ಸಿಟಿ ರವಿ ಬಂಧನ ವಿರೋಧಿಸಿ ಪ್ರತಿಭಟಿಸಿದ್ದ ಬಿಜೆಪಿಗರ ವಿರುದ್ಧ ಎಫ್​ಐಆರ್​

| Updated By: ವಿವೇಕ ಬಿರಾದಾರ

Updated on: Dec 21, 2024 | 12:11 PM

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಚಿವ, ಬಿಜೆಪಿ ಎಂಎಲ್​ಸಿ ಸಿಟಿ ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಈ ಬಂಧನ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಮುಂದೇನಾಯ್ತು? ಈ ಸ್ಟೋರಿ ಓದಿ.

ಸಿಟಿ ರವಿ ಬಂಧನ ವಿರೋಧಿಸಿ ಪ್ರತಿಭಟಿಸಿದ್ದ ಬಿಜೆಪಿಗರ ವಿರುದ್ಧ ಎಫ್​ಐಆರ್​
ಬಿಜೆಪಿ, ಸಿಟಿ ರವಿ
Follow us on

ಚಿಕ್ಕಮಗಳೂರು, ಡಿಸೆಂಬರ್​ 21: ಮಾಜಿ ಸಚಿವ, ಎಂಎಲ್​ಸಿ ಸಿ.ಟಿ.ರವಿ (CT Ravi) ಬಂಧನ ಖಂಡಿಸಿ ಚಿಕ್ಕಮಗಳೂರಿನಲ್ಲಿ (Chikkamgaluru) ಪ್ರತಿಭಟನೆ ನಡೆಸಿದ್ದ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ (BJP Activist) ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಯುವ ಮೋರ್ಚಾ‌ ಜಿಲ್ಲಾಧ್ಯಕ್ಷ ಸಂತೋಷ್ ಸೇರಿ ಹಲವರ ವಿರುದ್ಧ ಬಸವನಹಳ್ಳಿ ಠಾಣೆಯಲ್ಲಿ ಐದು, ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಕೇಸ್ ದಾಖಲಾಗಿವೆ.

ಅನುಮತಿ ಇಲ್ಲದೆ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ದು, ಬೈಕ್, ಟೈರ್‌ ಸುಟ್ಟಿದ್ದು, ಹೆದ್ದಾರಿ ತಡೆ, ಸಾರ್ವಜನಿಕರ ಶಾಂತಿಗೆ ಭಂಗ ಮತ್ತು ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋಪದಡಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ನಡೆದಿದ್ದು ಏನು?

ಗುರುವಾರ ಮಧ್ಯಾಹ್ನ ವಿಧಾನ ಪರಿಷತ್​ ಗದ್ದಲದಿಂದ ಕೂಡಿತ್ತು. ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾಗ್ಯುದ್ಧ ನಡೆದಿತ್ತು. ವಾಗ್ವಾದದ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಿಜೆಪಿ​ ಎಂಎಲ್​ಸಿ ಸಿಟಿ ರವಿ ಅವರಿಗೆ ಕೊಲೆಗಾರ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಗೂಂಡಾಗಿರಿಗೆ ಗೂಂಡಾಗಿರಿ ಉತ್ತರವಲ್ಲ, ಕಾನೂನು ಮೂಲಕ ಹೋರಾಟ ಮಾಡುವೆ: ಸಿಟಿ ರವಿ

ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಅದೇ ದಿನ ಸಂಜೆ 6 ಗಂಟೆ ಸುಮಾರಿಗೆ ಸಿಟಿ ರವಿಯವರನ್ನು ಬಂಧಿಸಿದ್ದರು. ಬಳಿಕ ಪೊಲೀಸರು ರಾತ್ರಿ ಇಡೀ ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದರು.

ಸಿಟಿ ರವಿ ಬಂಧನ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಶುಕ್ರವಾರ ದಿಢೀರ್​ ಪ್ರತಿಭಟನೆ ನಡೆಸಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಮತ್ತು ಸಾರ್ವಜನಿಕ ಶಾಂತಿ ಭಂಗವಾಗಿದೆ ಎಂದು ಪೊಲೀಸರು ಎಫ್​ಐಆರ್ ದಾಖಲಸಿದ್ದಾರೆ.

ಸದ್ಯ ಸಿಟಿ ರವಿ ಅವರಿಗೆ ಹೈಕೋರ್ಟ್​ ಶರತ್ತು ಬದ್ಧ ರಿಲೀಫ್​ ನೀಡಿದೆ. ಸಿಟಿ ರವಿಯವರನ್ನು ಬಂಧಿಸಿ ಬೆಂಗಳೂರಿಗೆ ಕಾರಿನಲ್ಲಿ ಕರೆದುಕೊಂಡು ಬರುತ್ತಿರುವಾಗಲೇ, ಹೈಕೋರ್ಟ್​ ತತಕ್ಷಣವೇ ಸಿಟಿ ರವಿಯರವನ್ನು ಬಿಡುವಂತೆ ಆದೇಶಿಸಿತ್ತು. ಸಿಟಿ ರವಿಯವರ ಬಂಧನ ವಿರೋಧಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:49 am, Sat, 21 December 24