ಚಿಕ್ಕಮಗಳೂರು: ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ತಹಶೀಲ್ದಾರ್ ಮದುವೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ಪಟ್ಟಣದಲ್ಲಿ ನಡೆದಿದೆ. ಕಾನೂನನ್ನು ಗಾಳಿಗೆ ತೂರಿದ ಎನ್.ಆರ್ ಪುರ ತಹಶೀಲ್ದಾರ್ ಗೀತಾ, ಗ್ರಾಮ ಲೆಕ್ಕಿಗ ಶ್ರೀನಿಧಿ ಎಂಬುವವರನ್ನು ಮದುವೆಯಾಗಿದ್ದಾರೆ.
ಈಗಾಗಲೇ ಕಡೂರು ಮೂಲದ ಶಿಕ್ಷಕಿಯನ್ನು ಮದುವೆಯಾಗಿರುವ ಶ್ರೀನಿಧಿ, ವಿಚ್ಚೇದನ ಪಡೆದುಕೊಳ್ಳುವ ಮುನ್ನವೇ ತಹಶೀಲ್ದಾರ್ ಜೊತೆ ವಿವಾಹವಾಗಿದ್ದಾನೆ. ಹೀಗಾಗಿ ತಹಶೀಲ್ದಾರ್ ಗೀತಾಗೆ ಚಿಕ್ಕಮಗಳೂರು ಡಿಸಿ ನೋಟಿಸ್ ನೀಡಿದ್ದಾರೆ.
ಜುಲೈ 19ರಂದು ಎನ್.ಆರ್ ಪುರದಲ್ಲಿ ತಹಶೀಲ್ದಾರ್ ಗೀತಾ ಹಾಗೂ ಗ್ರಾಮ ಲೆಕ್ಕಿಗ ಶ್ರೀನಿಧಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಹಿಂದೆ ಮದುವೆಯಾಗಿ, ತಹಶೀಲ್ದಾರ್ ಗೀತಾ ವಿಚ್ಛೇದನ ಪಡೆದಿದ್ದಾರೆ. ಆದರೂ ಶ್ರೀನಿಧಿ ಜೊತೆ ಮದುವೆ ವೇಳೆ ಅವಿವಾಹಿತೆ ಎಂದು ಗೀತಾ ತೋರಿಸಿರುವುದು ಕೂಡ ಈ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರು: ಸರ್ಕಾರಿ ಕಚೇರಿಗೆ ನುಗ್ಗಿ ಕೊಲೆ ಬೆದರಿಕೆ
ಸರ್ಕಾರಿ ಕಚೇರಿಗೆ ನುಗ್ಗಿ ಕೆಎಎಸ್ ಅಧಿಕಾರಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಒಡ್ಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕೊಲೆ ಬೆದರಿಕೆ ಹಾಕಿದ್ದ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಟಿ. ಕುಮಾರ್, ಇತರರ ವಿರುದ್ಧ ಬಿ.ಕೆ. ನಾಗರಾಜಪ್ಪ ದೂರು ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ಸಲ್ಲಿಕೆ ಮಾಡಲಾಗಿದೆ.
ಹಾವೇರಿ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬಸವಣ್ಣನ ಮೂರ್ತಿ ತೆರವು
ರಾತ್ರೋರಾತ್ರಿ ಪ್ರತಿಷ್ಠಾಪನೆ ಆಗಿದ್ದ ಬಸವಣ್ಣನ ಮೂರ್ತಿಯನ್ನು ತೆರವುಗೊಳಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಮುಖ ವೃತ್ತದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಬಸವಣ್ಣನ ಮೂರ್ತಿಯನ್ನು ಅಧಿಕಾರಿಗಳು ತೆರವು ಮಾಡಿಸಿದ್ದಾರೆ. ರಾಜಕೀಯ ನಾಯಕರ ಮೂರ್ತಿ ಪ್ರತಿಷ್ಠಾಪನೆಗೆ ಗ್ರಾಮದಲ್ಲಿ ಯೋಜನೆ ರೂಪಿಸಿದ್ದಾರೆ ಎಂದುಕೊಂಡು ಗ್ರಾಮದ ಕೆಲವರು ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನಂತರ ಮೂರ್ತಿ ತೆರವು ಕಾರ್ಯ ನಡೆದಿದೆ. ಸರಕಾರದ ಅನುಮತಿ ಪಡೆದು ಗೌರವಯುತವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡೋಣ ಎಂದು ತಿಳಿ ಹೇಳಿ ಅಧಿಕಾರಿಗಳು ಮೂರ್ತಿ ತೆರವು ಮಾಡಿಸಿದ್ದಾರೆ. ಮೊನ್ನೆ ರಾತ್ರಿ ಪ್ರತಿಷ್ಠಾಪನೆ ಆಗಿದ್ದ ಮೂರ್ತಿಯನ್ನು, ನಿನ್ನೆ ರಾತ್ರಿ ತೆರವು ಮಾಡಿಸಲಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ:
ಕೇರಳದ ರಹಸ್ಯ ಪ್ರೇಮಿಗಳ ವಿವಾಹ; 10 ವರ್ಷದ ನಿಗೂಢ ಪ್ರೀತಿಗೆ ಸಿಕ್ತು ಅಧಿಕೃತ ಮುದ್ರೆ
ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡ ಗಂಡ ವಿಟಪುರುಷನಾದ; ನೊಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
Published On - 12:36 pm, Tue, 21 September 21