ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಕಾಫಿನಾಡು ಚಿಕ್ಕಮಗಳೂರಿ(Chikkamagaluru)ನ ಬಯಲು ಸೀಮೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಗಾಗಿ ಕಾದಿದ್ದ ರೈತರು ಉತ್ತಮ ಬಿತ್ತನೆ ಬೀಜ ತಂದು ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ. ತಾಲೂಕಿನ ಬಯಲುಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆಯುವ ಅಂಬಳೆ, ಸಿರಗಾಪುರ, ಮಳಲೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ಹಾಸನ ನಗರದ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳಿಂದ 4 ಲಾರಿ ಲೋಡ್ ಬಿತ್ತನೆಗಾಗಿ ಆಲೂಗಡ್ಡೆ ತರಿಸಿ, ಉತ್ತಮ ಲಾಭದ ಆಸೆ ತೋರಿಸಿ ರೈತರಿಗೆ ಆಲೂಗಡ್ಡೆ ಬೀಜವನ್ನು ನೀಡಿದ್ರು. ಹಾಸನದ ಆಲೂಗಡ್ಡೆ ವ್ಯಾಪಾರಿಗಳ ಮಾತು ನಂಬಿದ ನೂರಾರು ರೈತರು, ಎಕರೆಗೆ 60 ಸಾವಿರಕ್ಕೂ ಅಧಿಕ ಹಣವನ್ನ ಖರ್ಚು ಮಾಡಿ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಮಾಡಿದ್ದರು. ಇದೀಗ ಬಿತ್ತನೆ ಮಾಡಿ ಮೂರೇ ದಿನಕ್ಕೆ ಆಲೂಗಡ್ಡೆ ಬೀಜ ಕೊಳೆಯಲಾರಂಭಿಸಿದೆ.
250 ಎಕರೆಗೂ ಅಧಿಕ ಜಮೀನಿನಲ್ಲಿ ಆಲೂಗಡ್ಡೆ ಬಿತ್ತನೆ
ಹಾಸನ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳಿಂದ ತಂದ ಆಲೂಗಡ್ಡೆಯನ್ನೇ ಸಿರಗಾಪುರ, ಅಂಬಳೆ ,ಮಳಲೂರು ಸುತ್ತಮುತ್ತಲಿನ ನೂರಾರು ರೈತರು 250 ಎಕರೆಗೂ ಅಧಿಕ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಮೂರೇ ದಿನಕ್ಕೆ ಹಾಸನದ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳ ಅಸಲಿ ಮುಖವಾಡ ಬಯಲಾಗಿ, ರೈತರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ:Shahapur: ಕೈ ಕೊಟ್ಟ ಬಿಳಿ ಬಂಗಾರ ಬೆಳೆ, ನಕಲಿ ಬಿತ್ತನೆ ಬೀಜದ್ದೇ ದರ್ಬಾರು, ಹತ್ತಿ ಬೆಳೆಗಾರ ಕಂಗಾಲು
ಕೃಷಿ ಚಟುವಟಿಕೆ ಸಮಯದಲ್ಲಿಯೇ ನಕಲಿ ಬೀಜ ಮಾರಾಟ
ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆಯನ್ನ ಆರಂಭಿಸುವ ಸಮಯವನ್ನೇ ಟಾರ್ಗೆಟ್ ಮಾಡಿರುವ ಬಿತ್ತನೆ ಬೀಜ ಮಾರಾಟಗಾರರು ರೈತರನ್ನ ವಂಚಿಸುತ್ತಿದ್ದಾರೆ. ನಕಲಿ ಬೀಜಗಳನ್ನ ಕೊಟ್ಟು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದು, ಹಾಸನ ನಗರದ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳು ನಕಲಿ ಬಿತ್ತನೆ ಬೀಜವನ್ನ ನೀಡಿ ವಂಚನೆ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀನಿನಲ್ಲಿ ಬಿತ್ತನೆ ಮಾಡಿದ ಮೂರೇ ದಿನಕ್ಕೆ ಆಲೂಗಡ್ಡೆ ಕೊಳೆಯಲಾರಂಭಿಸಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ 250 ಕ್ಕೂ ಅಧಿಕ ಜಮೀನಿನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದ ನೂರಾರು ರೈತರನ್ನ ಕಂಗೆಡಿಸಿದ್ದು . ಟ್ರಾಕ್ಟರ್ ಮೂಲಕ ಬಿತ್ತನೆ ಮಾಡಿದ್ದ ಆಲೂಗಡ್ಡೆಯನ್ನ ನಾಶಪಡಿಸಿದ್ದಾರೆ.
ನಕಲಿ ಬೀಜ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಅನ್ನದಾತನ ಆಗ್ರಹ
ಉತ್ತಮ ಆಲೂಗಡ್ಡೆ ಬೆಳೆ ಬೆಳೆದು, ಒಳ್ಳೆ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಲೂಗಡ್ಡೆ ಬೀಜ ಮಾರಾಟಗಾರರು ಮಾಡಿದ ಮೋಸದಿಂದ ಸಂಕಷ್ಟಕ್ಕೆ ಸಿಲುಕಿದ್ದು. ನಕಲಿ ಬಿತ್ತನೆ ಬೀಜ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ