ಲೋಕಸಭೆ ಚುನಾವಣೆ: ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್​ಗಳಲ್ಲಿ ಸಿಗಲ್ಲ ಬುಕಿಂಗ್

| Updated By: ಗಣಪತಿ ಶರ್ಮ

Updated on: Apr 16, 2024 | 11:18 AM

ಮುಂದಿನ ವಾರಾಂತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಣಗಳಿಗೆ ಪ್ರವಾಸ ಹೋಗುವ ಯೋಚನೆ ನಿಮ್ಮದಾಗಿದ್ದರೆ ಅದನ್ನು ರದ್ದು ಮಾಡುವುದು ಉತ್ತಮ. ಯಾಕೆಂದರೆ, ಏಪ್ರಿಲ್ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್​​ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮಾಲೀಕರಿಗೆ ಸೂಚನೆ ನೀಡಿದೆ.

ಲೋಕಸಭೆ ಚುನಾವಣೆ: ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್​ಗಳಲ್ಲಿ ಸಿಗಲ್ಲ ಬುಕಿಂಗ್
ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್​ಗಳಲ್ಲಿ ಸಿಗಲ್ಲ ಬುಕಿಂಗ್
Follow us on

ಚಿಕ್ಕಮಗಳೂರು, ಏಪ್ರಿಲ್ 16: ಲೋಕಸಭೆ ಚುನಾವಣೆಗೆ (Lok Sabha Elections) ಏಪ್ರಿಲ್ 26ರಂದು ಮತದಾನ ನಡೆಯಲಿರುವ ಕಾರಣ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್​​ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ (Home stay, Resort) ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮತದಾನದ ದಿನ ರಜೆ ಇರುವ ಕಾರಣ ವಾರಾಂತ್ಯದ ರಜೆಯ ಉಪಯೋಗ ಪಡೆದು ಜನರು ಪ್ರವಾಸಕ್ಕೆ ತೆರಳಿದರೆ ಮತದಾನ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಈ ಮೂಲಕ ನೆರವಾಗಬೇಕು ಎಂದು ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಚುನಾವಣೆ ದಿನದಂದೂ ರಜೆ ನೀಡಲಾಗುತ್ತಿದ್ದು, ಹೀಗಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜಿಲ್ಲೆಯ ಹೋಂ ಸ್ಟೆ ಹಾಗೂ ರೇಸಾರ್ಟ್ ಮಾಲೀಕರಿಗೆ ಈಗಾಗಲೇ ಲಿಖಿತ ಸೂಚನೆ ಕಳುಹಿಸಿದ್ದಾರೆ.

ಏಪ್ರಿಲ್ 26ರಂದು ರಾಜ್ಯದ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 26 ಶುಕ್ರವಾರ ಬರುತ್ತದೆ. ಮರುದಿನ ಶನಿವಾರ ಹಾಗೂ ಅದರ ಮರುದಿನ ಭಾನುವಾರ ಹೇಗೂ ರಜೆ. 3 ದಿನ ರಜೆ ಸಿಕ್ಕಿತೆಂದು ಜನ ಪ್ರವಾಸ ತೆರಳಿದರೆ ಮತದಾನ ಪ್ರಮಾಣ ಕಡಿಮೆಯಾಗಲಿದೆ ಎಂಬ ಆತಂಕ ಚುನಾವಣಾ ಆಯೋಗದ್ದಾಗಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಾರದ ಮಧ್ಯದಲ್ಲಿ (ಬುಧವಾರ) ಮತದಾನ ನಡೆಸಲಾಗಿತ್ತು. ಇದೀಗ ಲೋಕಸಭೆ ಚುನಾವಣೆ ಶುಕ್ರವಾರ ಬರುತ್ತದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಮತದಾನದ ದಿನ ಕಂಪನಿಗಳು ರಜೆ ನೀಡದೆ ಇದ್ದರೆ ಕಠಿಣ ಕ್ರಮ: ಮುಖ್ಯ ಚುನಾವಣಾಧಿಕಾರಿ

ಚಿಕ್ಕಮಗಳೂರಿನ ಪ್ರವಾಸಿ ತಾಣಗಳು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ, ಚಾರಣ ತೆರಳಲು ಅನೇಕ ಸ್ಥಳಗಳಿವೆ. ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಸೇರಿದಂತೆ ಜಿಲ್ಲೆಯ ಅನೇಕ ಪ್ರವಾಸಿ ತಾಣಗಳು ಸದಾ ಪ್ರವಾಸಿಗರನ್ನು ಸೆಳೆಯುತ್ತವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ