AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಆಸೆ, ಹಣದ ಮೇಲೆ ಮೋಹ: ಸ್ಕೆಚ್​ ಹಾಕಿ ಸಾಕು ತಾಯಿಯನ್ನೇ ಮುಗಿಸಿದ ಮಗಳು

ಚಿಕ್ಕಮಗಳೂರಿನಲ್ಲಿ ಆಸ್ತಿ ಮತ್ತು ಹಣದ ಆಸೆಗೆ ಮಗಳೊಬ್ಬಳು ತನ್ನ ಸಾಕು ತಾಯಿಯನ್ನೇ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಎನ್.ಆರ್.ಪುರ ತಾಲೂಕಿನ ಬಂಡಿಮಠದಲ್ಲಿ ನಡೆದ ಈ ಅಮಾನವೀಯ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆಸ್ತಿ ವಿವಾದವೇ ಕೊಲೆಗೆ ಕಾರಣವಾಗಿದ್ದು, ಹತ್ಯೆ ಮಾಡಿ ಹಾರ್ಟ್ ಅಟ್ಯಾಕ್ ಎಂದು ನಾಟಕವಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ತಿ ಆಸೆ, ಹಣದ ಮೇಲೆ ಮೋಹ: ಸ್ಕೆಚ್​ ಹಾಕಿ ಸಾಕು ತಾಯಿಯನ್ನೇ ಮುಗಿಸಿದ ಮಗಳು
ಸಾಂದರ್ಭಿಕ ಚಿತ್ರ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Nov 12, 2025 | 7:14 AM

Share

ಚಿಕ್ಕಮಗಳೂರು, ನವೆಂಬರ್​ 12: ಆಸ್ತಿ ಮೇಲಿನ ಆಸೆಗೆ ಸಾಕು ತಾಯಿಯನ್ನೇ ಮಗಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆ‌ರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನಡೆದಿದೆ. ಕುಸುಮ (62) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಸುಧಾಳನ್ನ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ವೇಳೆ ಮಲಗಿದ್ದ ಕುಸುಮಾರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಸುಧಾ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಕುಸುಮ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದವರಾಗಿದ್ದು, ಬದುಕಿಗಾಗಿ ಬಾಳೆಹೊನ್ನೂರಿನ ಬಂಡಿಮಠದಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಇವರನ್ನುಗಂಡ ಬಿಟ್ಟು ಹೋಗಿದ್ದ. ಹೀಗಾಗಿ ಒಬ್ಬಂಟಿ ಜೀವನಕ್ಕೆ ಆಸರೆಯಾಗಲೆಂದು ತನ್ನ ತಂಗಿಯ ಮಗಳನ್ನೇ ತಂದು  ಮುದ್ದಾಗಿ ಸಾಕಿದ್ದರು. ಮೈಸೂರಿಗೆ ಮದುವೆಯನ್ನೂ ಮಾಡಿಕೊಟ್ಟು, ಎನ್.ಆರ್. ಪುರದಲ್ಲಿ ತಮಗೆ ಇದ್ದ ಸ್ವಲ್ಪ ಕಾಫಿ ತೋಟವನ್ನ ಸುಧಾಳ ಹೆಸರಿಗೆ ವಿಲ್ ಕೂಡ ಮಾಡಿದ್ದರು. ಆದರೆ ಬಳಿಕ ಕುಸುಮ ಸಾಕು ಮಗಳಿಂದ ಆ ಆಸ್ತಿಯನ್ನು ಹಿಂಪಡೆದಿದ್ದರು. ನೀಡಿದ್ದ ಆಸ್ತಿ ಹಿಂಪಡೆದ ಸಿಟ್ಟಲ್ಲಿದ್ದ ಸುಧಾ, ಸ್ವಲ್ಪ ಆಸ್ತಿ ಮಾರಿದ್ದ ಹಣವನ್ನ ಕೊಡುವಂತೆ ಕುಸುಮಾಗೆ ಪೀಡಿಸುತ್ತಿದ್ದರು. ಆಗಾಗ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಪತ್ನಿ ಪಾಲಿಗೆ ಪ್ರೀತಿಸಿ ಮದುವೆಯಾದಾತನೇ ವಿಲನ್​: ಪತಿ ಅಟ್ಟಹಾಸಕ್ಕೆ 6 ತಿಂಗಳ ಭ್ರೂಣ ಸಾವು

ಅಲ್ಲದೆ, ಸದ್ಯ ಕುಸುಮ ವಾಸವಿದ್ದ ಬಂಡಿಮಠದ ಮನೆ ಭದ್ರಾ ನದಿಯ ತೀರದಲ್ಲಿದ್ದು, ಮಳೆಗಾಲದಲ್ಲಿ ಈ ಭಾಗ ಸಂಪೂರ್ಣ ಮುಳುಗಡೆಯಾಗುತ್ತೆ. ಹೀಗಾಗಿ ಗ್ರಾಮಸ್ಥರನ್ನ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಪ್ಲ್ಯಾನ್​ ಮಾಡಿರುವ ಕಾರಣ, ಮನೆ ತನ್ನ ಹೆಸರಿಗೆ ಬಂದ್ರೆ ಪರಿಹಾರ ಕೂಡ ತನಗೆ ಸಿಗುತ್ತೆ ಎಂಬ ಉದ್ದೇಶ ಸುಧಾದಾಗಿತ್ತು. ಹೀಗಾಗಿ ಸೋಮವಾರ (ನ.10) ಮೈಸೂರಿನಿಂದ ಬಂಡಿಮಠಕ್ಕೆ ಬಂದಿದ್ದ ಸುಧಾ, ರಾತ್ರಿ ಕುಸುಮಾ ಮಲಗಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಕುಸುಮ ಸಾವಿನ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ನಾಟಕವಾಡಿದ್ದು, ಹಾರ್ಟ್ ಅಟ್ಯಾಕ್​ನಿಂದ ಸಾಕು ತಾಯಿ ಮೃತಪಟ್ಟಿದ್ದಾಳೆ ಎಂದು ಎಲ್ಲರನ್ನೂ ನಂಬಿಸಿದ್ದಳು. ತಾನೇ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಮಾಡಿಸಿದ್ದಳು.

ಇಷ್ಟೆಲ್ಲ ನಡೆದ ಬಳಿಕ ಘಟನೆ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ಬಂದಿದೆ. ಕುಸುಮಾ ಮುಖದ ಮೇಲೆ ಆಗಿದ್ದ ಗಾಯ ಕಂಡು ಇದೊಂದು ಅನುಮಾನಾಸ್ಪದ ಸಾವು ಎಂದು ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು, ಸುಧಾಳ ಕಳ್ಳಾಟವನ್ನು ಬಯಲಿಗೆ ಎಳೆದಿದ್ದಾರೆ. ಆಸ್ತಿಗಾಗಿ ಸಾಕು ತಾಯಿಯನ್ನ ಮಗಳೇ ಕೊಂದಿದ್ದನ್ನು ದೃಢಪಡಿಸಿದ್ದು, ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಸುಧಾಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.