ದೈವ ನುಡಿದಂತೆ ಗುಳಿಗ ದೇವರ ಮೂಲ ವಿಗ್ರಹ ಪತ್ತೆ; ಚಾರ್ಮಾಡಿ ಘಾಟಿ ಪ್ರಯಾಣಿಕರನ್ನ ರಕ್ಷಿಸ್ತಿರೋ‌ ದೈವದ ಬಗ್ಗೆ ಹೆಚ್ಚಾಯ್ತು ನಂಬಿಕೆ

ದೈವ ನುಡಿದಂತೆ ಗುಳಿಗ ದೇವರ ಮೂಲ ವಿಗ್ರಹ ಪತ್ತೆ; ಚಾರ್ಮಾಡಿ ಘಾಟಿ ಪ್ರಯಾಣಿಕರನ್ನ ರಕ್ಷಿಸ್ತಿರೋ‌ ದೈವದ ಬಗ್ಗೆ ಹೆಚ್ಚಾಯ್ತು ನಂಬಿಕೆ
ಗುಳಿಗ ದೇವರ ಮೂಲ ವಿಗ್ರಹ ಪತ್ತೆ

ದೇವಸ್ಥಾನದಿಂದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ನೋಡಿದಾಗ ದೇವರ ಕಂಚಿನಮೂರ್ತಿ, ಗಂಟೆ ಹಾಗೂ ಕತ್ತಿ ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆ ಈ ಜಾಗದಲ್ಲಿ ಚೌಡೇಶ್ವರಿ, ಗುಳಿಗ, ಬಬ್ಬುಸ್ವಾಮಿಗೆ ಅತ್ಯಂತ ಭಯ-ಭಕ್ತಿಯಿಂದ ವಿಜೃಂಭಣೆಯಿಂದ ಪೂಜಾ-ವಿಧಿ-ವಿಧಾನಗಳು ನಡೆಯುತ್ತಿದ್ದವು.

TV9kannada Web Team

| Edited By: Ayesha Banu

May 11, 2022 | 7:36 PM

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಹೊರಟ್ಟಿಯಲ್ಲಿ ಇತಿಹಾಸ ಪ್ರಸಿದ್ಧ ಗುಳಿಗ ದೇವರ ಮೂಲ ವಿಗ್ರಹ ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಈ ಭಾಗದ ಪ್ರವಾಸಿಗರಿಗೆ ದೈವದ ಮೇಲಿದ್ದ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ಏಪ್ರಿಲ್ 24ರಂದು ಗುಳಿಗ, ಚೌಡೇಶ್ವರಿ, ಬಬ್ಬುಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ದೇವರ ಮೂಲ ವಿಗ್ರಹ ಇದೆ, ಹುಡುಕಿದರೆ ವಿಗ್ರಹ ಸಿಗಲಿದೆ ಎಂದು ಸಾವಿರ ಭಕ್ತರ‌ ಸಮ್ಮುಖದಲ್ಲಿ ದೈವ ನುಡಿದಿತ್ತು. ಹಾಗಾಗಿ ಈ ದೇವಾಲಯದ ಅಭಿವೃದ್ಧಿಯ ಪದಾಧಿಕಾರಿಗಳು ದೇವಸ್ಥಾನದಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ಆಲೇಖಾನ್ ಗ್ರಾಮದ ಎಸ್ಟೇಟ್ ಒಂದರ ಮರದ ಬುಡದಲ್ಲಿ ದೇವಿಯ ಮೂಲವಿಗ್ರಹ ಪತ್ತೆಯಾಗಿದೆ.

ದೇವಸ್ಥಾನದಿಂದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ನೋಡಿದಾಗ ದೇವರ ಕಂಚಿನಮೂರ್ತಿ, ಗಂಟೆ ಹಾಗೂ ಕತ್ತಿ ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆ ಈ ಜಾಗದಲ್ಲಿ ಚೌಡೇಶ್ವರಿ, ಗುಳಿಗ, ಬಬ್ಬುಸ್ವಾಮಿಗೆ ಅತ್ಯಂತ ಭಯ-ಭಕ್ತಿಯಿಂದ ವಿಜೃಂಭಣೆಯಿಂದ ಪೂಜಾ-ವಿಧಿ-ವಿಧಾನಗಳು ನಡೆಯುತ್ತಿದ್ದವು. ಈಗ ದೈವ ಹೇಳಿರೋ ಜಾಗದಲ್ಲೇ ಪುರಾತನ ಮೂರ್ತಿಗಳು ಸಿಕ್ಕಿರೋದು ಗುಳಿಗ ಹಾಗೂ ಚೌಡೇಶ್ವರಿಯ ಮಹಿಮೆಯನ್ನ ಇಮ್ಮಡಿಗೊಳಿಸಿದೆ. ದೈವ ಹೇಳಿದ ಜಾಗದಲ್ಲೇ ಮೂಲ ವಿಗ್ರಹ ಪತ್ತೆಯಾದ ಹಿನ್ನೆಲೆ ಭಕ್ತರು ದೇವಾಲಯವನ್ನ ಮತ್ತಷ್ಟು ಅಭಿವೃದ್ಧಿಪಡಿಸಿ ಈಗ ಸಿಕ್ಕಿರೋ ಪುರಾತನ ಮೂರ್ತಿಗಳನ್ನ ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಾಪಿಸಿ, ಹಿಂದಿನ ಗತಕಾಲದ ವೈಭವನ್ನ ಮತ್ತೆ ಮರುಕಳಿಸಲು ಯೋಚಿಸಿದ್ದಾರೆ. ಆದರೆ, ಈಗ ದೈವ ಹೇಳಿರೋ ಜಾಗದಲ್ಲೇ ಮೂಲ ವಿಗ್ರಹ ಸಿಕ್ಕಿರೋದು ಮುಂದಿನ ದಿನಗಳಲ್ಲಿ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಚೌಡೇಶ್ವರಿ ದೇವಿ ಮಹಿಮೆ: ಈ ಕ್ಷೇತ್ರದ ದೈವದ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಆದ್ರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ಯಾರಿಗ್ ತಾನೇ ಗೊತ್ತಿಲ್ಲ. ಕರ್ನಾಟಕದ ಊಟಿ ಎಂದೇ ಖ್ಯಾತಿಯಾಗಿರೋ ಬದುಕಿನ ಅನಿವಾರ್ಯತೆಯ ಹಾಸುಹೊಕ್ಕಿರೋ ಮಾರ್ಗ ಇದು. ಈ ಮಾರ್ಗದಲ್ಲಿ ನೆಲೆ ನಿಂತಿರುವ ದೇವರುಗಳೇ ಗುಳಿಗ ಹಾಗೂ ಚೌಡೇಶ್ವರಿ ದೇವಿ. ಅದರಲ್ಲೂ ಚೌಡೇಶ್ವರಿ ದೇವಿ ಬಗ್ಗೆ ಆಕೆಯ ಭಕ್ತರಿಗೆ ಇನ್ನಿಲ್ಲದ ಭಯ, ಭಕ್ತಿ. ಗುಳಿಗದ ಪಕ್ಕದಲ್ಲಿ ಚೌಡೇಶ್ವರಿ ನೆಲೆ ನಿಂತಿರುವುದರಿಂದ ಈ ದೇವರನ್ನು ಗುಳಿಗಮ್ಮ ಎಂದೇ ಭಕ್ತರು ಕರೆಯುತ್ತಾರೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ದಟ್ಟಾರಣ್ಯದ ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಚಲಿಸಲು ಗಟ್ಟಿ ಗುಂಡಿಗೆ ಬೇಕು. ಈ ಮಾರ್ಗ ಎಷ್ಟು ಸುಂದರವೋ ಅಷ್ಟೆ ಅಪಾಯ ಕೂಡ. ಆದರೆ, ಈ ದೇವಿಯ ಬಗ್ಗೆ ಗೊತ್ತಿರುವವರು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಾಗ ಕೈ ಮುಗಿಯದೇ ಮುಂದೆ ಹೋಗಲ್ಲ. ಚಾರ್ಮಾಡಿ ರಸ್ತೆಯ ಅಲೇಖಾನ್ ಹೊರಟ್ಟಿ ಗ್ರಾಮದ ಆರಂಭದಲ್ಲೇ ಈ ದೇವಿ ವಿರಾಜಮಾನವಾಗಿ ನೆಲೆ ನಿಂತಿದ್ದಾಳೆ.

ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಒಂದೇ ರಾತ್ರಿಗೆ 22 ಇಂಚಿನಷ್ಟು ಮಳೆ ಸುರಿದು ಮಲೆನಾಡೇ ಅಲ್ಲೋಲ-ಕಲ್ಲೋಲವಾಗಿತ್ತು. ಮಳೆಗಾಲದಲ್ಲಿ ಅತಿಹೆಚ್ಚು ಭೂ ಕುಸಿತ, ಗುಡ್ಡ ಕುಸಿತವಾದರೂ ಕೂಡ ಸಾವಿರಾರು ವಾಹನಗಳಲ್ಲಿ ಸಂಚರಿಸುವ ಯಾರೊಬ್ಬರಿಗೂ ಸಣ್ಣ ಅನಾಹುತ-ಅಪಾಯ ಕೂಡ ಆಗಿಲ್ಲ. ಚಾರ್ಮಾಡಿ ಘಾಟಿಯೇ ಅಲ್ಲೋಲ-ಕಲ್ಲೋಲವಾದರೂ ಈ ಪ್ರದೇಶ ಕಿಂಚಿತ್ತು ಅಲುಗಾಡಿರಲಿಲ್ಲ. ದೇವಿ ನೆಲೆಸಿರೋ ನೂರು ಮೀಟರ್ ಅಂತರದಲ್ಲಿ ರಸ್ತೆಯ ಎರಡು ಭಾಗ ಕುಸಿದಿದ್ದರೂ ಕೂಡ ಈಕೆ ನೆಲೆ ನಿಂತಿರುವ ಸ್ಥಳದ ಒಂದು ಹುಲ್ಲು ಕಡ್ಡಿಯೂ ಅಲುಗಾಡಿರಲಿಲ್ಲ. ಒಂದಿಂಚು ಭೂಮಿಯೂ ಕದಲಿರಲಿಲ್ಲ. ಚಾರ್ಮಾಡಿ ಘಾಟಿಗೆ ಅಂಟಿಕೊಂಡಂತಿರುವ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆಯ ಹಲವೆಡೆ ಬೃಹತ್ ಪ್ರಮಾಣದ ಬಂಡೆಗಳು ಬಿದ್ದರೂ ಗ್ರಾಮ, ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ, ಚಾರ್ಮಾಡಿ ಘಾಟಿಯನ್ನ ರಕ್ಷಿಸಿ-ಉಳಿಸಿ-ಜನರನ್ನೂ ಕಾಪಾಡ್ತಿರೋದೆ ಈಕೆ ಅನ್ನೋದು ಸ್ಥಳೀಯರು-ಸಾವಿರಾರು ಪ್ರವಾಸಿಗರ ನಂಬಿಕೆ. ಹಾಗಾಗಿ, ಸ್ಥಳೀಯರ ಜೊತೆ ಈ ಮಾರ್ಗದಲ್ಲಿ ಸಂಚರಿಸುವವರು ಕೂಡ ಈಕೆಗೆ ಪ್ರತಿವರ್ಷ ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ. ಇಲ್ಲಿ ಮಳೆಯಲ್ಲಿ ಸಿಲುಕಿಕೊಂಡಿದ್ದ 10 ಜನ ಅಕ್ಷರಶಃ ಸಾವನ್ನೇ ಗೆದ್ದಿದ್ದರು. ನಮ್ಮನ್ನ ಬದುಕಿಸಿದ್ದು ಬೇರ್ಯಾರು ಅಲ್ಲ ಇದೇ ಗುಳಿಗಮ್ಮ ಅನ್ನೋದು ಜನರ ಬಲವಾದ ನಂಬಿಕೆ. ಆ ನಂಬಿಕೆ ಮತ್ತಷ್ಟು ಪುಷ್ಠಿ ಸಿಗುವಂತೆ ಈಗ ದೈವ ಹೇಳಿದ ಜಾಗದಲ್ಲೇ ಮೂಲ ವಿಗ್ರಹಗಳು ಪತ್ತೆಯಾಗಿರೋದು ದೈವದ ಮೇಲಿನ ನಂಬಿಕೆಯನ್ನ ಮತ್ತಷ್ಟು ಗಟ್ಟಿಗೊಳಿಸಿದೆ.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

god idol found 1

ಗುಳಿಗ ದೇವರು

Follow us on

Related Stories

Most Read Stories

Click on your DTH Provider to Add TV9 Kannada