ಚಿಕ್ಕಮಗಳೂರು: ಮಸೀದಿ ಮುಂಭಾಗ ಕೇಸರಿ ಬಾವುಟ ತೆರವು ವೇಳೆ ಶ್ರೀರಾಮ ಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ನಡುವೆ ಜಗಳವಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ವೆಲ್ಕಮ್ ಗೇಟ್ ಮುಂಭಾಗ ನಡೆದಿದೆ.
ದತ್ತಮಾಲಾ ಅಭಿಯಾನ ಹಿನ್ನೆಲೆ ಶ್ರೀರಾಮ ಸೇನೆ ಕಾರ್ಯಕರ್ತರು ಬಾವುಟ ಕಟ್ಟಿದ್ದರು. ಆದ್ರೆ ಪೊಲೀಸರು ಮಸೀದಿ ಮುಂಭಾಗದ ಬಾವುಟಗಳನ್ನ ತೆರವುಗೊಳಿಸಿದ್ದರು. ಈ ವಿಚಾರವಾಗಿ ಅರ್ಜುನ್ ಮತ್ತು ರಫೀಕ್ ನಡುವೆ ಮಾತಿನ ಚಕಮಕಿಯಾಗಿ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ. ಹಲ್ಲೆ, ಜೀವ ಬೆದರಿಕೆ ಎಂದು ಅರ್ಜುನ್ ದೂರು ದಾಖಲಿಸಿದ್ದಾರೆ. ಇನ್ನು ಗಲಾಟೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು ಇಬ್ಬರೂ ಶೃಂಗೇರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕು ಆಸ್ಪತ್ರೆಗೆ ಎಎಸ್‌ಪಿ ಗುಂಜನ್ ಆರ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಜಿಲ್ಲೆಯಾದ್ಯಂತ ಶ್ರೀ ರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ಆರಂಭವಾಗಿದೆ. ಶೃಂಗೇರಿಯಲ್ಲೂ ಶ್ರೀ ರಾಮ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಮಾಲೆ ಧರಿಸಿದ್ದು, ಪಟ್ಟಣದಾದ್ಯಂತ ಕೇಸರಿ ಬಂಟಿಂಗ್ಸ್ ಹಾಗೂ ಬಾವುಟ ಕಟ್ಟಿದ್ದರು. ಏಕಾಏಕಿ ನನ್ನ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಗೂ ಅಭದ್ರತೆ ನನಗೆ ಕಾಡುತ್ತಿದೆ. ಜೀವ ಭಯ ಇದೆ ಎಂದು ಅರ್ಜುನ್ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ವಾರ್ಡ್ ನ ಜನರ ಪರವಾಗಿ ಮಾತನಾಡಬೇಕಾದ ಅವಶ್ಯಕತೆಯಿದೆ. ನನಗೇ ಸೂಕ್ತ ಭದ್ರತೆ ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ರಫೀಕ್ ಅಹಮದ್ ನಿಂದ ಪ್ರತಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ರಾಜಕೀಯವಾಗಿ ಘಟಾನುಘಟಿ ನಾಯಕರು ಇದ್ರೂ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ
ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರ ಬಂಧನ
ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಸೂರಜ್, ಪದ್ಮನಾಭ, ಮಧುಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 21.51 ಲಕ್ಷ ನಗದು, ಐದು ಮೊಬೈಲ್ ಸೀಜ್ ಮಾಡಲಾಗಿದೆ. ಆರೋಪಿಗಳು ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಕ್ಕೆ ಹಣ ಕಟ್ಟಿಸಿಕೊಳ್ಳುತ್ತಿದ್ರು ಎನ್ನಲಾಗಿದೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಸಿಸಿಬಿಯಿಂದ ಡ್ರಗ್ ಪೆಡ್ಲರ್ ಬಂಧನ
ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಪ್ಯಾಲೆಸ್ಟೈನ್ ಮೂಲದ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದಾರೆ. ಬಂಧಿತನಿಂದ 25 ಲಕ್ಷ ಮೌಲ್ಯದ ಡ್ರಗ್ಸ್, ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿ ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 7:31 am, Wed, 9 November 22