ಚಿಕ್ಕಮಗಳೂರು: ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಎಂ.ಪಿ ಕುಮಾರಸ್ವಾಮಿ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಶಾಸಕ. ಮೂಡಿಗೆರೆ ಸಮೀಪದ ಕೆಲ್ಲೂರಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೊಸ ಮನೆಯನ್ನು ಶಾಸಕ ಕುಮಾರಸ್ವಾಮಿ ನಿರ್ಮಿಸುತ್ತಿದ್ದು, ಈಗಾಗಲೇ ಮುಗಿಯುವ ಹಂತದಲ್ಲಿದೆ. ಅದ್ದೂರಿ ಮನೆ ಕಟ್ಟಿಸಲು ಅಕ್ರಮವಾಗಿ ಮರಳನ್ನು ತರಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮುಗ್ರಹಳ್ಳಿ ಗ್ರಾಮದಿಂದ ಮರಳು ಶಾಸಕರ ಮನೆಗೆ ಸಾಗಾಟವಾಗುತ್ತಿರುವ ದೃಶ್ಯವನ್ನು ಸ್ಥಳೀಯರಾದ ಚಂದ್ರು ಒಡೆಯರ್ ಎಂಬುವವರು ಸೆರೆ ಹಿಡಿದಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಈ ರೀತಿಯಾಗಿ ಅಕ್ರಮವಾಗಿ ಮರಳನ್ನು ಕದ್ದು ಸಾಗಾಟ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಾಣ ಮೌನಕ್ಕೆ ಶರಣಾಗಿರುವ ಅಧಿಕಾರಿ ವರ್ಗದ ವಿರುದ್ಧವೂ ಜನರು ಕಿಡಿಕಾರಿದ್ದಾರೆ.
ಮುಗ್ರಹಳ್ಳಿ ಟು ಕೆಲ್ಲೂರು ಅಕ್ರಮ ಮರಳು ಸಾಗಾಟ
ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ 2019ರಲ್ಲಿ ಮಹಾಮಳೆಗೆ ಸೇತುವೆ ಕುಸಿದಿದ್ದು, ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಸೇತುವೆಗಾಗಿ ಮರಳನ್ನು ಸಂಗ್ರಹ ಮಾಡಲಾಗಿದೆ. ಸೇತುವೆಗೆ ಬಳಕೆಯಾಗಬೇಕಾದ ಇದೇ ಮರಳು, ರಾಜಾರೋಷವಾಗಿ ಶಾಸಕ ಎಂ.ಪಿ ಕುಮಾರಸ್ವಾಮಿ ಮನೆಗೆ ಸಾಗಾಟ ಆಗ್ತಿದೆ. ಮೂಡಿಗೆರೆ ತಾಲೂಕಿನ ಉದುಸೆ ಎಂಬ ಗ್ರಾಮದಲ್ಲಿ ಈ ಹಿಂದೆ ಮರಳು ತೆಗೆಯಲು ರಾಯಲ್ಟಿ ನೀಡಲಾಗಿತ್ತು. ಆದರೆ ಇದೀಗ ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಯಾವ ಪ್ರದೇಶದಲ್ಲೂ ಮರಳು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವಕಾಶ ನೀಡಿಲ್ಲ. ಈ ಮಧ್ಯೆ ಅಕ್ರಮವಾಗಿ ಶಾಸಕರ ಮನೆಗೆ ಮರಳು ಸಾಗಾಟ ಆಗುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಜನಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳಿಗೆ ಒಂದು ಕಾನೂನಾ?
ಬಹಳ ಹಿಂದಿನಿಂದಲೂ ಶಾಸಕರು ಅಕ್ರಮವಾಗಿ ಮರಳನ್ನು ಮನೆಗೆ ತರಿಸಿಕೊಳ್ಳುತ್ತಿದ್ದಾರೆ ಎನ್ನುವ ಗುಸುಗುಸು ಪಿಸುಪಿಸು ಕೇಳಿ ಬರುತ್ತಿತ್ತು. ಆದರೆ ರಾತ್ರೋರಾತ್ರಿ ಮರಳು ಶಾಸಕರ ಮನೆಗೆ ಸಾಗಾಟ ಆಗಿದ್ದರಿಂದ ಯಾವುದೇ ಸಾಕ್ಷಿ ಪುರಾವೆಗಳು ಸಿಕ್ಕಿರಲಿಲ್ಲ. ಆದರೆ ಇದೀಗ ಮರಳು ಸಾಗಾಟದ ವಿಡಿಯೋವನ್ನು ಮಾಡಿ, ಜನಪ್ರತಿನಿಧಿಯಾದ ನೀವೇ ಈ ರೀತಿ ಮರಳು ಲೂಟಿ ಮಾಡೋದು ಎಷ್ಟು ಸರಿ ಅಂತಾ ಜನರು ಪ್ರಶ್ನೆ ಮಾಡಿದ್ದಾರೆ. ಜನಸಾಮಾನ್ಯರು ಒಂದು ಹಿಡಿ ಮರಳು ತೆಗೆದುಕೊಂಡ್ರೂ ಕೇಸ್ ಮೇಲೆ ಕೇಸ್ ಹಾಕುವ ಅಧಿಕಾರಿ ವರ್ಗ, ರಾಜಾರೋಷವಾಗಿ ಶಾಸಕರ ಮನೆಗೆ ಅಕ್ರಮವಾಗಿ ಮರಳು ಸಾಗಾಟ ಆಗ್ತಾ ಇದ್ರೂ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರಿಗೊಂದು ಕಾನೂನಾ ಜನಪ್ರತಿನಿಧಿಗಳಿಗೊಂದು ಕಾನೂನಾ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಇಲ್ಲಿಯವರೆಗೂ ಸುಮ್ಮನಾಗಿದ್ದ “ನಾನಾ ಇಲಾಖೆಗಳು” ಇನ್ನಾದ್ರೂ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯ ಮಾಡ್ತಾರಾ ಎನ್ನುವುದನ್ನು ಜನಸಾಮಾನ್ಯರು ಕುತೂಹಲದಿಂದಲೇ ನೋಡುತ್ತಿದ್ದಾರೆ.
ಇದನ್ನೂ ಓದಿ:
ಚಿತ್ರದುರ್ಗ: ಅಕ್ರಮ ಮರಳು ಸಾಗಾಣಿಕೆ ಆರೋಪ; ಅಂತರ್ಜಲ ಮಟ್ಟದ ಕುಸಿತಕ್ಕೆ ಕಾರಣವಾಗುತ್ತಿರುವವರ ವಿರುದ್ಧ ರೈತರ ಆಕ್ರೋಶ
ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ
Published On - 9:06 am, Tue, 28 September 21