
ಚಿಕ್ಕಮಗಳೂರು, ಡಿಸೆಂಬರ್ 9: ಡಿಸೆಂಬರ್ 5 ರ ರಾತ್ರಿ ಚಿಕ್ಕಮಗಳೂರಿನ (Chikkamagaluru) ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನೆತ್ತರು ಹರಿದಿತ್ತು. ದತ್ತಜಯಂತಿಗೆ ಅಳವಡಿಸಿದ್ದ ಬ್ಯಾನರ್ ತೆರವು ವೇಳೆ ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಗಲಾಟೆ ಆಗಿತ್ತು. ಇದೇ ಗಲಾಟೆಯಲ್ಲಿ ಗಣೇಶ್‌ಗೌಡನನ್ನು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಬಜರಂಗದಳದ ಕಾರ್ಯಕರ್ತ ಸಂಜಯ್, ನಾಗಭೂಷಣ್ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲ ಇಬ್ಬರನ್ನು ಬಂಧಿಸಲಾಗಿದೆ. ಆದರೆ ಇದೀಗ ಆರೋಪಿಗಳು ಮೃತ ಗಣೇಶ್‌ಗೌಡನ ಮೇಲೆಯೇ ಪ್ರತ್ಯಾರೋಪ ಮಾಡಿದ್ದಾರೆ.
ಡಿಸೆಂಬರ್ 5 ರ ರಾತ್ರಿ ಸಖರಾಯಪಟ್ಟಣದ ಮಠದ ಗುತ್ತಿ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ಹಾಗೂ ಗಣೇಶ್‌ಗೌಡ ಟೀಂ ನಡುವೆ ಗ್ಯಾಂಗ್‌ವಾರ್ ಆಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಬ್ಯಾನರ್, ಫ್ಲೆಕ್ಸ್ ತೆರುವ ಮಾಡುವಾಗ, ‘‘ಇವರದ್ದು ಜಾಸ್ತಿಯಾಯ್ತು’’ ಎಂದು ಗಣೇಶ್ ಗೌಡ ಗಲಾಟೆ ಮಾಡಿದ್ದ ಎನ್ನಲಾಗಿದೆ.
ಟ್ರಾಕ್ಟರ್‌ನಲ್ಲಿ ಬಂದ ನಾನು ಗಲಾಟೆ ವಿಷಯವಾಗಿ ಗಣೇಶ್‌ಗೆ ಪ್ರಶ್ನೆ ಮಾಡಿದ್ದೆ ಎಂದು ಸಂಜಯ್ ಹೇಳಿದ್ದಾನೆ. ಇದರಿಂದ ಗಣೇಶ್ ಮತ್ತು ನಮ್ಮ ನಡುವೆ ಜಗಳವಾಯಿತು . ಬಳಿಕ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಸಂದೀಪ್ ಜೊತೆ ಗಣೇಶ್ 8 ಕ್ಕೂ ಅಧಿಕ ಯುವಕರೊಂದಿಗೆ ಬಂದು ಮಚ್ಚಿನಿಂದ ಹಲ್ಲೆ ಮಾಡಿದ್ದ ಎಂದು ನಾಗಭೂಷಣ್ ಹಾಗೂ ಸಂಜಯ್ ಆರೋಪಿಸಿದ್ದಾರೆ. ಇವರ ದೂರು ಆಧರಿಸಿ ಮೃತ ಗಣೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ಸಂದೀಪ್, ಅಪ್ಪು, ಚಂದು,ಅಭಿ, ಬಿಂದು, ರೋಷನ್ ಸೇರಿದಂತೆ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಸಖರಾಯಪಟ್ಟಣದಲ್ಲಿ ಡಿಸೆಂಬರ್ 5ರ ರಾತ್ರಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ಕೊಲೆಯೊಂದಿಗೆ ಅಂತ್ಯವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡರನ್ನು ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಗಲಾಟೆಯಲ್ಲಿ ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿತ್ತು. ನಂತರ ಬಜರಂಗದಳದ ಕಾರ್ಯಕರ್ತ ಸಂಜಯ್, ನಾಗಭೂಷಣ್ ಸೇರಿದಂತೆ ಹಲವರನ್ನು ಬಂಧಿಸಿದ್ದ ಪೊಲೀಸರು, ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ, ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ