ಚಿಕ್ಕಮಗಳೂರು, (ಡಿಸೆಂಬರ್ 01): ಹೆಲ್ಮೆಟ್ ಹಾಕದ ಕಾರಣಕ್ಕೆ ಚಿಕ್ಕಮಗಳೂರಿನಲ್ಲಿ (Chikkamagaluru) ವಕೀಲ ಪ್ರೀತಮ್ ಎನ್ನುವರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ. ಹೆಲ್ಮೆಟ್ ಹಾಕದ ಕಾರಣಕ್ಕೆ ಅಮಾನುಷ ಹಲ್ಲೆ ಆಘಾತಕಾರಿ ಎಂದು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಕೃಷ್ಣ ಎಸ್. ದೀಕ್ಷಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ವಕೀಲರಿಗೇ ಹೀಗಾದರೆ ಜನಸಾಮಾನ್ಯರ ಕಥೆ ಏನು? ಹೆಲ್ಮೆಟ್ ಹಾಕದ ಕಾರಣಕ್ಕೆ ಹೀಗೆ ಹಲ್ಲೆ ನಡೆಸಬಹುದೇ? ಎಂದು ಪ್ರಶ್ನಿಸಿದ ಹೈಕೋರ್ಟ್, ಈ ಪ್ರಕರಣದ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹಲ್ಲೆ ಕಾರಣಕ್ಕೆ ಕೋರ್ಟ್ ಬಹಿಷ್ಕರಿಸದಂತೆ ವಕೀಲರಿಗೂ ಹೈಕೋರ್ಟ್ ಮನವಿ ಮಾಡಿದ್ದು, ವಕೀಲರು ಟ್ರೇಡ್ ಯೂನಿಯನ್ ರೀತಿ ಕೋರ್ಟ್ ಬಹಿಷ್ಕರಿಸಬಾರದು. ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗುವಂತೆ ಹೈಕೋರ್ಟ್ ಸೂಚಿಸಿದೆ. ಇನ್ನು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಿರುವುದಾಗಿ ಹೈಕೋರ್ಟ್ ಗೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ನಗರ ಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ಪ್ರಕರಣ: PSI ಸೇರಿ 6 ಸಿಬ್ಬಂದಿ ಅಮಾನತು
ಹೆಲ್ಮೆಟ್ ವಿಚಾರವಾಗಿ ವಕೀಲ ಪ್ರೀತಮ್ ಎನ್ನುವರನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿತ್ತು. ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಠಾಣೆ ಮುಂದೆ ವಕೀಲರು ಪ್ರತಿಭಟನೆ ಮಾಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ವಿಕ್ರಂ ಅಮ್ಟೆ ಭೇಟಿ ನೀಡಿ ಈ ಬಗ್ಗೆ ವಿಚಾರಣೆ ನಡೆಸಿದ್ದರು. ಬಳಿಕ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಪೂಜಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದರು.
ಆದ್ರೆ, ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕೆಂದು ವಕೀಲರು ಪಟ್ಟು ಹಿಡಿದಿದ್ದರು. ಪ್ರೀತಮ್ ಬೆಂಬಲಕ್ಕೆ ನಿಂತ ರಾಜ್ಯ ಬಾರ್ ಕೌನ್ಸಿಲ್, ರಾಜ್ಯಾದ್ಯಂತ ಕೋರ್ಟ್ ಕಲಾಪಗಳನ್ನ ಬಹಿಷ್ಕರಿಸಲು ನಿರ್ಧಾರಿಸಿತ್ತು. ಅಲ್ಲದೇ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Fri, 1 December 23