ರಾಮನಗರದಲ್ಲಿ ರಾಜಕೀಯವಾಗಿ ಘಟಾನುಘಟಿ ನಾಯಕರು ಇದ್ರೂ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ
ರಾಮನಗರದಲ್ಲಿ ರಾಜಕೀಯವಾಗಿ ಘಟಾನುಘಟಿ ನಾಯಕರು ಇದ್ದರೂ ಸಹ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಇದರಿಂದ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದಾರೆ.
ರಾಮನಗರ: ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರೋ ರೇಷ್ಮೆನಗರಿ ರಾಮನಗರ (Ramanagara) ಜಿಲ್ಲೆಯಲ್ಲಿ ವಿದ್ಯಾರ್ಥಿಗಳ (Students) ಗೋಳನ್ನ ಕೇಳುವವರು ಯಾರು ಇಲ್ಲ. ಜಿಲ್ಲೆಯಲ್ಲಿ ರಾಜಕೀಯವಾಗಿ ಘಟಾನುಘಟಿ ನಾಯಕರುಗಳು ಇದ್ದರೂ, ವಿದ್ಯಾರ್ಥಿಗಳ ಸಮಸ್ಯೆಯನ್ನ ಬಗೆಹರಿಸುವವರು ಯಾರು ಇಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಒಂಡೆದೆ ಪ್ರಾಣದ ಹಂಗು ತೊರೆದು ಬಸ್ ಗಳಲ್ಲಿ ಹೋಗುವ ಪರಿಸ್ಥಿತಿ. ಮತ್ತೊಂಡೆದೆ ಬಸ್ ಗಾಗಿ (Bus) ಪ್ರತಿಭಟನೆ ನಡೆಸುವ ದುಸ್ಥಿತಿ ಎದುರಾಗಿದೆ.
ಹೌದು..ರಾಮನಗರದಲ್ಲಿ ಕಾಲೇಜು ವಿದ್ಯಾರ್ಥಿಗಳ ಗೋಳನ್ನ ಕೇಳುವವರೇ ಇಲ್ಲದಂತಾಗಿದೆ. ವಿದ್ಯಾರ್ಥಿಗಳ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಅಂದಹಾಗೆ ಪ್ರತಿನಿತ್ಯ ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳು ಕಾಲೇಜಿಗೆಂದು ಬರುತ್ತಾರೆ. ಆದರೆ ವಿವಿಧ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು, ನಗರ ಪ್ರದೇಶದಲ್ಲಿರೋ ದೂರದ ಕಾಲೇಜುಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ಗಳ ಸೌಲಭ್ಯವಿಲ್ಲ. ಹೆಚ್ಚುವರಿ ಸಾರಿಗೆ ಬಸ್ ಗಳ ಸೌಲಭ್ಯವಿಲ್ಲದೇ ಇರುವುದರಿಂದ ಸಿಕ್ಕ ಸಿಕ್ಕ ಸರ್ಕಾರಿ ಬಸ್ ಗಳ ಫುಟ್ ಬೋರ್ಡ್ ನಲ್ಲಿ ನಿಂತು, ಬಸ್ ಗಳಲ್ಲಿ ಜೋತು ಬಿದ್ದು, ಪ್ರಾಣದ ಹಂಗು ತೊರೆದು ಬಸ್ ನಲ್ಲಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕೆಲ ಬಸ್ ಗಳಂತು ನಿಲ್ಲಿಸುತ್ತಿಲ್ಲ. ಹೀಗಾಗಿ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಸಹಾ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ರು, ಯಾವುದೇ ಪ್ರಯೋಜನವಿಲ್ಲದಂತೆ ಆಗಿದೆ. ಹೀಗಾಗಿ ಬೇರೆ ದಾರಿಯಿಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆಯ ದಾರಿ ಹಿಡಿದ್ದಿದ್ದಾರೆ.
ಅಂದಹಾಗೆ ಗ್ರಾಮೀಣ ಪ್ರದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ, ಸೌಲಭ್ಯವಿಲ್ಲದೇ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕೆಂದು ರಾಮನಗರಕ್ಕೆ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ವಿವಿಧ ಕಾಲೇಜುಗಳಿಗೆ ತೆರಳಲು ಹೆಚ್ಚುವರಿ ಬಸ್ ಗಳ ಸೌಲಭ್ಯ ಸಹಾ ಇಲ್ಲ. ಹೀಗಾಗಿ ಕಾಲೇಜಿಗೆ ಹೋಗಲೇಬೇಕಾದ ಅನಿವಾರ್ಯ ಇರುವುದರಿಂದ ಸಿಕ್ಕ ಬಸ್ ಗಳಲ್ಲೇ ಪ್ರಾಣದ ಹಂಗು ತೊರೆದು ಫುಟ್ ಬೋರ್ಡ್ ಗಳ ಮೇಲೆ ನಿಂತ ಹೋಗುತ್ತಿದ್ದಾರೆ. ಏನಾದರೂ ಸ್ವಲ್ಪ ಯಾಮಾರಿದ್ರೆ ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯವಿದೆ.
ಇನ್ನು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯ ಈ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಇನ್ನು ಹೆದ್ದಾರಿಯಲ್ಲಿ ಅತೀ ಹೆಚ್ಚು ವಾಹನಗಳ ಸಂಚಾರ ಸಹ ಇರುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು. ಕಾಲೇಜು ಸಮೀಪದ ಹೆದ್ದಾರಿಯಲ್ಲಿ ಬಸ್ ಶೆಲ್ಟರ್ ಸಹ ಇಲ್ಲ. ಹೀಗಾಗಿ ಮಳೆ, ಬಿಸಿಲು ಎನ್ನದೇ ಬಸ್ ಗಾಗಿ ಕಾಯುವ ಪರಿಸ್ಥಿತಿ. ಮತ್ತೊಂದಡೆ ಚಿರತೆ ಕಾಟ ಕೂಡ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಆದರೆ ವಿದ್ಯಾರ್ಥಿಗಳನ್ನ ಗೋಳನ್ನ ಕೇಳುವವರು ಯಾರು ಇಲ್ಲದಂತೆ ಆಗಿದೆ. ಇನ್ನು ಈ ಬಗ್ಗೆ ಮಾತನಾಡಿರೋ ಡಿಪೋ ಮ್ಯಾನೇಜರ್, ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಹೆಚ್ಚುವರಿ ಬಸ್ ಗಳ ಸೌಲಭ್ಯ ಕೂಡ ಒದಗಿಸುತ್ತೇವೆ ಎನ್ನುತ್ತಿದ್ದಾರೆ. . ಒಟ್ಟಾರೆ ರಾಮನಗರದಲ್ಲಿ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ