ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪ 266 ಎಕರೆ ಭೂಮಿ ಖರೀದಿಸಿದ ವಿಚಾರವಾಗಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ನಿವಾಸ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ ನಡೆದಿದೆ. ಹಾಸನ ಲೋಕಾಯುಕ್ತ ಎಸ್‌ಪಿ ನೇತೃತ್ವದ ತಂಡ ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಕಾಂಗ್ರೆಸ್ ಶಾಸಕ ರಾಜೇಗೌಡಗೆ ಲೋಕಾಯುಕ್ತ ಶಾಕ್
Updated By: Ganapathi Sharma

Updated on: Sep 30, 2025 | 12:43 PM

ಚಿಕ್ಕಮಗಳೂರು, ಸೆಪ್ಟೆಂಬರ್ 30: ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ (TD Rajegowda) ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಮಂಗಳವಾರ ದಾಳಿ ನಡೆಸಿದ್ದಾರೆ. ಹಾಸನ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರ ನೇತೃತ್ವದಲ್ಲಿ ಲೋಕಾಯುಕ್ತ ತಂಡವು ಬೆಂಗಳೂರಿನ ಹೊಸಮನೆ, ಚಿಕ್ಕಮಗಳೂರಿನ (Chikkamagalur) ಬಸಾಪುರ ಹಾಗೂ ಹಲಸೂರು ತೋಟದ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಶಾಸಕ ಟಿ.ಡಿ. ರಾಜೇಗೌಡ, ಪತ್ನಿ ಪುಷ್ಪಾ ಹಾಗೂ ವಿದೇಶದಲ್ಲಿರುವ ಪುತ್ರನ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಮೂವರ ವಿರುದ್ಧವೂ ವಿಚಾರಣೆ, ತನಿಖೆ ಪ್ರಕ್ರಿಯೆ ಮುಂದುವರೆದಿದೆ.

ನಾಲ್ಕು ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಮನೆ, ಕಚೇರಿ ಹಾಗೂ ತೋಟದಲ್ಲಿ ನಿಖರ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ಮುಂದುವರೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.

ಏನಿದು ರಾಜೇಗೌಡ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ?

ಬಾಳೆಹೊನ್ನೂರು ಸಮೀಪ ಹಲಸೂರಲ್ಲಿ ಶಾಸಕ ರಾಜೇಗೌಡ 266 ಎಕರೆ ತೋಟ ಖರೀದಿ ಮಾಡಿದ್ದರು. ಉದ್ಯಮಿ, ದಿವಂಗತ ಸಿದ್ಧಾರ್ಥ್​ಗೆ ಸೇರಿದ್ದ ತೋಟ ಖರೀದಿಸಿದ್ದರು. ಈ ವಹಿವಾಟಿನ ಸಂಬಂಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿತ್ತು. ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಎಂಬವರು ದೂರು ನೀಡಿದ್ದರು.

ಶಾಸಕರು ಚುನಾವಣೆ ವೇಳೆ ಆಸ್ತಿಪಾಸ್ತಿಗೆ ಸಂಬಂಧಿಸಿ ಸಲ್ಲಿಸಿರುವ ದಾಖಲೆಗಳಿಗೂ ಭೂಮಿ ಖರೀದಿ ವಹಿವಾಟಿಗೂ ತಾಳೆಯಾಗುತ್ತಿಲ್ಲ. ಶಾಸಕರ ವಾರ್ಷಿಕ ಆದಾಯವೇ 38 ಲಕ್ಷ ರೂಪಾಯಿ ಎಂದು ಅಫಿಡವಿಟ್​​ನಲ್ಲಿ ತಿಳಿಸಿದ್ದು, ಇದು ನಿಜವಾದರೆ ನೂರಾರು ಕೋಟಿ ರೂ. ಬೆಲೆಬಾಳುವ ಭೂಮಿ ಖರೀದಿ ಹೇಗೆ ಸಾಧ್ಯ ಎಂದು ದಿನೇಶ್ ಪ್ರಶ್ನಿಸಿದ್ದರು.

ಇದನ್ನೂ ಓದಿ: ವಿರೇಂದ್ರ ಪಪ್ಪಿ, ನಂಜೇಗೌಡ, ವಿನಯ್ ಕುಲಕರ್ಣಿ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಎಂಎಲ್​​ಎಗೆ ಸಂಕಷ್ಟ

ಬೆಲೆ ಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ಅಕ್ರಮವಾಗಿ ಖರೀದಿಸಿದ ಆರೋಪ ಸಂಬಂಧ ರಾಜೇಗೌಡ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಎರಡು ವಾರಗಳ ಹಿಂದೆ ಆದೇಶ ನೀಡಿತ್ತು. ಅದರಂತೆ, ಎಫ್​ಐಆರ್ ದಾಖಲಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Tue, 30 September 25