ಚಿಕ್ಕಮಗಳೂರು: ಅರೇನೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾಫಿ, ಅಡಿಕೆ ಬೆಳೆ ನಾಶ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಗೆ ಕಾಫಿ, ಬಾಳೆ, ಅಡಕೆ, ಮೆಣಸು ಬೆಳೆ ನಾಶಗೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಕಳೆದ 1 ವಾರದಿಂದ ಗ್ರಾಮದಲ್ಲೇ ಬೀಡುಬಿಟ್ಟಿರುವ ಕಾಡಾನೆ ಹಿಂಡು ನಿರಂತರವಾಗಿ ಬೆಳೆ ನಾಶ ಮಾಡುತ್ತಿವೆ.
ಚಿಕ್ಕಮಗಳೂರು, ಸೆ.7: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಅರೇನೂರು ಗ್ರಾಮದಲ್ಲಿ ಕಳೆದ 1 ವಾರದಿಂದ ಬೀಡುಬಿಟ್ಟಿರುವ ಕಾಡಾನೆ (Wild Elephant) ಹಿಂಡು ನಿರಂತರವಾಗಿ ಬೆಳೆ ನಾಶ ಮಾಡುತ್ತಿವೆ. ನಿನ್ನೆ ಕೂಡ ಕೃಷಿ ಜಮೀನುಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಕೆ, ಮೆಣಸು ಬೆಳೆ ನಾಶಗೊಳಿಸಿವೆ.
ಕಳೆದ ಭಾನುವಾರ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಕಾಡಾನೆ ದಾಳಿಯ ಭಯದಲ್ಲಿರುವಾಗಲೇ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶಗೊಳಿಸಿರುವುದರಿಂದ ಆನೆ ನಮ್ಮ ಮೇಲೆ ಯಾವಾಗ ದಾಳಿ ನಡೆಸುತ್ತೋ ಎಂಬ ಆತಂಕದಲ್ಲಿ ಗ್ರಾಮದ ಜನರು ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ಕಾಡಾನೆ ಉಪಟಳ: ಪುಂಡಾನೆಯನ್ನ ಕಾಡಿಗೆ ಓಡಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಬಲಿ
ಆಲ್ದೂರು ವಲಯದ ಬನ್ನೂರು ಸಮೀಪ ಅರೆನೂರು ದುರ್ಗಕ್ಕೆ ಹೋಗುವ ದಾರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂಡು ಹಾಕಿತ್ತು. ಸಕಲೇಶಪುರ ಆಲ್ದೂರು ಸಮೀಪ ಶಾರ್ಪ್ ಶೂಟರ್ ಒಬ್ಬರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದ ಘಟನೆ ನಡೆದ ಎರಡೇ ದಿನಕ್ಕೆ ಈ ಘಟನೆ ನಡೆದಿತ್ತು.
ಗಾಯಗೊಂಡಿದ್ದ ಆನೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಅರವಳಿಕೆ ನೀಡುತ್ತಿದ್ದಾ ಏಕಾಏಕಿ ದಾಳಿ ನಡೆಸಿದ ಭೀಮ ಎಂಬ ಕಾಡಾನೆ ಮಲೆನಾಡ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಎರಡು ಮದಗಜಗಳ ನಡುವೆ ಕಾಳಗ: ಗಂಡಾನೆ ಸಾವು
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ದೊಡ್ಡ ಮಾಕಳಿ ಅರಣ್ಯಪ್ರದೇಶದಲ್ಲಿ ಎರಡು ಆನೆಗಳ ಕಾಳಗದಲ್ಲಿ 19 ವರ್ಷದ ಗಂಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ. ಆನೆಯ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಗಾಯಗಳಾಗಿ ತೀವ್ರ ರಕ್ತ ಸ್ರಾವದಿಂದ ಆನೆ ಸಾವನ್ನಪ್ಪಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಆನೆಗಳ ಕಾದಾಟ ಇದಾಗಿದೆ. ಇಂದು ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ