ಚಿಕ್ಕಮಗಳೂರು: ನಾಲಿಗೆ ಬಚ್ಚಿಟ್ಟುಕೊಂಡು ದಾಖಲೆ ಮಾಡಿದ ವ್ಯಕ್ತಿ; 40ರ ಹರೆಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ ಸೇರಿ ಸಾಧನೆ

ಗಂಟಲಿನ ಒಳಗೆ ನಾಲಿಗೆಯನ್ನು ಅದುಮಿಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಈ ಸಾಧನೆಯಲ್ಲೇ ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತಮ್ಮ ಹೆಸರನ್ನು ದಾಖಲು ಮಾಡಿದ್ದಾರೆ. ನಾಲಿಗೆಯನ್ನು ಹೀಗೆ ಗಂಟಲಿನ ಹಿಂದೆ 2 ನಿಮಿಷ 15 ಸೆಕೆಂಡ್ ಇಟ್ಟುಕೊಳ್ಳುತ್ತಾರೆ.

ಚಿಕ್ಕಮಗಳೂರು: ನಾಲಿಗೆ ಬಚ್ಚಿಟ್ಟುಕೊಂಡು ದಾಖಲೆ ಮಾಡಿದ ವ್ಯಕ್ತಿ; 40ರ ಹರೆಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ ಸೇರಿ ಸಾಧನೆ
ಮಹೇಶ್
Follow us
TV9 Web
| Updated By: preethi shettigar

Updated on:Oct 17, 2021 | 10:06 AM

ಚಿಕ್ಕಮಗಳೂರು: ಜೀವನದಲ್ಲಿ ಏನಾದರು ಸಾಧಿಸಬೇಕು ಎನ್ನುವ ಹಂಬಲ ಇದ್ದ ಚಿಕ್ಕಮಗಳೂರಿನ ಮಹೇಶ್ ಹಾಗೆ ಯೋಚಿಸುತ್ತಾ ಕುಳಿತಾಗ ಹೊಳೆದದ್ದು ಅದೊಂದು ನೂತನ ಆಲೋಚನೆ. ಇಡೀ ಭಾರತದಲ್ಲಿ ಅಂತಹ ಸಾಧನೆಯನ್ನು ಈವರೆಗೆ ಯಾರೂ ಮಾಡಿಲ್ಲ. ಅಂತಹ ಕೆಲಸವನ್ನು ನಾನು ಮಾಡಬೇಕು ಎಂದುಕೊಂಡು ಕಾಫಿನಾಡಿನ ವ್ಯಕ್ತಿಯೊಬ್ಬರು 40ರ ಹರೆಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಸಾಧನೆ ಮಾಡಿದ್ದಾರೆ. ಹಾಗಿದ್ದರೆ ಮಹೇಶ್ ಮಾಡಿದ ಸಾಧನೆ ಏನು ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ

ನಾಲಿಗೆ ಬಚ್ಚಿಟ್ಟುಕೊಂಡು ದಾಖಲೆ ಮಾಡಿದ ಕಾಫಿನಾಡಿನ ವ್ಯಕ್ತಿ! ಸಾಧನೆ ಮಾಡಬೇಕು ಎಂದು ಮನಸ್ಸು ಮಾಡಿದರೆ ಒಂದಲ್ಲೊಂದು ಅವಕಾಶಗಳು ನಮಗಾಗಿ ಕಾಯುತ್ತಿರುತ್ತದೆ. ಆದರೆ ಸಾಧಿಸುವ ಮನಸ್ಸು, ಛಲ ನಮಗಿರಬೇಕು ಅಷ್ಟೇ. ಇದಕ್ಕೆ ತಾಜಾ ಉದಾಹರಣೆ ಕಾಫಿನಾಡಿನ ಈ ವ್ಯಕ್ತಿ. ಹೆಸರು ಮಹೇಶ್. ಸಾಧನೆಯ ಕನಸು ಕಂಡ ಮಹೇಶ್, ಆರಿಸಿಕೊಂಡಿದ್ದು ಅವರ ನಾಲಿಗೆಯನ್ನೆ. ನಾಲಿಗೆಯನ್ನು ತನ್ನ ಗಂಟಲಿನ ಹಿಂದಕ್ಕೆ ಇಟ್ಕೊಂಡು ಕಿರುನಾಲಿಗೆಯನ್ನು ಮುಂದೆ ಚಾಚಿ ದಾಖಲೆ ಸೃಷ್ಠಿ ಮಾಡಿದ್ದಾರೆ.

ಗಂಟಲಿನ ಒಳಗೆ ನಾಲಿಗೆಯನ್ನು ಅದುಮಿಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಈ ಸಾಧನೆಯಲ್ಲೇ ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತಮ್ಮ ಹೆಸರನ್ನು ದಾಖಲು ಮಾಡಿದ್ದಾರೆ. ನಾಲಿಗೆಯನ್ನು ಹೀಗೆ ಗಂಟಲಿನ ಹಿಂದೆ 2 ನಿಮಿಷ 15 ಸೆಕೆಂಡ್ ಇಟ್ಟುಕೊಳ್ಳುತ್ತಾರೆ. 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಈವರೆಗೂ ಯಾರೂ ಈ ಸಾಧನೆ ಮಾಡಿಲ್ಲ. ಚಿತ್ರದುರ್ಗದ ಬಾಲಕ ಒಂದು ನಿಮಿಷ ಇಟ್ಟುಕೊಂಡರೆ, ಇವರು 2 ನಿಮಿಷ ಹದಿನೈದು ಸೆಕೆಂಡ್​ಗೂ ಹೆಚ್ಚು ಹೊತ್ತು ಇಟ್ಟುಕೊಳ್ತಾರೆ. ನೋಡುವುದಕ್ಕೆ ಇದು ಸುಲಭದಂತೆ ಕಾಣಬಹುದು. ಆದರೆ ಕಷ್ಟ ಸಾಧ್ಯ. ಹೀಗೆ ನಾಲಿಗೆಯನ್ನು ಗಂಟಲಲ್ಲಿ ಇಡುವಾಗ ಉಸಿರಾಡುವುದಕ್ಕೆ ಆಗಲ್ಲ. ಆದರೆ, ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದ ಮಹೇಶ್ ತನ್ನ ನಾಲಿಗೆಯನ್ನು ಗಂಟಳೊಳಗೆ ಅಡಗಿಸಿ ಇಟ್ಟುಕೊಳ್ಳುತ್ತಾರೆ.

ಸತತ 8 ವರ್ಷಗಳ ಪರಿಶ್ರಮದ ಫಲ ಕಳೆದ ಏಳೆಂಟು ವರ್ಷಗಳಿಂದ ಆಗಾಗ್ಗೆ ಪ್ರಾಕ್ಟೀಸ್ ಮಾಡಿಕೊಂಡು ಬರುತ್ತಿದ್ದ ಮಹೇಶ್, ಇದೀಗ ಈ ಸಾಧನೆಯಲ್ಲಿ ದೇಶಕ್ಕೆ ಮೊದಲಿಗನೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಚಿಕ್ಕಂದಿನಿಂದಲೂ ಏನಾದರು ಸಾಧನೆ ಮಾಡಬೇಕೆಂಬ ಆಸೆ ಇತ್ತು. ಇದು ಇಷ್ಟು ದೊಡ್ಡದ್ದಾಗುತ್ತೆಂದು ಗೊತ್ತಿರಲಿಲ್ಲ ಎಂದು ಹೇಳುವ ಮಹೇಶ್ ತನ್ನ ಸಾಧನೆಯನ್ನು ನೆನೆದು ಖುಷಿಪಟ್ಟಿದ್ದಾರೆ.

ಚಿಕ್ಕಂದಿನಿಂದಲೂ ಆಗಾಗ್ಗೆ ಹೀಗೆ ನಾಲಿಗೆಯನ್ನು ಗಂಟಲಿನ ಒಳಗೆ ಅಡಗಿಸಿಡುತ್ತಿದ್ದ ಮಹೇಶ್, ಕಳೆದ ಏಳೆಂಟು ವರ್ಷದಿಂದ ಅಭ್ಯಾಸ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರು ಆಶ್ಚರ್ಯ ಕೂಡ ವ್ಯಕ್ತಪಡಿಸುತ್ತಿದ್ದರು. ತಾವು ಈ ರೀತಿ ಮಾಡಲು ಹೋಗಿ ಆಗಲ್ಲಪ್ಪಾ, ಸುಸ್ತಾಗುತ್ತದೆ, ಉಸಿರುಗಟ್ಟುತ್ತದೆ ಎಂದು ಕೈಬಿಡುತ್ತಿದ್ದರು. ಆದರೆ, ಮಹೇಶ್ ಇದನ್ನು ಸುಲಲಿತವಾಗಿ ಮಾಡುತ್ತಿದ್ದರು. ಆದರೆ ಇದನ್ನು ಮಹೇಶ್‍ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರಿಸಬಹುದು ಅನ್ನೋದು ಗೊತ್ತಿರಲಿಲ್ಲ. ಅದರ ಮಾರ್ಗವೂ ಗೊತ್ತಿರಲಿಲ್ಲ. ಇದನ್ನು ಕಂಡ ಮಹೇಶ್ ರವರ ಸ್ನೇಹಿತ ಶ್ರೀಧರ್, ಬುಕ್ ಆಫ್ ರೆಕಾರ್ಡ್ಸ್​ಗೆ ವಿಡಿಯೋ, ಬಯೋಡೇಟಾವನ್ನು ಕಳಿಸಿದ್ದಾರೆ. ಈಗ ಮಹೇಶ್ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ.

ನಾಲಿಗೆಯನ್ನು ಗಂಟಳೊಳಗೆ ಅದುಮಿಟ್ಟುಕೊಂಡು ಕಿರುನಾಲಿಗೆಯನ್ನು ಹೊರಚಾಚೋದು ತುಂಬಾನೇ ಕಷ್ಟ. ಸಾಮಾನ್ಯವಾಗಿ ಬಾಯಿ ಅಗಲ ಮಾಡಿ ನಾಲಿಗೆಯನ್ನು ಹೊರಚಾಚಿ, ಕಿರುನಾಲಿಗೆಯನ್ನು ನೋಡುವ ಪ್ರಯತ್ನ ಮಾಡಬಹುದು. ಆದರೆ ನಾಲಿಗೆಯನ್ನು ಗಂಟಲಲ್ಲಿ ಅಡಗಿಸಿಟ್ಟುಕೊಳ್ಳೊದು ಕಷ್ಟಸಾಧ್ಯ. ಸಾಲದಕ್ಕೆ ಜೀವಕ್ಕೆ ಸಂಚಕಾರ ತರುವಂತಹ ಇಂತಹ ಪ್ರಯತ್ನವನ್ನು 2 ನಿಮಿಷ 15 ಸೆಕೆಂಡ್ ಇಟ್ಟುಕೊಳ್ಳುವ ದಾಖಲೆಯನ್ನು ಭಾರತದಲ್ಲೇ ಯಾರೂ ಮಾಡಿಲ್ಲ ಅನ್ನೋದು ಮತ್ತೊಂದು ಹೆಗ್ಗಳಿಕೆ.

ವರದಿ: ಪ್ರಶಾಂತ್

ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಲಕನ ಹೆಸರು ಸೇರ್ಪಡೆ

17 ಚಾಕ್​ಪೀಸ್​ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯುವಕನ ಸಾಧನೆ

Published On - 9:59 am, Sun, 17 October 21