ಸರ್ಕಾರಿ ಭೂಮಿ ಕಬಳಿಕೆ; ದಕ್ಷಿಣ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದೆ ಚಿಕ್ಕಮಗಳೂರು

|

Updated on: Aug 05, 2023 | 12:45 PM

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಟಾರಿಯಾ ಮಾತನಾಡಿ, ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ 48 ಪ್ರಕರಣಗಳಿವೆ. ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಭೂಮಿ ಕಬಳಿಕೆ; ದಕ್ಷಿಣ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದೆ ಚಿಕ್ಕಮಗಳೂರು
ಸಾಂದರ್ಭಿಕ ಚಿತ್ರ
Follow us on

ಚಿಕ್ಕಮಗಳೂರು: ದಕ್ಷಿಣ ಕರ್ನಾಟಕದ ಸರ್ಕಾರಿ ಭೂಮಿ ಒತ್ತುವರಿಯಲ್ಲಿ (Land Encroachment) ಚಿಕ್ಕಮಗಳೂರು (Chikkamagalur) ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗುವುದು ಕಷ್ಟವಾಗಿದೆ ಎಂದು ಜಿಲ್ಲಾ ನೋಡಲ್ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಹೇಳಿದ್ದಾರೆ. ಕಟಾರಿಯಾ ಅವರು ಗುರುವಾರದಿಂದ ಜಿಲ್ಲೆಯಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ನಂತರ ಅಧಿಕಾರಿಗಳ ಜತೆ ಸಭೆಯಲ್ಲಿ ಮಾತನಾಡಿ, ಗೋಮಾಳ ಜಮೀನು ಸೇರಿದಂತೆ ಹಲವು ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಾಗುವಳಿ ಮಾಡಲು ಗೋಮಾಳ ಜಮೀನು ಮಂಜೂರು ಮಾಡಲು ಯಾವುದೇ ಅಧಿಕಾರಿಗಳಿಗೆ ಅಧಿಕಾರವಿಲ್ಲ, ಮಂಜೂರು ಮಾಡಿದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 2002ಕ್ಕಿಂತ ಮೊದಲು ಯಾರಾದರೂ ಗೋಮಾಳದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರೆ ಅದನ್ನು ಮಂಜೂರು ಮಾಡಬಹುದು. ಆದರೆ, ಖಾಸಗಿಯವರಿಗೆ ಗೋಮಾಳ ಭೂಮಿ ಮಂಜೂರು ಮಾಡುವಂತಿಲ್ಲ ಎಂದು ಅವರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಜಮೀನು ಮಂಜೂರು ಮಾಡುವಾಗ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಿದರು. 50 ಎಕರೆ ಜಮೀನು ಹೊಂದಿರುವವರು ಕೂಡ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮತ್ತು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಟಾರಿಯಾ ಹೇಳಿದ್ದಾರೆ. ಅತಿಕ್ರಮಣದಿಂದ ಸ್ಮಶಾನ ಭೂಮಿ ಮತ್ತು ಇತರ ಸಾರ್ವಜನಿಕ ಕಾರಣಗಳಿಗಾಗಿ ಭೂಮಿಯನ್ನು ಪಡೆಯುವುದು ಕಷ್ಟಕರವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಡಿಮೆಯಾಯ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ; ಎಲ್ಲಿಂದ ಬರುತ್ತಿದೆ ಹೆಚ್ಚಿನ ವಿದ್ಯುತ್?

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಟಾರಿಯಾ ಮಾತನಾಡಿ, ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ 48 ಪ್ರಕರಣಗಳಿವೆ. ಒಂಬತ್ತು ತಹಶೀಲ್ದಾರ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ