ಚಿಕ್ಕಮಗಳೂರು: ‘ಕೆಲಸ ಮಾಡಿ ಓಟ್ ತಗೋಳಿ’ ಎಂದು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು
ಜಿಲ್ಲೆಯಲ್ಲಿ ಈ ಬಾರಿ ಚುನಾವಣಾ ಬಹಿಷ್ಕಾರದ ಕೂಗು ಜೋರಾಗಿದೆ. ಮೂಲಸೌಕರ್ಯಗಳಾದ ನೀರು, ರಸ್ತೆ, ಸೂರು ಇಲ್ಲದೆ ಈ ತಾಲೂಕಿನ ಜನರು ಹೈರಾಣಾಗಿದ್ದಾರೆ. ಅದಕ್ಕೊಸ್ಕರ ಈ ಬಾರಿ ಕೆಲಸ ಮಾಡಿ ಓಟ್ ತಗೋಳಿ ಎಂದು ಗ್ರಾಮಗಳ ಮುಂದೆಯೇ ಬಹಿಷ್ಕಾರದ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಸ್ತೆ, ನೀರು, ಸೂರು ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿಯೇ ಮಲೆನಾಡು ಭಾಗದಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಹಿಷ್ಕಾರದ ಕೂಗು ಕೇಳುತ್ತಿದೆ. ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ ಹಾಗೂ ಕೊಪ್ಪ ಕಾಫಿನಾಡ ಮಲೆನಾಡು ಭಾಗ. ಇಲ್ಲಿ ಜನವಸತಿಗಿಂತ ಅರಣ್ಯ-ಕಾಫಿತೋಟವೇ ಹೆಚ್ಚಿದೆ, ಅದೇ ರೀತಿ ಸಮಸ್ಯೆಗಳು ಕೂಡ ಅಷ್ಟೆ ಇವೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಬಿದಿರುತಳ, ಮಧುಗುಂಡಿ, ದಿಣ್ಣೆಕೆರೆ. ಕಳಸ ತಾಲೂಕಿನ ಶಂಕರಕೂಡಿಗೆ, ಸಂಸೆ, ಬಸ್ತಿಗದ್ದೆ. ಕೊಪ್ಪ ತಾಲೂಕಿನಲ್ಲಿ ಹಾಡುಗಾರ ಗ್ರಾಮ. ಶೃಂಗೇರಿಯಲ್ಲಿ ಚಿತ್ರವಳ್ಳಿ ಇಂತಹ ಹಳ್ಳಿಗಳು ಇನ್ನೂ ಹತ್ತಾರಿವೆ. ಎಲ್ಲರ ಬೇಡಿಕೆಯೂ ಒಂದೇ ಆಗಿದ್ದು ರಸ್ತೆ, ನೀರು, ಸೂರು ಸರಿಯಾಗಿ ನೀಡಿ ಎನ್ನುವುದಾಗಿದೆ.
ಸರ್ಕಾರಿ ಅಧಿಕಾರಿಗಳು ಇಷ್ಟು ದಿನ ಏನ್ ಮಾಡಿದ್ರು ಎನ್ನುವ ಪ್ರಶ್ನೆ ಮೂಡೋದು ಸಹಜ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಬಿದಿರುತಳ, ಮಧುಗುಂಡಿ ಜನ 2019ರ ಭಾರೀ ಮಳೆಗೆ ಸರ್ಕಾರದಿಂದಲೇ ಪುನರ್ವತಿಗೊಂಡವರು. ಆದರೆ ಇಂದಿಗೂ ಅವರಿಗೆ ರಸ್ತೆ, ಚರಂಡಿ, ನೀರು, ವಿದ್ಯುತ್ ಯಾವ ಸೌಲಭ್ಯವೂ ಇಲ್ಲ. ಹಾಗಾಗಿ ಮಲೆನಾಡು ತಾಲೂಕುಗಳ ಒಂದೊಂದು ಹಳ್ಳಿಯಲ್ಲಿ ಒಂದೊಂದು ಸಮಸ್ಯೆಯಿದೆ. ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ ಸುಸ್ತಾದ ಜನ ಈಗ ಕೆಲಸ ಮಾಡಿ ಓಟ್ ತಗೋಳಿ ಎಂದು ಗ್ರಾಮಗಳ ಮುಂದೆಯೇ ಬಹಿಷ್ಕಾರದ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಚುನಾವಣಾ ಬಹಿಷ್ಕಾರ ಹೋರಾಟ: ಕೆಂಚಿಕೊಪ್ಪ ಗ್ರಾಮಸ್ಥರಿಂದ ದಾಖಲೆ ಪತ್ರ ಮಾಡಿಸಿಕೊಡುವಂತೆ ಒತ್ತಾಯ
ಇನ್ನು ಊರಿಗೆ ಟವರ್ ಬರಲಿ, ಮೊಬೈಲ್‍ಗೆ ಓಟಿಪಿ ಬರಲಿ, ನಾವು ಬೂತಿಗೆ ಬರ್ತೀವಿ ಅಂತ ಕಳಸ ತಾಲೂಕಿನ ಬಲಿಗೆ, ಮೆಣಸಿನಹಾಡ್ಯ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ ಸಾರಾಸಗಟಾಗಿ ಎಲೆಕ್ಷನ್ ಬೈಕಾಟ್ ಮಾಡಿದ್ದಾರೆ. ಈ ಕುಗ್ರಾಮದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಬಿ.ಎಸ್.ಎನ್.ಎಲ್. ನೆಟ್ವರ್ಕ್ಗೆ ಸರ್ಕಾರ ಹಾಲು-ತುಪ್ಪ ಬಿಟ್ಟ ಮೇಲೆ ಇಲ್ಲಿನ ಜನ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ. ಇಲ್ಲಿನ ಜನಕ್ಕೆ ಮೊಬೈಲ್ ಟವರ್ ಕೂಡ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ.
ಬ್ಯಾಂಕ್, ಪಡಿತರ ಸೇರಿದಂತೆ ಎಲ್ಲಿಗೆ ಹೋದ್ರು ಒಟಿಪಿ ಕೇಳ್ತಾರೆ. ಆದರೆ ಟವರ್ ಇಲ್ಲದೆ ಇವರಿಗೆ ಒಟಿಪಿ ಬರ್ತಿಲ್ಲ. ಇಲ್ಲಿನ ಜನ ನಾವು ಯಾವುದೇ ಕಾರಣಕ್ಕೂ ಮತಕೇಂದ್ರಕ್ಕೆ ಹೋಗಲ್ಲ. ಟವರ್ ಬಂದರೆ ಹೋಗ್ತೀವಿ ಅಂತಿದ್ದಾರೆ. ಈ ಭಾಗದಲ್ಲಿ ಕಳ್ಳತನ ಕೂಡ ಹೆಚ್ಚಾಗಿದೆಯಂತೆ. ಈ ಮಧ್ಯೆ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಐದು ಕಿ.ಮೀ.ದೂರ ಹೋಗಿ ಫೋನ್ ಮಾಡಿ ಗಾಡಿ ತರಬೇಕು. ಹಾಗಾಗಿ ನಮಗೆ ಟವರ್ ಅತ್ಯಗತ್ಯವಾಗಿದೆ. ಟವರ್ ಇಲ್ಲದೆ ಓಟಿಲ್ಲ ಎಂದು ವ್ಯವಸ್ಥೆ ವಿರುದ್ಧ ರೆಬಲ್ ಆಗಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ತಾಲೂಕಿನ ಜನ ಕೂಡ ಹಕ್ಕುಪತ್ರ ನೀಡದೆ ಓಟು ಹಾಕಲ್ಲ ಅಂತ ಎಲೆಕ್ಷನ್ ಬೈಕಾಟ್ ಮಾಡಿದ್ದಾರೆ.
ಇದನ್ನೂ ಓದಿ: Assembly Polls: ಈಗ ಬಿರಿಯಾನಿ ತಿನ್ನಲು ಬರುವ ಜನ ಮತದಾನ ದಿನದಂದು ಬೂತಿಗೆ ಬಂದು ಬಾಡೂಟ ಹಾಕಿಸಿದವನಿಗೆ ವೋಟು ಹಾಕತ್ತಾರೆಯೇ?
ಒಟ್ಟಾರೆ ಕಾಫಿನಾಡ ಮಲೆನಾಡು ಭಾಗದ ಹಳ್ಳಿಗಳಲ್ಲಿ ನೂರಾರು ಸಮಸ್ಯೆಗಳಿವೆ. ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ ಬೇಡಿಕೊಂಡ ರೀತಿ ಎಲ್ಲಾ ಮುಗಿದಿರೋದ್ರಿಂದ ಜನ ಅನಿವಾರ್ಯವಾಗಿ ಬಹಿಷ್ಕಾರದ ಮೊರೆ ಹೋಗಿದ್ದಾರೆ. ಈಗಾದರೂ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತಾರೋ ಇಲ್ಲವೋ ಕಾದುನೋಡಬೇಕಿದೆ.
ವರದಿ: ಅಶ್ವಿತ್ ಮಾವಿನಗುಣಿ ಟಿವಿ9 ಚಿಕ್ಕಮಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Fri, 3 March 23