Chikmagalur police: ಕಾಫಿನಾಡಿನ ಖಾಕಿಗಳು ಮಲೆನಾಡು ಭಾಗದ ಜನರ ಆತ್ಮರಕ್ಷಣೆಯ ಅಸ್ತ್ರ ಬಂದೂಕಿನ ಮೇಲೆ ಯುದ್ಧ ಸಾರಿದ್ದಾರೆ!
ಇದೀಗ ಚುನಾವಣಾ ಸಮಯ. ಚುನಾವಣೆ ಹೊಸ್ತಿಲಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಪಡೆ ಅಲರ್ಟ್ ಆಗಿದ್ದು, ಅಕ್ರಮ ಬಂದೂಕುಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದೆ. ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಸುಮಾರು 12 ಸಾವಿರ ಬಂದೂಕು ಪರವಾನಗಿ ವಿತರಿಸಲಾಗಿದೆ.
ಕಾಫಿನಾಡಿನ ಖಾಕಿಗಳು (Chikmagalur police) ಮಲೆನಾಡು ಭಾಗದ ಜನರ ಆತ್ಮರಕ್ಷಣೆಯ ಬಂದೂಕು (Gun) ಮೇಲೆ ಯುದ್ಧ ಸಾರಿದ್ದಾರೆ! ಅರೆ ಹುಚ್ಚನೊಬ್ಬನ ಹುಚ್ಚಾಟಕ್ಕೆ ಎರಡು ಅಮಾಯಕ ಜೀವಗಳು ಬಲಿಯಾದ ಬೆನ್ನಲ್ಲೇ ಖಾಕಿ ಪಡೆ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಗೆ ನುಗ್ಗಿ ಅಕ್ರಮ ಬಂದೂಕುಗಳ (weapons) ಮೇಲೆ ಮುಗಿಬಿದ್ದಿದ್ದಾರೆ. ಎರಡೇ ದಿನಕ್ಕೆ 51ಕ್ಕೂ ಹೆಚ್ಚು ಅಕ್ರಮ ಬಂದೂಕುಗಳನ್ನ ವಶಪಡಿಸಿಕೊಂಡಿರೋ ಕಾಫಿನಾಡಿನ ಕಾಪ್ಸ್ ದಾಳಿಯನ್ನ ಇನ್ನೂ ನಿಲ್ಲಿಸಿಲ್ಲ. ಖಾಕಿಗಳ ಈ ದಾಳಿಗೆ ಕಾರಣವೇನು, ಆ ಅರೆ ಹುಚ್ಚನ ಹುಚ್ಚಾಟ ಏನು ಅಂದರೆ… ಕಾಫಿನಾಡಿನ ಮಲೆನಾಡು ಭಾಗದಲ್ಲಿ ಅಕ್ರಮ ಬಂದೂಕಿನಿಂದ ನಡೆದ ಜೋಡಿ ಕೊಲೆ ಬಳಿಕ ಅಲರ್ಟ್ ಆಗಿರೋ ಚಿಕ್ಕಮಗಳೂರು ಪೊಲೀಸರು ಜಿಲ್ಲಾದ್ಯಂತ ಅಕ್ರಮ ಬಂದೂಕುಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರು ಕೇವಲ ಅಕ್ರಮ ಬಂದೂಕುಗಳ ಮೇಲಷ್ಟೆ ದಾಳಿ ಮಾಡುತ್ತಿಲ್ಲ. ಬಂದೂಕು ದುರಸ್ತಿಪಡಿಸುವ ಅಂಗಡಿಗಳ ಮೇಲೂ ದಾಳಿ ಮಾಡಿ ಭಾರೀ ಪ್ರಮಾಣದ ಅಕ್ರಮ ಬಂದೂಕು ಹಾಗೂ ರಿವಾಲ್ವರ್ ಗಳನ್ನ ವಶಕ್ಕೆ ಪಡೆದಿದ್ದಾರೆ.
ಬಾಳೆಹೊನ್ನೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ಮಿಸ್ ಫೈರಿಂಗ್ ಆಗಿ ಇಬ್ಬರು ಮೃತಪಟ್ಟಿದ್ದು, ಅಕ್ರಮ ಬಂದೂಕಿನಿಂದ ಜೋಡಿ ಕೊಲೆಯಾಗಿದೆ. ಹಾಗಾಗಿ, ಎರಡು ದಿನಗಳಿಂದ ದಾಳಿ ಮಾಡ್ತಿರೋ ಪೊಲೀಸರು 51ಕ್ಕೂ ಹೆಚ್ಚು ಬಂದೂಕುಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ ಇನ್ನೂ ಅಕ್ರಮ ಬಂದೂಕುಗಳು ಇರುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ. ಕಾಡು ಪ್ರಾಣಿಗಳಿಂದ ಆತ್ಮರಕ್ಷಣೆಗೆ ಬಳಕೆಯಾಗಬೇಕಿದ್ದ ಬಂದೂಕುಗಳು ದುಷ್ಮನಿಗಳ ದಮನಕ್ಕೆ ಬಳಕೆಯಾಗ್ತಿರುವ ಆತಂಕದಿಂದ ಖಾಕಿ ಪಡೆ ಅಕ್ರಮ ಬಂದೂಕುಗಳ ಶಿಕಾರಿಗೆ ಇಳಿದಿದೆ.
ಎರಡು ದಿನದಿಂದ ಜಿಲ್ಲೆಯ ಮಲೆನಾಡು ಭಾಗದ ಬಾಳೆಹೊನ್ನೂರು, ಬಾಳೂರು, ಕಳಸ ಹಾಗು ಎನ್.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರವಾನಿಗೆ ರಹಿತ 41, ಪರವಾನಿಗೆ ಸಹಿತ 10 ಬಂದೂಕು, 2 ರಿವಾಲ್ವರ್, 22 ರೈಫಲ್ ಗುಂಡು, 40 ಬುಕ್ ಶಾಟ್ ಗುಂಡು, ಬಂದೂಕಿನ ನಳಿಕೆ ಹಾಗೂ ಕಾಟ್ರೆಜ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೇತ್ರಕುಂಡ ಎಸ್ಟೇಟಿನ ಸದಾಶಿವಾಚಾರಿ, ಬಾಳೂರಿನ ಸುಧಾಕರ್ ಆಚಾರಿ , ಬಾಳೆಹೊನ್ನೂರಿನ ರಾಮಚಂದ್ರ ಆಚಾರಿ, ಮಾವಿನಕೆರೆಯ ಸುಂದರ, ಗಂಗಾಧರ, ಆಡುವಳ್ಳಿಯ ಶಿವರಾಜ್ ಎಂಬುವರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಖಾಂಡ್ಯ ಸಮೀಪದ ಬಿದಿರೆ ಎಂಬಲ್ಲಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಅಮಾಯಕ ಯುವಕರು ಪ್ರಾಣ ಕಳೆದುಕೊಂಡಿದ್ದು, ರಮೇಶ್ ಎಂಬಾತ ಈ ಕೃತ್ಯ ನಡೆಸಿದ್ದನು.
ಒಟ್ಟಾರೆ, ಇದೀಗ ಚುನಾವಣಾ ಸಮಯ. ಚುನಾವಣೆ ಹೊಸ್ತಿಲಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಪಡೆ ಅಲರ್ಟ್ ಆಗಿದ್ದು, ಅಕ್ರಮ ಬಂದೂಕುಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದೆ. ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಸುಮಾರು 12 ಸಾವಿರ ಬಂದೂಕು ಪರವಾನಗಿ ವಿತರಿಸಲಾಗಿದೆ. ಅರ್ಧಕ್ಕಿಂತ ಹೆಚ್ಚು ಮಲೆನಾಡಲ್ಲೇ ಇವೆ. ಅದ್ರೆ, ಬೆಳೆ ಹಾಗೂ ಆತ್ಮ ರಕ್ಷಣೆಗೆಂದು ನೀಡಿದ ಬಂದೂಕುಗಳು ಮತ್ತೊಬ್ಬರ ಜೀವ ತೆಗೆಯಲು ಬಳಕೆಯಾಗ್ತಿರೋದು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ಅಕ್ರಮ ಬಂದೂಕುಧಾರಿಗಳ ಮೇಲೆ ಯಾವ ರೀತಿ ಸೂಕ್ತ ಕ್ರಮ ಕೈಗೊಳ್ಳುತ್ತೋ ಕಾದುನೋಡ್ಬೇಕು.
ವರದಿ: ಅಶ್ವಿತ್, ಟಿವಿ9, ಚಿಕ್ಕಮಗಳೂರು