್ರ ವಹಿಸುತ್ತಿದ್ದರು. ಹುಲಿ, ಚಿರತೆ, ಕರಡಿಗಳಿಗೂ ಚುಚ್ಚುಮದ್ದು ನೀಡಿ ಕೆಡವುತ್ತಿದ್ದ ವೆಂಕಟೇಶ್ ಅವರು ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಅನೇಕ ಹೊರ ರಾಜ್ಯಗಳಲ್ಲೂ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಹಾಸನ, ಕಳಸ, ಕೊಪ್ಪ, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಕಾಡಾನೆ ಸೇರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೆಂಕಟೇಶ್ ಅವರು ಇದುವರೆಗೂ ಯಾರ ಮೇಲೂ ದಾಳಿ ಮಾಡದ ಭೀಮ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಮಲೆನಾಡು ಭಾಗದಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ಎಂದೇ ಪ್ರಸಿದ್ಧರಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Thu, 31 August 23