ದೇವಿಯ ಪವಾಡ ಕಂಡು ಪುನೀತರಾದ ಭಕ್ತರು: ಕೆಂಡೋತ್ಸವ ಮೂಲಕ ಬಿಂಡಿಗ ದೇವಿರಮ್ಮನ ಜಾತ್ರೆ ಸಂಪನ್ನ

| Updated By: ವಿವೇಕ ಬಿರಾದಾರ

Updated on: Nov 14, 2023 | 11:55 AM

ಚಿಕ್ಕಮಗಳೂರಿನ ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮ ದೇವಾಲಯಕ್ಕೆ ಕಳೆದೆರಡು ದಿನಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಜಾತ್ರೆಯ ಎರಡನೇ ದಿನ ದೇವಾಲಯದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಪರದೆ ತಾನಾಗಿಯೇ ತೆರೆದುಕೊಳ್ಳುತ್ತೆಂಬುದು ಭಕ್ತರ ನಂಬಿಕೆ. ದೇವಿಯ ಈ ಪವಾಡವನ್ನು ನೋಡಲು ಪ್ರತಿವರ್ಷ ಭಕ್ತರು ಕಾದುಕುಳಿತಿರುತ್ತಾರೆ.

ದೇವಿಯ ಪವಾಡ ಕಂಡು ಪುನೀತರಾದ ಭಕ್ತರು: ಕೆಂಡೋತ್ಸವ ಮೂಲಕ ಬಿಂಡಿಗ ದೇವಿರಮ್ಮನ ಜಾತ್ರೆ ಸಂಪನ್ನ
ಬಿಂಡಿಗ ದೇವಿರಮ್ಮನ ದೇವಾಲಯ
Follow us on

ಚಿಕ್ಕಮಗಳೂರು ನ.14: ಚಿಕ್ಕಮಗಳೂರಿನ (Chikkamagaluru) ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮನ (Bandiga Deviramma) ದೇವಾಲಯದಲ್ಲೀಗ ಜಾತ್ರೆಯ ವೈಭವ. ರವಿವಾರ 3000 ಅಡಿಗಳಷ್ಟು ಎತ್ತರದ ಬೆಟ್ಟವನ್ನೇರಿದ್ದ ಭಕ್ತರು, ಸೋಮವಾರ ದೇವಿಯೂ ಬೆಟ್ಟವನ್ನಿಳಿದು ದೇವಿ ಗುಡಿಯನ್ನು ಪ್ರವೇಶಿಸುವ ಘಳಿಗೆಯನ್ನು ಕಣ್ತುಂಬಿಕೊಂಡರು. ಪೂಜಾ ಕೈಂಕರ್ಯಗಳೆಲ್ಲಾ ಮುಗಿದ ಕೂಡಲೇ ಗರ್ಭಗುಡಿಗೆ ಹಾಕಿದ್ದ ಪರದೆಯೂ ತಾನಾಗೇ ತೆರೆದುಕೊಂಡಿದ್ದು, ಭಕ್ತರ ನಂಬಿಕೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಿಕ್ಕಮಗಳೂರಿನ ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮ ದೇವಾಲಯಕ್ಕೆ ಕಳೆದೆರಡು ದಿನಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಜಾತ್ರೆಯ ಎರಡನೇ ದಿನ ದೇವಾಲಯದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಪರದೆ ತಾನಾಗಿಯೇ ತೆರೆದುಕೊಳ್ಳುತ್ತೆಂಬುದು ಭಕ್ತರ ನಂಬಿಕೆ. ದೇವಿಯ ಈ ಪವಾಡವನ್ನು ನೋಡಲು ಪ್ರತಿವರ್ಷ ಭಕ್ತರು ಕಾದುಕುಳಿತಿರುತ್ತಾರೆ. ನಿಗದಿತ ವೇಳೆಯಲ್ಲಿ ದೇವಿಯು ಪರದೆ ತೆರೆದು ಒಳಹೋಗುತ್ತಾಳೆಂಬುದು ಭಕ್ತರ ನಂಬಿಕೆ. ಆ ಕ್ಷಣದ ಕೌತುಕವನ್ನು ನೋಡಲು ಭಕ್ತರ ದಂಡೇ ಹರಿದು ಬಂರುತ್ತದೆ.

ಅದರಂತೆ ಜಾತ್ರೆಯ ಎರಡನೇ ದಿನವಾದ ಸೋಮವಾರ ಬೆಳಿಗ್ಗೆ 10.15 ರ ಸುಮಾರಿಗೆ ದೇವಾಲಯದ ಗರ್ಭಗುಡಿಯ ಬಾಗಿಲಿಗೆ ಹಾಕಿದ್ದ ಪರದೆಯು ಓರ್ವ ವ್ಯಕ್ತಿ ಒಳ ಹೋಗುವಷ್ಟು ಸರಿದದ್ದು ಭಕ್ತರು ದೇವಿಯೇ ಗರ್ಭಗುಡಿಯ ಒಳಗೆ ಹೋದಳು ಎಂದು ಸಂಭ್ರಮಿಸಿದರು. ವಾದ್ಯಗೋಷ್ಠಿ, ಅಷ್ಟದಿಕ್ಕುಗಳ ಪೂಜೆಯ ಬಳಿಕ 9 ಕಿ.ಮೀ. ಬೆಟ್ಟದ ಮೇಲಿರುವ ದೇವಿ ಕೆಳಗಿರುವ ದೇವಾಲಯವನ್ನು ಪ್ರವೇಶಿಸುತ್ತಾಳೆಂಬುದು ಭಕ್ತರ ನಂಬಿಕೆ.

ಇದನ್ನೂ ಓದಿ: 3800 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದಾಳೆ ದೇವಿರಮ್ಮ: ಕೊಂಚ ಎಡವಿದರು ಪಾತಾಳ ಸೇರುವುದು ಗ್ಯಾರಂಟಿ

ಆಧುನಿಕ ಕಾಲದಲ್ಲೂ ದೇವಾಲಯದ ಬಾಗಿಲಿನ ಪರದೆ ತಾನಾಗಿಯೇ ತೆರೆದುಕೊಳ್ಳುವುದನ್ನು ನೋಡುಗರಲ್ಲಿ ಕುತೂಹಲ ಮೂಡಿಸಿದರೇ, ಕೆಲ ಪ್ರಜ್ಞಾವಂತರಲ್ಲಿ ಸಂಶಯವನ್ನ ಹುಟ್ಟುಹಾಕಿದೆ. ಅದೆನೇ ಇರಲಿ, ಈ ದೇವಿ ಪವಾಡ ಶಕ್ತಿ ಅಪಾರ ಅನ್ನೋದು ಭಕ್ತರ ನಂಬಿಕೆ. ಹರಕೆ ಕಟ್ಟಿಕೊಂಡರೇ ಎಂತಹ ಸಮಸ್ಯೆ ಕೂಡ ಮುಂದಿನ ವರ್ಷದೊಳಗೆ ಈಡೇರುತ್ತೆ ಅನ್ನೋದು ಅಸಂಖ್ಯ ಭಕ್ತರ ನಂಬಿಕೆ. ಪ್ರತಿವರ್ಷ ಸಾವಿರಾರು ಭಕ್ತರು ಈ ಮೂರು ದಿನ ಬಂದು ಹರಕೆ ತೀರಿಸುತ್ತಾರೆ.

ದೀಪಾವಳಿಯ ಮೂರನೇ ದಿನವಾದ ಮಂಗಳವಾರ (ನ.14) ದೇಗುಲದಲ್ಲಿ ಕೊಂಡೋತ್ಸವ ನಡೆದಿದೆ. ಬೆಳಗಿನ ಜಾವದಂದು ದೇವಾಲಯದ ಆವರಣದಲ್ಲಿ ಕೆಂಡ ತುಳಿಯೋ ಮೂಲಕವೂ ನೂರಾರು ಭಕ್ತರು ಹರಕೆ ತೀರಿಸಿದ್ದಾರೆ. 3000 ಅಡಿಗೂ ಎತ್ತರದಲ್ಲಿರುವ ದೇವಿಯನ್ನು 70 ಸಾವಿರ ಜನ ಬರಿಗಾಲಲ್ಲೇ ಹತ್ತಿ ಆಕೆಯ ದರ್ಶನ ಪಡೆದು ಪುನೀತರಾದರು.

ಒಟ್ಟಾರೆ ದೀಪಾವಳಿಯ ಮೂರು ದಿನಗಳ ಕಾಲ ದೇವಿರಮ್ಮನ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ. ದೇವಿಯ ಎರಡನೇ ದಿನದ ಪವಾಡವನ್ನು ಕಂಡು ಜನರು ಪುಳಿಕಿತರಾಗಿದ್ದಾರೆ. ತಮ್ಮ ಹರಿಕೆಗಳನ್ನು ತೀರಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ, ಭಕ್ತಾದಿಗಳನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ