ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ಗಂಡ ವಿಟಪುರುಷನಾದ; ನೊಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

ಲಾಕ್​ಡೌನ್ ಎಂಬುದು ಕೇವಲ ಆರ್ಥಿಕ ಹೊಡೆತ ಒಂದನ್ನೇ ಅಲ್ಲದೇ ಇಂತಹ ಘಟನೆಗಳಿಗೂ ದಾರಿಯಾಯಿದೆ. ಲಾಕ್​ಡೌನ್​ನಿಂದ ಉಂಟಾದ ಅತ್ಯಂತ ಅಪರೂಪದ, ಆದರೆ ಅಷ್ಟೇ ಬೇಸರ ಹುಟ್ಟಿಸುವ ಈ ಸುದ್ದಿ ಇದೀಗ ಎಂಬುದು ಬೆಳಕಿಗೆ ಬಂದಿದೆ.

  • TV9 Web Team
  • Published On - 22:19 PM, 12 Apr 2021
ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ಗಂಡ ವಿಟಪುರುಷನಾದ; ನೊಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
ವಿಚ್ಛೇದನ

ಬೆಂಗಳೂರು: ಲಾಕ್​ಡೌನ್​ನ ಅತ್ಯಂತ ಅಪರೂಪದ, ಆದರೆ ಅಷ್ಟೇ ಬೇಸರ ಹುಟ್ಟಿಸುವ ವಿಷಯವೊಂದು ಸುದ್ದಿಯಾಗಿದೆ. ಬೆಂಗಳೂರಿನ 24 ವರ್ಷದ ಮಹಿಳೆಯೋರ್ವಳು ತನ್ನ ಗಂಡನಿಂದ ವಿಚ್ಛೇದನ ಕೇಳಿದ್ದಾಳೆ. ವಿಚ್ಛೇದನ ಕೇಳಿದ್ದು ಸುದ್ದಿಯಲ್ಲ, ಅದೊಂದು ಖಾಸಗಿ ವಿಷಯ. ಆದರೆ ಆಕೆ ವಿಚ್ಛೇದನ ಕೇಳಲು ಕಾರಣ ಮಾತ್ರ ಬೇಸರ ಹುಟ್ಟಿಸುವ ಸಂಗತಿ. ಗಂಡ ವಿಟನಾಗಿ (ಮೇಲ್ ಎಸ್ಕಾರ್ಟ್) ಕೆಲಸ ಮಾಡುತ್ತಿದ್ದಾನೆ ಎಂದು ನಗರದ ಮಹಿಳೆಯೋರ್ವಳು ಗಂಡನಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದಾಳೆ.

2017ರಲ್ಲಿ ಬಿಪಿಒ ಒಂದರ ಕ್ಯಾಂಟೀನ್​ನಲ್ಲಿ ಪರಿಚಿತರಾದ ಇವರೀರ್ವರಿಗೂ ಪರಸ್ಪರ ಮನಸಾಯಿತು. ಎರಡು ವರ್ಷಗಳ ಕಾಲ ಪ್ರೀತಿಸಿ 2019ರಲ್ಲಿ ಮದುವೆಯೂ ಆದರು. ಆದರೆ ಕೊರೊನಾ ವೈರಸ್ ತಡೆಯಲು ಘೋಷಿಸಿದ ಲಾಕ್​ಡೌನ್ ಇವರ ದಾಂಪತ್ಯಕ್ಕೆ ಮುಳುವಾಯಿತು. ಲಾಕ್​ಡೌನ್ ಎಷ್ಟೋ ಜನರ ಆರ್ಥಿಕ ಪರಿಸ್ಥಿತಿಗೆ ಮುಳ್ಳಾಗಿ ಪರಿಣಮಿಸಿದರೆ, ಈ ಪ್ರೇಮಿಗಳ ಪಾಲಿಗೆ ಮಾತ್ರ ಇನ್ನೊಂದು ರೂಪದಲ್ಲಿ ಖಳನಾಯಕನಾಯಿತು. ಗಂಡ ಬಿಪಿಒ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕೊರೊನಾ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್​ಡೌನ್ ಈತನ ಕೆಲಸ ಕಸಿಯಿತು. ಕೆಲಸ ಇಲ್ಲದೇ ಕಂಗಾಲಾಗಿ ಕೂತವ ವೇಶ್ಯಾವಾಟಿಕೆಯ ಜಾಲದೊಳಗೆ ಸಿಲುಕಿದ. ಹಣ ಗಳಿಸಲು ವಿಟನಾಗಿ ಕೆಲಸ ಆರಂಭಿಸಿದ. ಈ ವಿಷಯ ಈತನ ಪತ್ನಿಗೆ ತಿಳಿದಿರಲಿಲ್ಲ. ಆದರೆ ಬೆಂಕಿ ಹೆಚ್ಚು ದಿನ ಹೊಗೆಯಾಡದೇ ಇರಲಾರದು ಅಲ್ಲವೇ?

ಕೆಲಸ ಕಳೆದುಕೊಂಡ ಪತಿ ವಿಟನಾಗಿ ಕೆಲಸ ಮಾಡುತ್ತಿರುವುದು ಕೆಲವೇ ತಿಂಗಳಲ್ಲಿ ತಿಳಿಯಿತು. ಪತಿ ತನ್ನ ಮೊಬೈಲ್ ಮತ್ತು ಲ್ಯಾಪ್​ಟಾಪ್​ಗಳನ್ನು ಮೊದಲಿನಂತೆ ತೋರಿಸದೇ ಗುಟ್ಟು ಮಾಡುತ್ತಿದ್ದ. ತನ್ನ ಸಹೋದರರ ಸಹಾಯದಿಂದ ಗಂಡನ ಮೊಬೈಲ್​ ಪಾಸ್​ವರ್ಡ್​ನ್ನು ಕೊನೆಗೂ ಹೇಗೋ ಕಂಡುಹಿಡಿದ ಪತ್ನಿ, ಅದರಲ್ಲಿ ತನ್ನ ಪತಿ ಓರ್ವ ಮಹಿಳೆಯ ಜತೆ ನಗ್ನನಾಗಿ ಲೈಂಗಿಕ ಕ್ರಿಯೆಯಲ್ಲಿ ನಿರತನಾಗಿರುವ ಚಿತ್ರ ಕಂಡಳು. ಆ ಚಿತ್ರಗಳಲ್ಲಿ ಇರುವುದು ತಾನಲ್ಲ ಎಂದು ಪತಿ ವಾದಿಸಿದ. ಆದರೆ ಕೊನೆಗೂ ತಾನು ವಿಟನಾಗಿ ಕೆಲಸ ಮಾಡುತ್ತಿರುವುದನ್ನು ಬಾಯ್ಬಿಟ್ಟ. ತಾನು ನೀಡುವ ಸೇವೆಗೆ ಪ್ರತಿ ಗ್ರಾಹಕರಿಗೂ 3ರಿಂದ 5 ಸಾವಿರ ಹಣ ವಿಧಿಸುತ್ತೇನೆ. ಅಲ್ಲದೇ ನಗರದಲ್ಲಿ ಹಲವು ಗ್ರಾಹಕರನ್ನು ಹೊಂದಿದ್ದೇನೆ ಎಂದು ತಿಳಿಸಿದ.

ಗಂಡ ವಿಟ ಪುರುಷನಾಗಿ ಕೆಲಸ ಮಾಡುತ್ತಾನೆ ಎಂದು ತಿಳಿದ ಯಾವುದೇ ಪತ್ನಿಗೂ ಆಘಾತವಾಗದೇ ಇರದು. ಇಲ್ಲೂ ಹಾಗೆಯೇ ಆಯಿತು. ಈಕೆಯ ಮನಸೂ ಜರ್ಝರಿತವಾಯಿತು. ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿ ಮುಂದೆ ತಾನು ಏನೆಲ್ಲಾ ಮಾಡಬಹುದು ಎಂದು ತಿಳಿದುಕೊಂಡಳು. ಗಂಡನಿಂದ ಬೇರ್ಪಡುವ ನಿರ್ಧಾರ ಮಾಡಿದಳು. ಈ ವಿಷಯ ತಿಳಿದ ಪತಿಗೂ ಆಘಾತವಾಯಿತು. ‘ನನ್ನ ಹೆಂಡತಿಯನ್ನು ನಾನು ಪ್ರೀತಿಸುತ್ತೇನೆ. ಆದರೆ ಮಾಡುತ್ತಿರುವ ಕೆಲಸವನ್ನೂ ಪ್ರೀತಿಸುತ್ತೇನೆ, ಆ ಕೆಲಸ ಮಾಡುವುದನ್ನು ರಹಸ್ಯವಾಗಿಯೇ ಇಟ್ಟುಕೊಳ್ಳಲು ಬಯಸುತ್ತೇನೆ’ ಎಂದು ಪರಸ್ಪರ ಕೂತು ಸಂವಾದ ನಡೆಸಿದಾಗ ನಿರ್ಣಯಿಸಿದ. ವಿಟ ಪುರುಷನಾಗಿ ಕೆಲಸ ಮಾಡುತ್ತಲೇ ಹೆಂಡತಿಯ ಜತೆ ಸಂಸಾರ ನಡೆಸುತ್ತೇನೆ ಎಂದ. ಆದರೆ  ಪತ್ನಿಗೆ ಅದು ಸಹ್ಯವಾಗಲಿಲ್ಲ. ಮಹಿಳಾ ಸಹಾಯವಾಣಿಯ ಮೂಲಕ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದಳು.

ಹೀಗೆ ಕೊರೊನಾ ಲಾಕ್​ಡೌನ್ ಎಂಬುದು ಒಂದು ಸಂಸಾರದ ರಥವನ್ನು ಇಬ್ಬಂದಿಗೆ ಸಿಲುಕಿಸಿತು. ಆತ ಕೆಲಸ ಕಳೆದುಕೊಳ್ಳದೇ ಇದ್ದಿದ್ದರೆ ಪತ್ನಿಗೆ ಸಹ್ಯ ಎನಿಸದ ಇನ್ನೊಂದು ಕೆಲಸಕ್ಕೆ ಕೈಹಾಕುತ್ತಿರಲಿಲ್ಲವೇನೋ. ಲಾಕ್​ಡೌನ್ ಎಂಬುದು ಕೇವಲ ಆರ್ಥಿಕ ಹೊಡೆತ ಒಂದನ್ನೇ ಅಲ್ಲದೇ ಇಂತಹ ಘಟನೆಗಳಿಗೂ ದಾರಿಯಾಯಿದೆ. ಲಾಕ್​ಡೌನ್​ನಿಂದ ಉಂಟಾದ ಅತ್ಯಂತ ಅಪರೂಪದ, ಆದರೆ ಅಷ್ಟೇ ಬೇಸರ ಹುಟ್ಟಿಸುವ ಈ ಸುದ್ದಿ ಇದೀಗ ಎಂಬುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ

ಇದನ್ನೂ ಓದಿ: ಮದುವೆಯಾದ ಮರುದಿನವೇ ಹೆಂಡತಿಗೆ ಕನ್ಯತ್ವ ಪರೀಕ್ಷೆ; ಫೇಲ್ ಆದವಳಿಗೆ ಗಂಡ ಮಾಡಿದ್ದೇನು?

(Bengaluru woman demands divorce after husband works as male escort after his job loss in Covid 19 lockdown)