ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದ್ರೆ ಶಿಕ್ಷಕರು (teacher) ತಿದ್ದಿ ಬುದ್ಧಿ ಹೇಳ್ತಾರೆ. ಆದ್ರೆ ಮಕ್ಕಳ ಭವಿಷ್ಯ ರೂಪಿಸೋ ಶಿಕ್ಷಕರೇ ಅಡ್ಡ ದಾರಿ ಹಿಡಿದ್ರೆ ಏನ್ಮಾಡೋದು ಅಲ್ವಾ? ವರ್ಗಾವಣೆ ತಪ್ಪಿಸಿಕೊಳ್ಳಲು ಇಲ್ಲದ ಖಾಯಿಲೆ ತರಿಸಿಕೊಳ್ಳೋದೇನು, ಖಾಯಿಲೆ ಇದ್ದರೂ ಅದು ಗಂಭೀರ ಸ್ವರೂಪದ್ದೆಂದು ವೈದ್ಯಕೀಯ ಪ್ರಮಾಣ ಪತ್ರ ಪಡೆಯೋದೇನು ಹೀಗೆ ವರ್ಗಾವಣೆಗೆ ಬೆನ್ನು ತೋರಿಸುತ್ತಿರೋ ಶಿಕ್ಷಕರು ಕಳ್ಳಾಟವಾಡೋಕೆ ಶುರು ಮಾಡಿದ್ಧಾರೆ. ಮುಚ್ಚಿರುವ ಶಾಲೆ ಹಾಗೂ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಿಕ್ಷಕರನ್ನ ವರ್ಗಾವಣೆ ಮಾಡುತ್ತಿದ್ದಂತೆ (transfer), ಮಧ್ಯವರ್ತಿಗಳಿಂದ ವಾಮಮಾರ್ಗದ ಮೂಲಕ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ (medical test) ಕೊಟ್ಟು ವರ್ಗಾವಣೆ ತಪ್ಪಿಸಿಕೊಳ್ಳಲು ಕೆಲ ಶಿಕ್ಷಕರು ಮುಂದಾಗ್ತಿದ್ದಾರೆ. ಆದ್ರೆ, ಶಿಕ್ಷಕರು ಚಾಪೆ ಕೆಳಗೆ ನುಸುಳಿದ್ರೆ, ಬಿಇಓ ರಂಗೋಲಿ ಕೆಳಗೆ ನುಸುಳಿ, ಶಿಕ್ಷಕರಿಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ವರ್ಗಾವಣೆ ಕಹಾನಿ ನೀವೇ ನೋಡಿ…
ವರ್ಗಾವಣೆ ತಪ್ಪಿಸಿಕೊಳ್ಳಲು ಶಿಕ್ಷಕರ ಕಳ್ಳಾಟ… ಇಲ್ಲದ ಖಾಯಿಲೆ ಇದೇ ಎಂದು ನಕಲಿ ಸರ್ಟಿಫಿಕೇಟ್ ಸಲ್ಲಿಸುವುದು… ಅಸಲಿಯತ್ತು ಅರಿಯಲು ನೇರ ಪರೀಕ್ಷೆಗಿಳಿದ ಶಿಕ್ಷಣ ಇಲಾಖೆ.. ಹೌದು…. ಕಾಫಿನಾಡು ಚಿಕ್ಕಮಗಳೂರು (chikmagalur) ಜಿಲ್ಲೆಯ ತರೀಕೆರೆ (Tarikere) ತಾಲೂಕಿನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ವರ್ಗಾವಣೆಗೊಳ್ಳಲು ಹಿಂದೇಟು ಹಾಕ್ತಿರೋ ಶಿಕ್ಷಕರು ವಾಮಮಾರ್ಗದ ಮೂಲಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ವರ್ಗಾವಣೆ ತಪ್ಪಿಸಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಅನ್ನೊ ಆರೋಪ ಕೇಳಿ ಬಂದಿದೆ.
ವಿಷ್ಯ ಏನೂ ಅಂದ್ರೆ ತರೀಕೆರೆ ತಾಲೂಕಿನಲ್ಲಿ ಶಾಲೆ ಮುಚ್ಚಿರುವ ಹಾಗೂ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಶಿಕ್ಷಕರು ಹೆಚ್ಚಿರುವ ಶಾಲೆಗಳಲ್ಲಿ 64 ಶಿಕ್ಷಕರನ್ನ ಗುರುತಿಸಿ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗೆ ವರ್ಗಾವಣೆಗೆ ಸರ್ಕಾರ ಆದೇಶಿಸಿತ್ತು. ಆದರೆ, 12 ಜನ ಶಿಕ್ಷಕರು ಮಧ್ಯವರ್ತಿಗಳ ಮೂಲಕ ವಾಮಾಮಾರ್ಗದಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಆದರೆ, 12ರಲ್ಲಿ ನಾಲ್ವರು ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರದ ಬಗ್ಗೆ ಅನುಮಾನಗೊಂಡ ತರೀಕೆರೆ ತಾಲೂಕು ಬಿಇಓ ಜಿಲ್ಲಾ ಸರ್ಜನ್ ಒಳಗೊಂಡ ತ್ರಿಸದಸ್ಯ ಸಮಿತಿಗೆ ಪತ್ರ ಬರೆದು ಇವರ ಪ್ರಮಾಣಪತ್ರವನ್ನ ಮತ್ತೊಮ್ಮೆ ಪರಿಶೀಲಿಸಲು ಕೇಳಿಕೊಂಡಿದ್ದಾರೆ. ಒಂದು ವೇಳೆ ಅವರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದು ಸಾಬೀತಾದರೆ ಬಿಇಓ ಮೇಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಿದ್ದಾರೆ.
ತರೀಕೆರೆ ಬಿಇಓ ಅವರ ಪತ್ರದ ಆಧಾರದ ಮೇಲೆ ಜಿಲ್ಲಾ ಸರ್ಜನ್ ಡಾ ಮೋಹನ್ ನೇತೃತ್ವದಲ್ಲಿ ಮಂಗಳವಾರ ನಾಲ್ವರು ಶಿಕ್ಷಕರ ಮರು ಆರೋಗ್ಯ ತಪಾಸಣೆ ನಡೆದಿದೆ. ಅದರಂತೆ ಇಂದು ಬಿಇಓ ಕಚೇರಿಯ ಓರ್ವ ಸಿಬ್ಬಂದಿ ಜೊತೆ ನಾಲ್ವರು ಶಿಕ್ಷಕರು ಮರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಮರು ತಪಾಸಣೆಯಲ್ಲಿ ಶಿಕ್ಷಕರು ನಕಲಿ ಪ್ರಮಾಣ ಪತ್ರ ನೀಡಿದ್ದಾರೆಂದು ಖಾತ್ರೆಯಾದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಬಿಇಓ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಿದ್ದಾರೆ.
Also Read:
ಶಿಕ್ಷಕರ ಈ ನಕಲಿ ಪ್ರಮಾಣ ಪತ್ರದಿಂದ ಎರಡನೇ ಹಿರಿಯ ಶಿಕ್ಷಕರ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ. ಹತ್ತಾರು ವರ್ಷಗಳಿಂದ ಒಂದೇ ಕಡೆ ಅಥವಾ ಮಲೆನಾಡಿನ ಕುಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆ ಬಯಸಿದರು ಸಾಧ್ಯವಾಗುತ್ತಿರಲಿಲ್ಲ. ಇದೀಗ, ಬಹುಶಃ ಹಲವು ವರ್ಷಗಳಿಂದಲೂ ವರ್ಗಾವಣೆ ಳೆ ಶಿಕ್ಷಕರು ಹೀಗೆ ಮಾಡುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡಿದೆ. ಬಿಇಓ ಅವರ ಈ ನಡೆ ಮುಂದಿನ ದಿನಗಳಲ್ಲಿ ನಕಲಿ ಪ್ರಮಾಣ ಪತ್ರ ನೀಡಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಬಹುದು.
ಒಟ್ಟಾರೆ, ಶಿಕ್ಷಕರು ನೀಡಿರೋ ವೈದ್ಯಕೀಯ ಪ್ರಮಾಣ ಪತ್ರ ಅಸಲಿಯೋ…. ನಕಲಿಯೋ…. ಗೊತ್ತಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಇದೆಯೋ… ಇಲ್ಲವೋ…. ಇದ್ದರೂ ಯಾವ ಪ್ರಮಾಣದಲ್ಲಿ ಇದೆ ಅನ್ನೋದು ಸ್ಪಷ್ಟವಿಲ್ಲ. ಆದರೆ, ಅವರು ಪ್ರಮಾಣ ಪತ್ರ ನೀಡಿರೋದಂತು ಸತ್ಯ. ಅನುಮಾನಗೊಂಡು ಬಿಇಓ ಮರು ಆರೋಗ್ಯ ತಪಾಸಣೆಗೆ ಸೂಚಿಸಿರೋದು ಕೂಡ ಸತ್ಯ.
ಆದ್ರೆ, ಮರುತಪಾಸಣೆಯಲ್ಲಿ ಶಿಕ್ಷಕರು ಸಿಕ್ಕಿಬಿದ್ರೆ ಶಿಕ್ಷೆ ಪಕ್ಕಾ. ಆದ್ರೆ, ತಪ್ಪು-ಒಪ್ಪುಗಳನ್ನ ತಿದ್ದಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರೇ ಈ ರೀತಿ ಕಳ್ಳಾಟ ಮಾಡುವುದು ಮಕ್ಕಳಿಗೆ ತಿಳಿದರೆ ಅವರ ಭವಿಷ್ಯದ ಮೇಲೂ ಪರಿಣಾಮ ಬೀಳೋದು ಗ್ಯಾರಂಟಿ.
ವರದಿ: ಮಂಜುನಾಥ್ ಕೆ.ಬಿ, ಟಿವಿ 9, ಚಿಕ್ಕಮಗಳೂರು
Published On - 12:39 pm, Wed, 18 January 23