ಚಿಕ್ಕಮಗಳೂರು, ಜು.16: ರಾಜ್ಯದ ಹಲವೆಡೆ ಮಳೆ ಹಿನ್ನಲೆ ಅವಘಡಗಳು ಸಂಭವಿಸಿದೆ. ಅದರಂತೆ ಜಿಲ್ಲೆಯಾದ್ಯಂತ ಕೂಡ ಧಾರಾಕಾರ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು(Chikmagaluru) ಜಿಲ್ಲಾ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಿಗೆ ಮನವಿ ಮಾಡಿದೆ. ಈಗಾಗಲೇ ನದಿ ತೀರ, ತಗ್ಗುಪ್ರದೇಶ ಸೇರಿದಂತೆ ಅಪಾಯಕಾರಿ ಸ್ಥಳಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಜಿಲ್ಲೆಯಾದ್ಯಂತ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್ ಕೂಡ ನಿಷೇಧಿಸಲಾಗಿದೆ. ಮಳೆ ಕಡಿಮೆಯಾಗುವವರೆಗೂ ಪ್ರವಾಸ ಮುಂದೂಡಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮನವಿ ಮಾಡಿದ್ದಾರೆ.
ಹೌದು, ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಸೇರಿದಂತೆ ಬಯಲು ಸೀಮೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವರುಣನ ಆರ್ಭಟ ಹೇಳತೀರದಾಗಿದೆ. ಈ ಹಿನ್ನಲೆ ಶೃಂಗೇರಿ, ಕೆರೆಕಟ್ಟೆ, ನೆಮ್ಮಾರು, ಕುದುರೆಮುಖ, ಕಳಸ, ಮೂಡಿಗೆರೆ, ಚಾರ್ಮಾಡಿ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದನ್ನೂ ಓದಿ:ಚಿಕ್ಕಮಗಳೂರುನಲ್ಲಿ ನಿಲ್ಲದ ಮಳೆ; ಕಳಸಾ-ಹೊರನಾಡು ನಡುವಿನ ಹೆಬ್ಬಾರೆ ಸೇತುವೆ ಜಲಾವೃತ
ಇತ್ತ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ತುಂಗಾ ನದಿಗೆ ಇಳಿಯದಂತೆ ಪ್ರವಾಸಿಗರಲ್ಲಿ ಮನವಿ ಮಾಡಿದ್ದು, ದೇವಾಲಯದ ಬಳಿ ಒಂದು ಅಗ್ನಿಶಾಮಕ ವಾಹನ ಹತ್ತಕ್ಕೂ ಅಧಿಕ ಸಿಬ್ಬಂದಿಗಳನ್ನ ನಿಯೋಜನೆ ಮಾಡಿ, ಬೋಟ್ ವ್ಯವಸ್ಥೆ ಕೂಡ ಮಾಡಿದೆ. ಇತ್ತ ಬಾಳೆಹೊನ್ನೂರು – ಕಳಸ – ಹೊರನಾಡು ಸಂಪರ್ಕಕಲ್ಪಿಸೋ ಹೆಬ್ಬಾಳೆ ಸೇತುವೆ ರಾತ್ರಿಯಿಂದಲೇ ಜಲಾವೃತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಪೊಲೀಸರು ರಸ್ತೆಯನ್ನ ಬಂದ್ ಮಾಡಿದ್ದರಿಂದ ಕಳಸ – ಬಾಳೆಹೊನ್ನೂರು – ಹೊರನಾಡು ಸಂಪರ್ಕ ಅಸ್ತವ್ಯಸ್ತವಾಗಿತ್ತು.
ಭಾರೀ ಮಳೆಗೆ ಕೊಪ್ಪ ತಾಲೂಕಿನ ಅಬ್ಬಿ ಜಲಪಾತ, ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಒಟ್ಟಾರೆಯಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿದ ಭಾರೀ ಮಳೆ ಹತ್ತಾರು ಅವಾಂತರಗಳನ್ನ ಸೃಷ್ಟಿಸಿದ್ದು, ಮುಂಜಾಗೃತವಾಗಿ, ಪ್ರವಾಸಿಗರು ಮಳೆ ಕಡಿಮೆಯಾಗುವವರೆಗೂ ಈ ಕಡೆ ಪ್ರವಾಸಕ್ಕೆ ಬರದಂತೆ ಸೂಚನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ