ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ: ಮದ್ಯ ಮಾರಾಟ ನಿಷೇಧ, ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ, ಹೈ ಅಲರ್ಟ್ ಘೋಷಿಸಲಾಗಿದೆ. ಮದ್ಯ ಮಾರಾಟ, ವಾರದ ಸಂತೆ, ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಶಾಂತಿ ಕಾಪಾಡಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಟಿಪ್ಪು ಸುಲ್ತಾನ್ ವಿವಾದದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ತಿರಂಗಾಯಾತ್ರೆಗೆ ಅನುಮತಿ ನಿರಾಕರಿಸಲಾಗಿದ್ದು, ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ: ಮದ್ಯ ಮಾರಾಟ ನಿಷೇಧ, ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
ಚಿಕ್ಕಮಗಳೂರು
Edited By:

Updated on: Aug 25, 2026 | 2:40 PM

ಚಿಕ್ಕಮಗಳೂರು, ಆ.25: ನಗರದಲ್ಲಿ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆ ಹಾಗೂ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆಗೊಳಿಸಿದ್ದಾರೆ. ಆಗಸ್ಟ್ 26ರ ಬುಧವಾರದಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಚಿಕ್ಕಮಗಳೂರು ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 26ರ ಬುಧವಾರ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್ ಆಗಿರಲಿದೆ. ಪ್ರತಿ ಬುಧವಾರ ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದುಗೊಳಿಸಲಾಗಿದ್ದು, ಇದನ್ನು ಆಗಸ್ಟ್ 28 ಶುಕ್ರವಾರಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ.

ಬುಧವಾರ ಮಧ್ಯಾಹ್ನ ಅಂಡೇಛತ್ರದಿಂದ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆ ಸಾಗುವ ಮುಖ್ಯ ರಸ್ತೆಗಳಲ್ಲಿ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಹನುಮಂತಪ್ಪ ಸರ್ಕಲ್, ಎಂ.ಜಿ. ರಸ್ತೆ (MG Road), ಐ.ಜಿ. ರಸ್ತೆ (IG Road), ಆರ್.ಜಿ. ರಸ್ತೆ (RG Road), ಬಸವನಹಳ್ಳಿ ರಸ್ತೆ ಹಾಗೂ ನಾಯ್ಡು ರಸ್ತೆ ಬಂದ್ ಆಗಲಿದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಸವಾರರು ಹಾಗೂ ಸಾರ್ವಜನಿಕರು ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದ: ಪ್ರಮುಖ ಆರೋಪಿ ಅಫ್ರಿದ್ ಬಂಧನ!

ಹಿಂದೂ ಸಂಘಟನೆಗಳ ತಿರಂಗಾಯಾತ್ರೆಗೆ ಪೊಲೀಸ್ ಅನುಮತಿ ನಿರಾಕರಣೆ:

ಟಿಪ್ಪು ನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ 40 ಅಡಿಯ ಟಿಪ್ಪು ಸುಲ್ತಾನ್ ಕಟೌಟ್ ಹಾಗೂ ಪಾಕಿಸ್ತಾನ ಪರ ಸಾಲುಗಳಿದ್ದ ಹಾಡನ್ನು ಬಳಸಿ ವಿಡಿಯೋ ವೈರಲ್ ಮಾಡಿರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಮತ್ತು ‘ತಿರಂಗಾಯಾತ್ರೆ’ಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಅನುಮತಿ ನಿರಾಕರಣೆಯ ನಡುವೆಯೂ ಬಜರಂಗದಳ, ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಿಜೆಪಿ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ನಗರದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ‘ಹಿಂದೂ ಹಿತ ರಕ್ಷಣಾ ವೇದಿಕೆ’ ಮುಖಂಡರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮತ್ತು ತಿರಂಗಾಯಾತ್ರೆ ನಡೆಸಲು ಅನುಮತಿ ಕೋರಿದ್ದರು. ನಗರ ತಾಲೂಕು ಕಚೇರಿಯಿಂದ ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೆ ಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಈದ್ ಮಿಲಾದ್ ಹಬ್ಬ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಈ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us