Chikkamagaluru: ಅಧಿಕಾರಿಗಳ ನಿರ್ಲಕ್ಷ್ಯ; ಜಿಲ್ಲೆಯಲ್ಲಿ ಬಾಗಿಲು ಮುಚ್ಚಿದ 48 ಸರ್ಕಾರಿ ಶಾಲೆಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2023 | 9:03 AM

ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪಾಲಿನ ದೇಗುಲ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ. ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿದ್ರೆ. ಕಾಫಿನಾಡು ಚಿಕ್ಕಮಗಳೂರಿನ 27‌ ಸರ್ಕಾರಿ ಶಾಲೆಗಳಿಗೆ ಬಾಗಿಲು ತೆರೆಯುವ ಭಾಗ್ಯವೆ ಸಿಕ್ಕಿಲ್ಲ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ‌ 48ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಲಾಗಿದೆ.

Chikkamagaluru: ಅಧಿಕಾರಿಗಳ ನಿರ್ಲಕ್ಷ್ಯ; ಜಿಲ್ಲೆಯಲ್ಲಿ ಬಾಗಿಲು ಮುಚ್ಚಿದ  48 ಸರ್ಕಾರಿ ಶಾಲೆಗಳು
ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು
Follow us on

ಚಿಕ್ಕಮಗಳೂರು: ದಾನಗಳಲ್ಲಿ ಶ್ರೇಷ್ಠವಾದದ್ದು ವಿದ್ಯಾದಾನ ಎಂಬ ಮಾತಿದೆ. ಗ್ರಾಮದಲ್ಲಿ ದೇವಾಲಯ ಇಲ್ಲದೆ ಇದ್ದರೂ, ಶಾಲೆ ಇರಬೇಕೆಂದು ಹಿರಿಯರು ಹೇಳುತ್ತಾರೆ. ರಾಜ್ಯದಲ್ಲಿ ಗ್ರಾಮಕ್ಕೆ ಸರ್ಕಾರಿ ಶಾಲೆ(Government School) ಬೇಕೆಂದು ಅದೆಷ್ಟೋ ಗ್ರಾಮಗಳಲ್ಲಿ ಇಂದಿಗೂ ಹೋರಾಟ ನಡೆಯುತ್ತಲೇ ಇದೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳನ್ನ ಸರ್ಕಾರ ಬಾಗಿಲು ಹಾಕಿಸುತ್ತಿದೆ. ಹೌದು ಕೇವಲ ಎರಡು ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 48 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಗಿಲು ಹಾಕಲಾಗಿದೆ. ಕಳೆದ‌ ವರ್ಷ ಅಂದ್ರೆ 2022-2023ರ ಸಾಲಿನಲ್ಲಿ 21 ಶಾಲೆಗಳನ್ನ ಮುಚ್ಚಲಾಗಿತ್ತು. ಈ ವರ್ಷ 27 ಶಾಲೆಗಳಿಗೆ ಸರ್ಕಾರ ಬೀಗ ಹಾಕಿಸಿದೆ.

ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗೆ ಬೀಗ

ಇನ್ನು ಈ ಕುರಿತು ಡಿಡಿಪಿಐ ರಂಗನಾಥ ಸ್ವಾಮಿ ಅವರು ಮಾತನಾಡಿ ‘ಕಳೆದ‌ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸಲು ಪೋಷಕರು ಹಿಂದೇಟು ಹಾಕಿದ್ದು, ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿದೆ. ಸರ್ಕಾರಿ ಶಾಲೆಯನ್ನ ಶಿಕ್ಷಣ, ಊಟ, ಆಟದ ಮೈದಾನ ಎಲ್ಲವೂ ಸರಿಯಾಗಿದೆ ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಯನ್ನ ಮುಚ್ಚಲಾಗುತ್ತಿದೆ ಎಂದರು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ವರ್ಷದಿಂದ ವರ್ಷಕ್ಕೆ ಸರ್ಕಾರ ಸರ್ಕಾರಿ ಶಾಲೆಗಳ ಬಾಗಿಲು ಹಾಕಿಸುತ್ತಿದೆ.

ಇದನ್ನೂ ಓದಿ:ಶಾಲೆ ಮುಚ್ಚುವ ಸ್ಥಿತಿಗೂ ತಲುಪಿದೆ, ಆದರೂ ಖಾಲಿ ಕೊಠಡಿಗಳ ಸರ್ಕಾರಿ ಶಾಲೆಗೆ ಇಬ್ಬರು ಶಿಕ್ಷಕರ ನೇಮಕವಾಗಿದೆ, ಅದೂ ಗಡಿ ಜಿಲ್ಲೆಯಲ್ಲಿ!

ಸರ್ಕಾರಿ‌ ಶಾಲೆಗಳ ಮೂಲಭೂತ ಕೊರತೆ; ವಿದ್ಯಾರ್ಥಿಗಳನ್ನ ಸರ್ಕಾರಿ ಶಾಲೆಗೆ ದಾಖಲಿಸದ ಪೋಷಕರು

ಸರ್ಕಾರ ಮೂಲಭೂತ ಸೌಕರ್ಯಗಳನ್ನ ಸರ್ಕಾರಿ ಶಾಲೆಗೆ ಕಲ್ಪಿಸದ ಹಿನ್ನೆಲೆ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದು, ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ 30 ಕ್ಕೂ ಅಧಿಕ‌ ಶಾಲೆಗಳು ಬಿಳುವ ಸ್ಥಿತಿಯಲ್ಲಿದ್ದು, ಮಕ್ಕಳು ಅದರಲ್ಲಿಯೇ ಪಾಠ ಕೇಳುತ್ತಿದ್ದಾರೆ. ಶಾಲೆಗಳಲ್ಲಿ ಉತ್ತಮ ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಉತ್ತಮ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಎಂಬ ಆರೋಪಿಗಳಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಾಣಿಸುತ್ತಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ಕಾರವೇನೋ‌ ಚಿಕ್ಕಮಗಳೂರು ಜಿಲ್ಲಾಡಳಿತ ಕಳಿಸುವ ವರದಿ ನೋಡಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುತ್ತಿದೆ. ಬೀಗ ಹಾಕಿಸುವ ಬದಲು ಸರ್ಕಾರಿ ಶಾಲೆಗಳಿಗೆ ಮರು ಜೀವ ನೀಡಿ ವಿದ್ಯಾದಾನ ಮುಂದುವರಿಸಬಹುದು. ಆದ್ರೆ, ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿಗೆ ವರ್ಷದಿಂದ ವರ್ಷಕ್ಕೆ ಶಾಲೆಗಳು ಬಾಗಿಲು ಹಾಕುವ ಸಂಖ್ಯೆ ಹೆಚ್ಚುತ್ತಲೇ ಇದ್ದರೆ, ಸರ್ಕಾರಿ ಶಾಲೆಗಳು ಉಳಿಯುವುದು ಹೇಗೆ? ಶ್ರೀಮಂತರು ಖಾಸಗಿ ಶಾಲೆಗಳ ಮೊರೆ ಹೋದರೆ ಬಡ ಮಕ್ಕಳು ಏನೂ ಮಾಡಬೇಕು. ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 am, Wed, 19 July 23