ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ (Heavy Rain) ಆತಂಕ ಸೃಷ್ಟಿಸುತ್ತಿದ್ದು, ಕೆಲವೆಡೆ ಅನಾಹುತಕ್ಕೂ ಕಾರಣವಾಗಿದೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ದನದ ಕೊಟ್ಟಿಗೆಯ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ (Death) ದಾರುಣ ಘಟನೆ ನಡೆದಿದೆ. ದನಗಳಿಗೆ ಮೇವು ಹಾಕಲೆಂದು ಕೊಟ್ಟಿಗೆ ಒಳಗೆ ಹೋಗಿದ್ದ ಬಸವೇಗೌಡ (65ವರ್ಷ) ಸಾವಿಗೀಡಾಗಿದ್ದು, ಒಂದು ಹಸು (Cow) ಕೂಡಾ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದೆ.
ಕಳೆದ ಕೆಲ ದಿನಗಳಿಂದ ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದಿದೆ ಎನ್ನಲಾಗಿದ್ದು, ಬಸವೇಗೌಡ ಅವರ ಜತೆಗೆ ಕೊಟ್ಟಿಗೆಯೊಳಕ್ಕೆ ತೆರಳಿದ್ದ ಮೊಮ್ಮಗ ರಮೇಶ್ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ.
ಉತ್ತರ ಕನ್ನಡದಲ್ಲಿ ದೋಣಿ ಪಲ್ಟಿಯಾಗಿ ವೃದ್ಧೆ ಸಾವು
ಉತ್ತರ ಕನ್ನಡ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಪಲ್ಟಿಯಾಗಿ ವೃದ್ಧೆ ಸಾವನಪ್ಪಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ಪ್ರವಾಹ ಸ್ಥಳದಿಂದ ಸ್ಥಳಾಂತರ ವೇಳೆ ಬೀರುಗೌಡ (65 ವರ್ಷ) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ನೆರೆಯಿಂದಾಗಿ ಗ್ರಾಮದ 50ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಶಿರಸಿ ಸಮೀಪದ ತಾರೇಹಳ್ಳಿ ಎಂಬಲ್ಲಿ ಮಳೆ ಮಾಪನದಲ್ಲಿ ಕಂಡು ಬಂದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಬಿದ್ದ ಮಳೆಯ ಪ್ರಮಾಣ 37 ಸೆಂಟಿ ಮೀಟರ್ (14.56 ಇಂಚು) ಎಂದು ತಿಳಿದುಬಂದಿದ್ದು, ಮಳೆಯ ತೀವ್ರತೆಗೆ ಇದು ಸಾಕ್ಷಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಲಘು ಭೂಕುಸಿತ
ಕೊಡಗು: ಇತ್ತ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಲಘು ಭೂ ಕುಸಿತ ಸಂಭವಿಸಿದ್ದು, ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಬಿದ್ದಿಯಂಡ ರಾಣಿ ಪೊನ್ನವ್ವ ಎಂಬುವರ ಮನೆ ಭಾಗಶಃ ಹಾನಿಗೊಳಗಾಗಿದೆ. ಮನೆ ಮೇಲೆ ಮಣ್ಣು ಕುಸಿದ ಪರಿಣಾಮ ಗೋಡೆ ಜಖಂ ಆಗಿದ್ದು, ಮುಂದುವರೆದಿರುವ ಮಳೆಯ ಆರ್ಭಟದಿಂದ ಅಕ್ಕಪಕ್ಕದ ಊರಿನವರಲ್ಲೂ ಭೂ ಕುಸಿತದ ಭೀತಿ ಎದುರಾಗಿದೆ. ಕಳೆದ ಒಂದೆರೆಡು ವರ್ಷಗಳಿಂದ ಕೊಡಗು, ಮಡಿಕೇರಿ ಭಾಗದ ಜನರಿಗೆ ಮಳೆಯ ರೌದ್ರಾವತಾರ ಭಾರೀ ಭೀತಿ ಹುಟ್ಟಿಸಿದ್ದು, ಈ ಬಾರಿಯೂ ಅಂತಹದ್ದೇ ಅನಾಹುತ ಸಂಭವಿಸಿದರೆ ಏನು ಮಾಡುವುದು ಎಂದು ಚಿಂತೆಗೆ ಒಳಗಾಗಿದ್ದಾರೆ.
ಮಂಗಳೂರಿನಲ್ಲಿ ಮಳೆಗೆ ಕೊಂಚ ಬಿಡುವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಂಗಳೂರಿನಲ್ಲಿ ನಿನ್ನೆಯಿಂದ ಮಳೆ ಕೊಂಚ ಬಿಡುವು ಕೊಟ್ಟಿದೆ. ಮಂಗಳೂರು ನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಶಿರಾಡಿ, ಚಾರ್ಮಾಡಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿರಾಡಿ ಬಳಿ ರಸ್ತೆ ಕುಸಿತ ಸಂಭವಿಸಿದೆ.
ಉಡುಪಿಯಲ್ಲಿ ರೆಡ್ ಅಲರ್ಟ್
ಉಡುಪಿ: ಉಡುಪಿ ಜಿಲ್ಲೆಗೆ ಶನಿವಾರ ಬೆಳಗ್ಗಿನವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ದಿನವಿಡೀ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಸದ್ಯ ಜಿಲ್ಲೆಯಾದ್ಯಂತ ದಟ್ಟ ಮೋಡ ಕವಿದ ವಾತಾವರಣವಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಕೊಂಚ ಕಡಿಮೆಯಾಗಿದ್ದ ಮಳೆಯ ಪ್ರಮಾಣ ಇಂದು ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇನ್ನು ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ನಾಡದೋಣಿ ಮೀನುಗಾರರಿಗೆ ಎಚ್ಚರಿಕೆ ವಹಿಸಲು ತಿಳಿಸಿದೆ.
(Karnataka Heavy Rain leads to many accident one death each in Chikmagalur and Uttara Kannada)
ಇದನ್ನೂ ಓದಿ:
ಕರ್ನಾಟಕದಲ್ಲಿ ತಗ್ಗದ ಮಳೆ ಅಬ್ಬರ; ವರುಣನ ರೌದ್ರನರ್ತನಕ್ಕೆ ಹಲವೆಡೆ ರೆಡ್, ಆರೆಂಜ್ ಅಲರ್ಟ್ ಘೋಷಣೆ
Karnataka Rain: ಬೆಳಗಾವಿಯಲ್ಲಿ ಧಾರಾಕಾರ ಮಳೆ, ಪ್ರವಾಹ; ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ
Published On - 11:06 am, Fri, 23 July 21