ಚಿಕ್ಕಮಗಳೂರು: ಅಂಗಡಿಗೆ ಖಾಸಗಿ ಬಸ್ ಡಿಕ್ಕಿ, ವಿದ್ಯಾರ್ಥಿನಿ ಸಾವು, ನಾಲ್ವರು ಗಂಭೀರ
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ನಡೆದಿದೆ. ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತ ಐವರು ವಿದ್ಯಾರ್ಥಿಗಳು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗದ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.
ಚಿಕ್ಕಮಗಳೂರು, ಸೆ.7: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಗುದ್ದಿದ ಪರಿಣಾಮ ಸ್ಥಳದಲ್ಲಿ ಬಸ್ಗೆ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಜಿಲ್ಲೆಯ (Chikkamagaluru) ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ನಡೆದಿದೆ. 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ತುಳಸಿ (14) ಮೃತ ವಿದ್ಯಾರ್ಥಿನಿ. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ವೇಗದ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.
ಶಾಲೆಗೆ ತೆರಳಲು ಬಸ್ಗಾಗಿ ವಿದ್ಯಾರ್ಥಿಗಳು ಅಂಗಡಿ ಬಳಿ ಕಾಯುತ್ತಿದ್ದರು. ಈ ವೇಳೆ ತರೀಕೆರೆಯಿಂದ ಲಿಂಗದಹಳ್ಳಿಗೆ ಕಡೆಗೆ ವೇಗವಾಗಿ ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ವಿದ್ಯಾರ್ಥಿಗಳು ನಿಂತಿದ್ದ ಸಮೀಪದ ಅಂಗಡಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ತುಳಸಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ.
ಖಾಸಗಿ ಬಸ್ಸಿನ ಮೇಲೆ ಕಲ್ಲು ತೂರಾಟ
ಘಟನೆಯಿಂದ ಕೆರಳಿದ ಸ್ಥಳೀಯರು ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಸ್ಸಿನ ಹಿಂಭಾಗದ ಗ್ಲಾಸ್ ಪುಡಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ತರೀಕೆರೆ ಠಾಣಾ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 am, Thu, 7 September 23